Friday, March 20, 2009

ಸತ್ತಾ ...



ಅಣ್ಣಾ ನಾ ಸಂಡಾಸಿಗೆ ಹೋಗ್ತೀನಿ, ಈ ಹೆಣ್ಣು ಮಗಳ ಮಾತಿನಲ್ಲಿ ದಮ್ ಇಲ್ಲ...ಹೀಗೆ ಸತ್ತಾ ಚಿತ್ರದ ಉತ್ತರಾರ್ಧದಲ್ಲಿ ಚುನಾವಣೆ ಪ್ರಚಾರದ ಭಾಷಣ ಕೇಳುವ ಮತದಾರನೊಬ್ಬ ಹೇಳುತ್ತಾನೆ. ಆತ ಹೇಳುವ ಮಾತು ಚಿತ್ರದ ನಾಯಕಿ ಅರುಂಧತಿ ಬಗ್ಗೆ. ಸಚಿವ ಅಜಯ್ ಚವ್ಹಾಣನ ಸೊಸೆ ಅರುಂಧತಿ ಆಗಷ್ಟೇ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದಾಳೆ. ಆಕೆಯ ಗಂಡ ವಿವೇಕ್ ಜೈಲಿನಲ್ಲಿದ್ದಾನೆ, ಕಾರಣ ಬಾರ್ನಲ್ಲಿ ಅಪರಾತ್ರಿ ಮದ್ಯ ನೀಡದಿರುವ ಕಾರಣಕ್ಕೆ ಯುವತಿಯನ್ನು ಕೊಂದಿದ್ದು.
ಮುಂದಿನ ದೃಶ್ಯದಲ್ಲಿ ಅರುಂಧತಿಯ ವಿರೋ ಅಭ್ಯರ್ಥಿಧೋತ್ರೆ ಭಾಷಣದಲ್ಲಿ ಹೇಳುತ್ತಾನೆ, ಆಕೆಯಿನ್ನೂ ಹೊಸಬಳು, ಅದಕ್ಕೂ ಹೆಚ್ಚಾಗಿ ಹೆಂಗಸು. ಮಹಿಳೆಯರಿಗೇನು ರಾಜಕೀಯ ಜ್ಞಾನವಿರುತ್ತದೆ, ನನಗೆ ಮತ ಹಾಕಿ, ಮುಂದೆ ಅಭಿವೃದ್ಧಿ ನೋಡಿ. ಅಲ್ಲೇ ಪ್ರಚಾರಕ್ಕೆ ಹೋಗುತ್ತಿದ್ದ ಅರುಂಧತಿ ಮೈಕ್ ಕಸಿದುಕೊಂಡು ಹೇಳುತ್ತಾಳೆ, ನಾನು ಸ್ತ್ರೀ ಎಂದು ಹೀಯಾಳಿಸಬೇಡಿ. ಜನರ ಸಮಸ್ಯೆಗಳ ಬಗ್ಗೆ ನಂಗೊತ್ತು, ಮಹಿಳೆಯರಿಗೆ ಮನೆಯೂ ಗೊತ್ತು, ರಾಜಕೀಯವೂ ಗೊತ್ತು. ಆಗ ಕೈಯಲ್ಲಿ ಬಕೆಟ್ ಹಿಡಿದ ಅದೇ ವ್ಯಕ್ತಿ ಹೇಳುತ್ತಾನೆ ಅಣ್ಣಾ ಈಗ ಧೋತ್ರೆ ಸಂಡಾಸಿಗೆ ಹೋಗ್ತಾನೆ.
ಖ್ಯಾತ ನಿರ್ದೇಶಕ ಮಧುರ್ ಬಂಢಾರಕರ್ ತಮ್ಮ ಚಿತ್ರದಲ್ಲಿ ಮಹಿಳೆಯರಿಗಾಗುವ ದೌರ್ಜನ್ಯ ಹಾಗೂ ಅದನ್ನು ಮಹಿಳೆ ಮೆಟ್ಟಿ ನಿಲ್ಲುವ ಬಗೆ ತೋರಿಸುವುದು ಹೀಗೆ. ಸತ್ತಾ ಅವರ ಎರಡನೇ ಚಿತ್ರ, ನಾಯಕಿ ರವೀನಾ ಟಂಡನ್. ಮೇಲ್ಮಧ್ಯಮ ವರ್ಗದ ಯುವತಿ ಹೇಗೆ ಅಕಾರ ಶಾಹಿ ರಾಜಕಾರಣಕ್ಕಿಳಿದು ಗೆಲ್ಲುತ್ತಾಳೆ ಎಂಬುದನ್ನು ಅವರು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾರೆ ಎನ್ನುವುದಕ್ಕೆ ಮೇಲಿನ ಎರಡು ದೃಶ್ಯಗಳು ಸಾಕ್ಷಿ. ಮಧುರ್ ಚಿತ್ರಗಳಲ್ಲಿ ಹೇರಳ ಪಾತ್ರಧಾರಿಗಳಿರುತ್ತಾರೆ, ಅದಕ್ಕೆ ಕಾರಣ ಚಿತ್ರ ಕತೆಯ ವ್ಯಾಪ್ತಿ.
ಸತ್ತಾ ಚಿತ್ರದ ನಾಯಕಿ ಅರುಂಧತಿ ರಾಜಕಾರಣಿ ವಿವೇಕ್ ಚವ್ಹಾಣ್ನನ್ನು ಪ್ರೇಮಿಸಿ ಮದುವೆಯಾಗುತ್ತಾಳೆ. ಮದುವೆಯಾದ ನಂತರ ಆತನ ಬಣ್ಣ ಬಯಲಾಗತೊಡಗುತ್ತದೆ. ಅಕಾರಕ್ಕಾಗಿ ಆತನ ಹಪಾಹಪಿ, ಬೆಲೆವೆಣ್ಣುಗಳ ಸಹವಾಸ, ಗೂಂಡಾಗಳ ಸ್ನೇಹ ಹೀಗೆ. ಮನೆಯಲ್ಲೂ ಅಷ್ಟೇ ಸೊಸೆ ತುಟಿ ಪುಟಕ್ಕೆನ್ನುವಂತಿಲ್ಲ, ಆಕೆ ಪತಿಯ ಶಯ್ಯಾ ಗೃಹದ ಕೋಣೆಗಷ್ಟೇ ಸೀಮಿತ. ಆದರೆ ಅನಿವಾರ್ಯ ಕಾರಣವೊಂದರಲ್ಲಿ ಚುನಾವಣೆಗೆ ರ್ಸ್ಪಸುವ ಅರುಂಧತಿ ಶಾಸಕಿಯಾಗುತ್ತಾಳೆ, ಆಗ ಪಕ್ಷದ ನಾಯಕ ಯಶವಂತ್ನೊಂದಿಗೆ ಪ್ರೇಮ, ಕಾಮದಾಟ ನಡೆಯುತ್ತದೆ. ಜೈಲಿನಲ್ಲಿರುವ ವಿವೇಕ್ ಹೆಂಡತಿಯಿದ್ದರೂ ಬೆಲೆವೆಣ್ಣುಗಳೊಂದಿಗೆ ಮೌಲ್ಯಯುತ ಸಂಬಂಧ ಹೊಂದಿರುತ್ತಾನೆ. ಇತ್ತ ಮಾವ ಮತ್ತೊಬ್ಬ ಹೆಂಗಸಿನ ಸಹವಾಸದಲ್ಲೂ ಇರುತ್ತಾನೆ. ಪುರುಷ ಮಾಡಿದ್ದೆಲ್ಲ ಸರಿ, ಆದರೆ ಮಹಿಳೆ ಪುರುಷನ ಥರ ಜೀವಿಸಿದರೆ ತಪ್ಪು ಎನ್ನುವ ಮನೋಭಾವನೆಯನ್ನು ಈ ಎಲ್ಲ ಪಾತ್ರಗಳ ಮೂಲಕ ಬಡಿದೆಬ್ಬಿಸುತ್ತಾರೆ ಮಧುರ್.
ಕೊನೆಗೆ ಈ ಎಲ್ಲ ಸಮಸ್ಯೆಗಳ ಮಧ್ಯೆಯೂ ಅರುಂಧತಿ ಹೇಗೆ ತನ್ನ ಅಸ್ತಿತ್ವ ನಿರ್ಮಿಸಿಕೊಳ್ಳುತ್ತಾಳೆ ಎಂಬುದು ಚಿತ್ರದ ತಿರುಳು. ಉತ್ತಮ ಸಂಗೀತ, ಸಂಭಾಷಣೆ, ಛಾಯಾಗ್ರಹಣದೊಂದಿಗೆ ಮಧುರ್ ಸ್ಪೆಷಲ್ ಎಫೆಕ್ಟ್ ಚಿತ್ರದಲ್ಲಿ ಎದ್ದು ಕಾಣುತ್ತದೆ, ಒಮ್ಮೆ ನೋಡಬಹುದಾದ ಚಿತ್ರ.