

ನಿಮ್ಮ ಮನಸ್ಸಿಗೆ ತೋಚಿದ್ದು ಮಾಡಿ-ಇಂತಹದೊಂದು ಸಂದೇಶ ಹೊತ್ತು ತೆರೆಗೆ ಬಂದಿದೆ ಆಮೀರ್ ಖಾನ್‌ರ ೩ ಈಡಿಯಟ್ಸ್. ಯುವಜನರ ಕನಸು, ವಾಸ್ತವ, ಶಿಕ್ಷಣ ವ್ಯವಸ್ಥೆ, ಪಾಲಕರ ಒತ್ತಡ...ಹೀಗೆ ನೂರಾರು ವಿಷಯಗಳನ್ನು ಒಂದೇ ಚಿತ್ರದ ಮೂಲಕ ಕಲರ್‌ಫುಲ್ ಆಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಅಂದ ಹಾಗೆ ಈ ಚಿತ್ರದ ಮೂಲ ಪ್ರೇರಣೆ ಖ್ಯಾತ ಲೇಖಕ ಚೇತನ್ ಭಗತ್‌ರ ಬೆಸ್ಟ್ ಸೆಲ್ಲರ್ ಕಾದಂಬರಿ `ಫೈ ಪಾಯಿಂಟ್ ಸಮ್ ವನ್'. ಕಾದಂಬರಿ ಚಿತ್ರವಾಗುವಾಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಚೇತನ್‌ರ ಬರಹದಲ್ಲಿ ಕಾಣುವ ಸ್ವಾರಸ್ಯ, ಕ್ಲೀಷೆ ಹಾಗೂ ವಿನೋದ ಚಿತ್ರದುದ್ದಕ್ಕೂ ಇದೆ.
ಮೂವರು ಸ್ನೇಹಿತರು ನೂರಾರು ಆಕಾಂಕ್ಷೆ ಹೊತ್ತು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಾಗ ನಡೆಯುವ ಘಟನಾವಳಿಗಳು ಚಿತ್ರದ ಹೂರಣ. ಸ್ನೇಹಿತರನ್ನು ಪ್ರೇರೆಪಿಸುವ, ಹೊಸತನಕ್ಕೆ ತುಡಿಯುವ `ಆಲ ಇಸ್ ವೆಲ್' ಎನ್ನುತ್ತ ನಗೆ ಉಕ್ಕಿಸುವ ಯುವಕನಾಗಿ ಆಮೀರ್ ಮಿಂಚಿದ್ದಾರೆ. ಪ್ರತಿ ದೃಶ್ಯದಲ್ಲೂ ವಿಭಿನ್ನ ಹಾವಭಾವದ ಮೂಲಕ ಯುವಕರಷ್ಟೇ ಅಲ್ಲ ಚಿಣ್ಣರ ಮನಸ್ಸನ್ನೂ ಆಮೀರ್ ಕೊಳ್ಳೆ ಹೊಡೆಯುತ್ತಾರೆ. ಇದೊಂಥರ ತಾರೆ ಜಮೀನ್ ಪರ್‌ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ.
ಮುನ್ನಾಭಾಯಿ ಖ್ಯಾತಿಯ ರಾಜ್‌ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರ್‍ಯಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ.
ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದಾರೆ. ವರ್ಷಕ್ಕೊಂದೇ ಚಿತ್ರದಲ್ಲಿ ಅಭಿನಯಿಸುವ ಆಮೀರ್ ಹಾಗೂ ವರ್ಷಕ್ಕೊಂದೇ ಚಿತ್ರ ನಿರ್ದೇಶಿಸುವ ರಾಜ್‌ಕುಮಾರ್ ಈ ವರ್ಷದ ಅಷ್ಟೂ ಪ್ರಶಸ್ತಿಗಳಲ್ಲೂ ತಮ್ಮ ಹೆಸರು ನೋಂದಾಯಿಸಲಿದ್ದಾರೆ. ಶರ್ಮನ್ ಜೋಶಿ, ಮಾಧವನ್, ಕರೀನಾ ಕಪೂರ್ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ಪರಾಶರ್ ಬಹಳ ದಿನಗಳ ನಂತರ ಮತ್ತೆ ನಟಿಸಿದ್ದಾರೆ.
ಈ ಚಿತ್ರವನ್ನೊಮ್ಮೆ ನೋಡಿದರೆ ಕಾಲೇಜು, ಅಲ್ಲಿನ ಸಖಿಯರು, ಟಪೋರಿ ಗೆಳೆಯರು, ಕ್ಯಾಂಟೀನ್...ಹೀಗೆ ಹರೆಯ ಜಮಾನಾ ಕಣ್ಣು ಮುಂದೆ ಬಿಚ್ಚಿಕೊಳ್ಳಲಿದೆ. ಚಿತ್ರದ ಕೊನೆಗೆ ಕಣ್ಣೂ ತೇವಗೊಳ್ಳುತ್ತದೆ. ಹಾಗಾದರೆ ಈ ಚಿತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಜತೆಗೆ `ಫೈವ್ ಪಾಯಿಂಟ್ ಸಮ್ ಒನ್' ಕೂಡ ಓದಿ.