Wednesday, March 25, 2009

ಮತ್ಸ್ಯ ಕನ್ಯೆಯ ಮಾಯಾ ಜಾಲ-ಶೀ ಕ್ರೀಚರ್ಮತ್ಸ ಕನ್ಯೆಯ ಬಗ್ಗೆ ವಿಶ್ವದಲ್ಲಿ ಅದೇನೋ ಮೋಹ. ನಮ್ಮ ಪುರಾಣ ಕತೆಗಳಲ್ಲೂ ಮತ್ಸ್ಯ ಕನ್ಯೆಯರು ಕಾಣಿಸಿಕೊಂಡ ಉದಾಹರಣೆಗಳಿವೆ. ಅಜ್ಜ, ಅಜ್ಜಿಯರು ಹೇಳುತ್ತಿದ್ದ ಕತೆಗಳಲ್ಲೂ ಸುಂದರ ಮತ್ಸ್ಯ ಕನ್ಯೆಯರ ವರ್ಣನೆಯಿದೆ. ಆದರೆ ಮತ್ಸ್ಯ ಕನ್ಯೆಯರು ವಿಷ ಕನ್ಯೆಯರೂ ಆಗಬಲ್ಲರು, ಕೊಲೆಗಡುಕರೂ ಆಗಿರಬಹುದು ಎಂಬ ಭಾವನೆಗಳಿಗೆ ಇಂಬು ನೀಡುವ ಚಿತ್ರ ಶಿ ಕ್ರೀಚರ್.
ಎರಡು ಶತಮಾನಗಳ ಹಿಂದಿನ ಕತೆಯ ಈ ಚಿತ್ರ ನಿರ್ಮಾಣವಾಗಿದ್ದು ೨೦೦೧ರಲ್ಲಿ. ಜಾತ್ರೆಗಳಲ್ಲಿ ಮತ್ಸ್ಯಕನ್ಯೆ ತೋರಿಸುವ, ವಿಚಿತ್ರ ಅಂಗಗಳನ್ನು ಹೊಂದಿರುವ ಮಹಿಳೆಯರ ಪ್ರದರ್ಶನವನ್ನು ನಾವು ಕಂಡಿರುತ್ತೇವೆ. ಅಂತಹದ್ದೇ ಪ್ರದರ್ಶನಗಳನ್ನು ನಡೆಸುವ ಒಂದು ತಂಡದ ಸುತ್ತ ಕತೆ ಸುತ್ತುತ್ತದೆ. ಜಾಂಬಿ ಎನ್ನುವ ಆಫ್ರಿಕಾದ ದೆವ್ವ ಹಾಗೂ ಹಾಡುವ ಮತ್ಸ್ಯ ಕನ್ಯೆ ತೋರಿಸುತ್ತೇನೆ ಎನ್ನುವ ನಾಯಕ ಢೋಂಗಿ ಪ್ರದರ್ಶನ ನಡೆಸಿ ಹಣ ಗಳಿಸುತ್ತಾನೆ. ಜಾಂಬಿ ಎಂಬ ದೆವ್ವಕ್ಕೆ ಆಫ್ರಿಕಾದ ವ್ಯಕ್ತಿ ಪಾತ್ರಧಾರಿ, ಇನ್ನು ಮತ್ಸ್ಯಕನ್ಯೆಯೋ ಸಾಮಾನ್ಯ ಹುಡುಗಿ. ವೇದಿಕೆ ಹಿಂಭಾಗದಲ್ಲಿ ಗ್ರಾಮಾಫೋನ್ ನುಡಿಸಿ ಮತ್ಸ್ಯಕನ್ಯೆಯ ಗಾನ ಪ್ರದರ್ಶನ.
ಇಂತಿಪ್ಪ ಪ್ರದರ್ಶನಗಳು ನಡೆದ ನಂತರ ಒಂದು ದಿನ ವೃದ್ಧನೊಬ್ಬ ಮತ್ಸ್ಯ ಕನ್ಯೆಯನ್ನು ಕಾಣಲು ಟೆಂಟ್ಗೆ ಬರುತ್ತಾನೆ. ಮತ್ಸ್ಯ ಕನ್ಯೆ ಕಂಡು ಆತನ ಕಣ್ಣಲ್ಲಿ ಧಾರಾಕಾರ ನೀರು. ಮತ್ಸ್ಯಕನ್ಯೆ ಕಂಡು ಇವನ್ಯಾಕಪ್ಪಾ ಅಳೋದು ಎಂದುಕೊಂಡ ನಾಯಕ ಆ ವೃದ್ಧನನ್ನು ಮನೆಗೆ ಕಳಿಸಲು ತೆರಳುತ್ತಾನೆ ನಕಲಿ ಮತ್ಸ್ಯಕನ್ಯೆ ಅಂದರೆ ನಾಯಕಿಯೊಂದಿಗೆ. ಆದರೆ ಆ ವೃದ್ಧ ಇವರಿಗೆ ಅಸಲಿ ಮತ್ಸ್ಯ ಕನ್ಯೆ ತೋರಿಸಿದಾಗ ಇಬ್ಬರೂ ದಂಗು ಬಡಿಯುತ್ತಾರೆ.
ಆ ಮತ್ಸ್ಯ ಕನ್ಯೆ ಕೊಲೆಗಡುಕಿ, ಅದಕ್ಕೆ ಆಕೆಯನ್ನು ಬಂಸಿಟ್ಟಿದ್ದೇನೆ ಎಂಬ ಸಮಜಾಯಿಷಿ ವೃದ್ಧನದ್ದು. ಹೇಗಾದರೂ ಮಾಡಿ ಈ ಮತ್ಸ್ಯಕನ್ಯೆ ಹೊತ್ತೊಯ್ದರೆ ಹೇರಳ ಹಣ ಗಳಿಸಬೇಕೆಂಬುದು ನಾಯಕನ ದುರಾಸೆ. ಜಾಂಬಿ ದೆವ್ವದ ವೇಷಧಾರಿ ಹಾಗೂ ನಾಯಕ ವೃದ್ಧನಿಗೆ ಗೊತ್ತಾಗದಂತೆ ಮತ್ಸ್ಯಕನ್ಯೆಯ ಅಪಹರಣಕ್ಕೆ ಮುಂದಾಗುತ್ತಾರೆ. ಆಗ ವೃದ್ಧ ಆಕಸ್ಮಿಕವಾಗಿ ಸಾವನ್ನಪ್ಪುತ್ತಾನೆ. ಮತ್ಸ್ಯ ಕನ್ಯೆಯನ್ನು ಹಡಗಿನಲ್ಲಿ ಹೇರಿಕೊಂಡು ಹೊರಡುವಾಗ ಆಕೆಯ ಸಂಕಟ, ತಪನೆಗಳೆಲ್ಲವೂ ನಾಯಕಿ ಕಣ್ಣಿಗೆ ಎದುರಾಗುತ್ತವೆ. ಈ ಮತ್ಸ್ಯ ಕನ್ಯೆಯ ರಹಸ್ಯ ಚಿತ್ರದ ಉತ್ತರಾರ್ಧದಲ್ಲಿ ತೆರೆದುಕೊಳ್ಳುತ್ತದೆ.
ಮೆರ್ ಮೇಡ್ ಕ್ರೋನಿಕಲ್ಸ್ ಎಂಬ ಸರಣಿ ಚಿತ್ರಗಳ ಮೊದಲ ಚಿತ್ರವಿದು. ಐರ್ಲೆಂಡ್ ಪ್ರದೇಶದ ಕತೆ ಹಂದರದ ಚಿತ್ರದ ನಿರ್ದೇಶಕ ಸೆಬಾಸ್ಟಿಯನ್ ಗುಟ್ರೆಜ್. ನಾಯಕ ರಫೆಲ್ ಸೆವೆಲ್, ನಾಯಕಿ ಕಾರ್ಲಾ ಗುಗಿನೋ, ಮತ್ಸ್ಯಕನ್ಯೆಯಾಗಿದ್ದು ರಾಯಾ ಖಿಲ್ಸೆಸ್ಡ್. ಕುತೂಹಲಕಾರಿ ಚಿತ್ರಗಳ ಖ್ಯಾತ ನಿರ್ಮಾಪಕ ಸ್ಯಾಮುಯೆಲ್ ಅರ್ಕಾಫ್ಗೆ ಈ ಚಿತ್ರ ಅರ್ಪಿಸಲಾಗಿದೆ. ಮತ್ಸ್ಯಕನ್ಯೆಯ ಬಗ್ಗೆ ಆಸಕ್ತಿ ಇದ್ದವರೆಲ್ಲ ನೋಡಬಹುದು.

Friday, March 20, 2009

ಸತ್ತಾ ...ಅಣ್ಣಾ ನಾ ಸಂಡಾಸಿಗೆ ಹೋಗ್ತೀನಿ, ಈ ಹೆಣ್ಣು ಮಗಳ ಮಾತಿನಲ್ಲಿ ದಮ್ ಇಲ್ಲ...ಹೀಗೆ ಸತ್ತಾ ಚಿತ್ರದ ಉತ್ತರಾರ್ಧದಲ್ಲಿ ಚುನಾವಣೆ ಪ್ರಚಾರದ ಭಾಷಣ ಕೇಳುವ ಮತದಾರನೊಬ್ಬ ಹೇಳುತ್ತಾನೆ. ಆತ ಹೇಳುವ ಮಾತು ಚಿತ್ರದ ನಾಯಕಿ ಅರುಂಧತಿ ಬಗ್ಗೆ. ಸಚಿವ ಅಜಯ್ ಚವ್ಹಾಣನ ಸೊಸೆ ಅರುಂಧತಿ ಆಗಷ್ಟೇ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದಾಳೆ. ಆಕೆಯ ಗಂಡ ವಿವೇಕ್ ಜೈಲಿನಲ್ಲಿದ್ದಾನೆ, ಕಾರಣ ಬಾರ್ನಲ್ಲಿ ಅಪರಾತ್ರಿ ಮದ್ಯ ನೀಡದಿರುವ ಕಾರಣಕ್ಕೆ ಯುವತಿಯನ್ನು ಕೊಂದಿದ್ದು.
ಮುಂದಿನ ದೃಶ್ಯದಲ್ಲಿ ಅರುಂಧತಿಯ ವಿರೋ ಅಭ್ಯರ್ಥಿಧೋತ್ರೆ ಭಾಷಣದಲ್ಲಿ ಹೇಳುತ್ತಾನೆ, ಆಕೆಯಿನ್ನೂ ಹೊಸಬಳು, ಅದಕ್ಕೂ ಹೆಚ್ಚಾಗಿ ಹೆಂಗಸು. ಮಹಿಳೆಯರಿಗೇನು ರಾಜಕೀಯ ಜ್ಞಾನವಿರುತ್ತದೆ, ನನಗೆ ಮತ ಹಾಕಿ, ಮುಂದೆ ಅಭಿವೃದ್ಧಿ ನೋಡಿ. ಅಲ್ಲೇ ಪ್ರಚಾರಕ್ಕೆ ಹೋಗುತ್ತಿದ್ದ ಅರುಂಧತಿ ಮೈಕ್ ಕಸಿದುಕೊಂಡು ಹೇಳುತ್ತಾಳೆ, ನಾನು ಸ್ತ್ರೀ ಎಂದು ಹೀಯಾಳಿಸಬೇಡಿ. ಜನರ ಸಮಸ್ಯೆಗಳ ಬಗ್ಗೆ ನಂಗೊತ್ತು, ಮಹಿಳೆಯರಿಗೆ ಮನೆಯೂ ಗೊತ್ತು, ರಾಜಕೀಯವೂ ಗೊತ್ತು. ಆಗ ಕೈಯಲ್ಲಿ ಬಕೆಟ್ ಹಿಡಿದ ಅದೇ ವ್ಯಕ್ತಿ ಹೇಳುತ್ತಾನೆ ಅಣ್ಣಾ ಈಗ ಧೋತ್ರೆ ಸಂಡಾಸಿಗೆ ಹೋಗ್ತಾನೆ.
ಖ್ಯಾತ ನಿರ್ದೇಶಕ ಮಧುರ್ ಬಂಢಾರಕರ್ ತಮ್ಮ ಚಿತ್ರದಲ್ಲಿ ಮಹಿಳೆಯರಿಗಾಗುವ ದೌರ್ಜನ್ಯ ಹಾಗೂ ಅದನ್ನು ಮಹಿಳೆ ಮೆಟ್ಟಿ ನಿಲ್ಲುವ ಬಗೆ ತೋರಿಸುವುದು ಹೀಗೆ. ಸತ್ತಾ ಅವರ ಎರಡನೇ ಚಿತ್ರ, ನಾಯಕಿ ರವೀನಾ ಟಂಡನ್. ಮೇಲ್ಮಧ್ಯಮ ವರ್ಗದ ಯುವತಿ ಹೇಗೆ ಅಕಾರ ಶಾಹಿ ರಾಜಕಾರಣಕ್ಕಿಳಿದು ಗೆಲ್ಲುತ್ತಾಳೆ ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ ಎನ್ನುವುದಕ್ಕೆ ಮೇಲಿನ ಎರಡು ದೃಶ್ಯಗಳು ಸಾಕ್ಷಿ. ಮಧುರ್ ಚಿತ್ರಗಳಲ್ಲಿ ಹೇರಳ ಪಾತ್ರಧಾರಿಗಳಿರುತ್ತಾರೆ, ಅದಕ್ಕೆ ಕಾರಣ ಚಿತ್ರ ಕತೆಯ ವ್ಯಾಪ್ತಿ.
ಸತ್ತಾ ಚಿತ್ರದ ನಾಯಕಿ ಅರುಂಧತಿ ರಾಜಕಾರಣಿ ವಿವೇಕ್ ಚವ್ಹಾಣ್ನನ್ನು ಪ್ರೇಮಿಸಿ ಮದುವೆಯಾಗುತ್ತಾಳೆ. ಮದುವೆಯಾದ ನಂತರ ಆತನ ಬಣ್ಣ ಬಯಲಾಗತೊಡಗುತ್ತದೆ. ಅಕಾರಕ್ಕಾಗಿ ಆತನ ಹಪಾಹಪಿ, ಬೆಲೆವೆಣ್ಣುಗಳ ಸಹವಾಸ, ಗೂಂಡಾಗಳ ಸ್ನೇಹ ಹೀಗೆ. ಮನೆಯಲ್ಲೂ ಅಷ್ಟೇ ಸೊಸೆ ತುಟಿ ಪುಟಕ್ಕೆನ್ನುವಂತಿಲ್ಲ, ಆಕೆ ಪತಿಯ ಶಯ್ಯಾ ಗೃಹದ ಕೋಣೆಗಷ್ಟೇ ಸೀಮಿತ. ಆದರೆ ಅನಿವಾರ್ಯ ಕಾರಣವೊಂದರಲ್ಲಿ ಚುನಾವಣೆಗೆ ರ್ಸ್ಪಸುವ ಅರುಂಧತಿ ಶಾಸಕಿಯಾಗುತ್ತಾಳೆ, ಆಗ ಪಕ್ಷದ ನಾಯಕ ಯಶವಂತ್ನೊಂದಿಗೆ ಪ್ರೇಮ, ಕಾಮದಾಟ ನಡೆಯುತ್ತದೆ. ಜೈಲಿನಲ್ಲಿರುವ ವಿವೇಕ್ ಹೆಂಡತಿಯಿದ್ದರೂ ಬೆಲೆವೆಣ್ಣುಗಳೊಂದಿಗೆ ಮೌಲ್ಯಯುತ ಸಂಬಂಧ ಹೊಂದಿರುತ್ತಾನೆ. ಇತ್ತ ಮಾವ ಮತ್ತೊಬ್ಬ ಹೆಂಗಸಿನ ಸಹವಾಸದಲ್ಲೂ ಇರುತ್ತಾನೆ. ಪುರುಷ ಮಾಡಿದ್ದೆಲ್ಲ ಸರಿ, ಆದರೆ ಮಹಿಳೆ ಪುರುಷನ ಥರ ಜೀವಿಸಿದರೆ ತಪ್ಪು ಎನ್ನುವ ಮನೋಭಾವನೆಯನ್ನು ಈ ಎಲ್ಲ ಪಾತ್ರಗಳ ಮೂಲಕ ಬಡಿದೆಬ್ಬಿಸುತ್ತಾರೆ ಮಧುರ್.
ಕೊನೆಗೆ ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಅರುಂಧತಿ ಹೇಗೆ ತನ್ನ ಅಸ್ತಿತ್ವ ನಿರ್ಮಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ತಿರುಳು. ಉತ್ತಮ ಸಂಗೀತ, ಸಂಭಾಷಣೆ, ಛಾಯಾಗ್ರಹಣದೊಂದಿಗೆ ಮಧುರ್ ಸ್ಪೆಷಲ್ ಎಫೆಕ್ಟ್ ಚಿತ್ರದಲ್ಲಿ ಎದ್ದು ಕಾಣುತ್ತದೆ, ಒಮ್ಮೆ ನೋಡಬಹುದಾದ ಚಿತ್ರ.