Sunday, May 24, 2009

ಬೆತ್ತಲೆ -ಕತ್ತಲೆ-ಪ್ರೇಮ =ದೇವ್ ಡಿಆತನಿಗೆ ಬೆತ್ತಲಾಗುವುದೆಂದರೆ ಖುಷಿ, ಆಕೆಗೆ ಅವನ ತೃಪ್ತಿಪಡಿಸಿದರೆ ಸಂತಸ. ಬೆತ್ತಲಾಗಿ ಎಲ್ಲವನ್ನೂ ಕಳಚಿ ಸತ್ಯಶೋಧನೆಗೆ ತೆರಳಿದ್ದು ಜ್ಞಾನಿಗಳು. ಆದರೆ ಆಧುನಿಕ ದೇವದಾಸನ ವೃತ್ತಿ, ಪ್ರವೃತ್ತಿ ಎಲ್ಲವೂ ಮದ್ಯ ಹಾಗೂ ಮದಿರೆ. ವಿದೇಶದಲ್ಲಿರುವ ದೇವ್ ಹಳ್ಳಿಗಾಡಿನ ಪಾರೊಳೊಂದಿಗೆ ಕಾಮ ಹಂಚಿಕೊಳ್ಳುತ್ತಾನೆ ಮೊಬೈಲ್‌ನಲ್ಲಿ. ನನಗೆ ನಿಂದೊಂದು ಬೆತ್ತಲೆ ಫೋಟೊ ಬೇಕು ಎಂದಾಗ ಸಖನ ಆಜ್ಞಾ ಪಾಲನೆಗೆ ಪಾರೋ ಮೊಬೈಲ್ ಎದುರು ಬೆತ್ತಲಾಗಿ ಫೋಟೊ ಕ್ಲಿಕ್ಕಿಸಿ, ನಗರದ ಲ್ಯಾಬ್‌ನಲ್ಲಿ ನಗ್ನ ಚಿತ್ರ ಸಂಸ್ಕೃರಿಸಿ ಇ-ಮೇಲ್‌ನಲ್ಲಿ ದೇಶ ದಾಟಿಸುತ್ತಾಳೆ.
ಊರಿಗೆ ಬಂದಿಳಿಯುವ ದೇವ್ ಸಂಬಂಕರ ಮದುವೆ ಸಮಾರಂಭಕ್ಕೂ ಮುನ್ನ ಪಾರೋಳೊಂದಿಗೆ ಸುಖದ ಮೊದಲ ಹಂತ ಪೂರೈಸುತ್ತಾನೆ. ಚರಮ ಹಂತಕ್ಕೆ ತಲುಪುವಾಗ ಅಪ್ಪ ಬಾಗಿಲು ಬಡಿಯುತ್ತಾನೆ. ಆಮೇಲೆ ಮುಂದುವರಿಸೋಣ ಎಂದ ದೇವ್ ಹೊರಗೆ ಬರುವಷ್ಟರಲ್ಲಿ ಇನ್ನೊಬ್ಬ ಬಿಚ್ಚು ಹುಡುಗಿ ದೇವ್ ದೇಹ ತಟ್ಟುತ್ತಾಳೆ. ಮೆನೆಗೆ ಬೇಕಾದ ಸಾಮಾನುಗಳನ್ನು ತೆರಳುವ ದೇವ್‌ನದ್ದು ಆಕೆಯೊಂದಿಗೆ ರಾಸಕ್ರೀಡೆ. ಅಷ್ಟರಲ್ಲೇ ಸೈಕಲ್ ಮೇಲೆ ಹಾಸಿಗೆ ಹೇರಿಕೊಂಡು ಹೋಗುವ ಪಾರೋಳದ್ದು ದೇವ್ ಮಿಲನಕ್ಕಾಗಿ ಹೊಲದಲ್ಲಿ ಹಪಾಹಪಿ. ಆದರೆ ಅಷ್ಟರಲ್ಲಾಗಲೇ ಕೆಲಸ ಪೂರೈಸಿದ ದೇವ್‌ನಿಗೆ ಪಾರೋ ಖುಷಿ ಪಡಿಸಲು ಸಾಧ್ಯವಾಗುವುದಿಲ್ಲ. ಬೇಸತ್ತ ಪಾರೋ ಹಾಸಿಗೆ ಹೊತ್ತು ಮನೆಗೆ ವಾಪಸ್.
ದೇವ್ ಬಗ್ಗೆ ಅದೇಕೋ ಸಂಶಯಗೊಂಡ ಪಾರೋ ಬಗ್ಗೆ ಮನೆಯವರು ಮದುವೆಗೆ ತಕರಾರು ಎತ್ತುತ್ತಾರೆ. ಆಧುನಿಕ ಯುಗದ ಹುಡುಗಿಗೂ ಸಂಪ್ರದಾಯಿಕ ಮನಸ್ಥಿತಿ. ಪಾರೋ ಬೇರೊಬ್ಬನ ಪಾಲಾಗುತ್ತಾಳೆ, ಅಂದರೆ ದೇವ್‌ನ ದೇಹ ತಟ್ಟಿದ ಹೆಣ್ಣಿನ ಸಹೋದರನೊಂದಿಗೆ ಆಕೆಯ ಮದುವೆ. ಸೀಸನ್ಡ್ ಕುಡುಕನಾಗಿದ್ದ ದೇವ್ ಮತ್ತೆ ಬಾಟಲಿಗಟ್ಟಲೆ ಮದ್ಯ ಹೊಟ್ಟೆಗಿಳಿಸುತ್ತಾನೆ. ಮದುವೆ ಸಮಾರಂಭದಲ್ಲೂ ಕುಡಿತಕ್ಕೆ ತೋಬಾ ತೇರಾ ಜಲ್ವಾ, ತೋಬಾ ತೇರಾ ಪ್ಯಾರ್, ಇಮೋಶನಲ್ ಅತ್ಯಾಚಾರ ಹಾಡಿನ ಹಿಮ್ಮೇಳ.
ಪಾರೋ ದಿಲ್ಲಿಗೆ ತೆರಳುವುದರೊಂದಿಗೆ ದೇವ್ ಕೂಡ ದಿಲ್ಲಿ ಪಾಲಾಗುತ್ತಾನೆ.
ಆಕೆ ಚಂದ್ರಮುಖಿ, ವಿದೇಶದಲ್ಲಿ ಬೆಳೆದು ಭಾರತದಲ್ಲಿ ಸಖನ ಹುಡುಕುವ ಶಾಲಾ ಸುಂದರಿ. ಆಕೆಯೊಂದಿಗೆ ಮಜಾ ಮಾಡುವ ಯುವಕನೊಬ್ಬ ಬೆತ್ತಲೆ ವಿಡಿಯೋ ತೆಗೆದು ಎಲ್ಲೆಡೆ ಹಂಚುತ್ತಾನೆ. ಪರಿಣಾಮ ವಿದೇಶಕ್ಕೆ ಚಂದ್ರಮುಖಿ ಪರಿವಾರ ವಾಪಸ್, ಅಪ್ಪನ ಆತ್ಮಹತ್ಯೆ. ಭಾರತಕ್ಕೆ ವಾಪಸ್ಸಾಗುವ ಚಂದ್ರಮುಖಿ ಬೇಕೆಂತಲೆ ವೇಶ್ಯಾವಾಟಿಕೆ ಪಾಲಾಗುತ್ತಾಳೆ, ಜತೆಗೆ ವಿದ್ಯಾಭ್ಯಾಸವೂ ನಡೆಯುತ್ತದೆ. ಚಂದ್ರಮುಖಿಯ ಕದ ತಟ್ಟುವ ದೇವ್ ಆಕೆಯ ಮಟ್ಟಿಗೆ ದೇವರು. ದಿನವಿಡೀ ಕುಡಿತ, ರಾತ್ರಿಯಿಡೀ ಚಂದ್ರಮುಖಿಯೊಂದಿಗೆ ಪರಿಣಯ. ಇಂತಿಪ್ಪ ದೇವ್ ಜೀವನದಲ್ಲಿ ಮತ್ತೊಮ್ಮೆ ಪಾರೋ ಆಗಮನ, ಆತನ ಕೋಣೆಗೆ ಭೇಟಿ ನೀಡುವ ಆಕೆ ದೇವ್‌ನನ್ನು ಬದಲಾಯಿಸಲು ಯತ್ನಿಸುತ್ತಾಳೆ. ಆದರೆ ದೇವ್ ಯಥಾ ಪ್ರಕಾರ ಆಕೆಗೆ ಹಾಸಿಗೆಗೆ ಕರೆಯುತ್ತಾನೆ. ಈತನಿಂದ ಬೇಸತ್ತ ಪಾರೋ ಮತ್ತೆ ವಾಪಸ್ಸಾಗುತ್ತಾಳೆ, ಇತ್ತ ದೇವ್ ಕೊನೆಗೆ ಚಂದ್ರಮುಖಿಯತ್ತ ಮುಖ ಮಾಡುತ್ತಾನೆ.
ಅನುರಾಗ್ ಕಶ್ಯಪ್ ನಿರ್ದೇಶನದ ಆಧುನಿಕ ದೇವ್-ಡಿ ಚಿತ್ರದಲ್ಲಿ ಸೆಕ್ಸ್ ಚಾಟ್‌ನಿಂದ ಹಿಡಿದು ವಿವಾಹೇತರ ಸಂಬಂಧಗಳ ಬಗ್ಗೆ ಸಚಿತ್ರ ವಿವರವಿದೆ. ಹಳೆಯ, ಪುರಾತನ ಪ್ರೀತಿಯ ಬದಲು ಕಾಮಕ್ಕಷ್ಟೇ ಪ್ರೇಮಿಸುವ, ಪ್ರೇಮಿಸಲೆಂದೆ ಕಾಮಿಸುವ ಕತೆಯಿದೆ. ಹಳೆಯ ಎರಡು ದೇವದಾಸ್‌ಗಳಿಗಿಂತಲೂ ಈ ದೇವದಾಸ್ ವರ್ಣರಂಜಿತವಾಗಿದೆ. ಬಾರ್‌ಗಳು, ನಗರ ಪ್ರದೇಶದ ದೃಶ್ಯಗಳು, ವಸ್ತ್ರ ವಿನ್ಯಾಸ ಹಾಗೂ ಸಂಭಾಷಣೆ ಎಲ್ಲದರಲ್ಲೂ ಅಪ್‌ಡೆಟೇಡ್ ಚಿತ್ರವಿದು. ಆಧುನಿಕ ಮನಸ್ಥಿತಿಗೆ ಕನ್ನಡಿ ಹಿಡಿಯುವ ಚಿತ್ರವಾಗಿರುವುದರಿಂದ ಜಸ್ಟ್ ಎಂಜಾಯ್ ಮನೋಭಾವದವರು ವೀಕ್ಷಿಸಬೇಕಾದ ಚಿತ್ರ.

Friday, May 22, 2009

ಜೋಜೋಗೆ ಅಭಿನಂದನೆ !

ನಮ್ಮೆಲ್ಲರ ನೆಚ್ಚಿನ ವೋಡಾಫೋನ್ ಜೋಜೋ ಈಗ ಸಂಭ್ರಮದಲ್ಲಿದ್ದಾನೆ, ಕಾರಣ ಪೆಟಾ ಸಂಸ್ಥೆ ನೀಡುವ ಪ್ರಾಣಿಪ್ರಿಯ ಜಾಹೀರಾತು ಜೋಜೋ ಪಾಲಾಗಿದೆ. ವೋಡಾಫೋನ್ ನಿರ್ಮಿಸಿರುವ ಹೊಸ ಜೋಜೋ ಜಾಹೀರಾತು ಸರಣಿಗೆ ಪ್ರಸಕ್ತ ಸಾಲಿನ ಪೆಟಾ ಪ್ರಶಸ್ತಿ ದೊರೆತಿದೆ. ಪ್ರಾಣಿಗಳನ್ನು ಹಿಂಸಿಸದೆ ಹಾಗೂ ಬಳಸದೆ ನಿರ್ಮಿಸುವ ಜಾಹೀರಾತುಗಳಿಗೆ ನೀಡುವ ಪ್ರಶಸ್ತಿಯಿದು.
ಅಂದ ಹಾಗೆ ಕಳೆದ ವರ್ಷ ವೋಡಾಫೋನ್ ಸಂಸ್ಥೆ ರೂಪಿಸಿದ್ದ ಹ್ಯಾಪಿ ಟು ಹೆಲ್ಪ್ ಜಾಹೀರಾತಿನಲ್ಲಿ ನಾಯಿಗೆ ಹಿಂಸೆ ನೀಡಲಾಗಿದೆ ಎಂದು ಆಗ ಪೆಟಾ ಸಂಸ್ಥೆ ಆರೋಪಿಸಿತ್ತು.
ಈ ಬಾರಿ ಅದೇ ವೋಡಾಫೋನ್ ಸಂಸ್ಥೆ ನಿರ್ಮಿಸಿರುವ ಜಾಹೀರಾತು ಸರಣಿ ಪ್ರಶಸ್ತಿಗೆ ಪಾತ್ರವಾಗಿದೆ. ಈ ಸಾಧನೆಗಾಗಿ ಜೋಜೋ, ಆತನ ವಾರಸುದಾರ ನಿರ್ವಾಣ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಮೆಹ್ರಾ ಹಾಗೂ ಜೋಜೋ ಜನ್ಮಕ್ಕೆ ಕಾರಣರಾದ ಪ್ಲಾಟಿಪಸ್ ಸಂಸ್ಥೆಗೆ ಅಭಿನಂದನೆಗಳು. ಜೋಜೋನ ಸಾಧನೆ ಮುಂದುವರಿಯಲಿ, ಆತನ ಹಾಗೂ ವೀಕ್ಷಕರ ಮೊಗದಲ್ಲಿ ಸದಾ ನಗುವಿರಲಿ.

Tuesday, May 19, 2009

ಜೋಜೋ ಗೆ ಜೈ ಹೋ !ಪುಟ್ಟ ಕೈಕಾಲುಗಳು, ದೊಡ್ಡ ತಲೆ, ಅತ್ತಿಂದಿತ್ತ ಓಡಾಡುತ್ತ ಮಕ್ಕಳಂತೆ ಕಾಣುವ ವೇಷಧಾರಿಗಳು. ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ವೋಡಾಫೋನ್ ರೂಪಿಸಿರುವ ಜೋಜೋ ಪಾತ್ರಧಾರಿಗಳು ಈಗ ಎಲ್ಲರ ಅಚ್ಚುಮೆಚ್ಚು. ಓ ಮೊದಲು ನಾಯಿಗಳನ್ನು ಬಳಸಿ ತನ್ನ ಜಾಹೀರಾತಿನ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ವೋಡಾಫೊನ್ ಈಗ ಪುಟಾಣಿ ಪಾತ್ರಗಳ ಮೂಲಕ ಮಕ್ಕಳು, ಯುವಕರು ಹಾಗೂ ಹಿರಿಯರ ಮನ ಗೆದ್ದಿದೆ.
ಜೋಜೋ ಈ ಹೆಸರಿನ ಈ ಜಾಹೀರಾತು ಸರಣಿಯಲ್ಲಿ ಪುಟ್ಟ ಪಾತ್ರಧಾರಿಯ ಕಾಲು ಮುರಿದಿದ್ದು, ಕಿಟಲೆ ಮಾಡಿದ್ದು, ಮೇಲ್ ಬಾಕ್ಸ್ ಬೆನ್ನು ಹತ್ತಿರುವ, ಕಾರ್ ರೀಚಾರ್ಜ್ ಮಾಡುವ ದೃಶ್ಯಗಳು ಮತ್ತೊಮ್ಮೆ ನೋಡಬೇಕೆನಿಸುತ್ತವೆ. ಈ ಜಾಹೀರಾತುಗಳಿಗೆ ಜನ್ಮ ನೀಡಿದ್ದು ನಿರ್ವಾಣ ಸಂಸ್ಥೆ. ಕಳೆದ ವರ್ಷ ವೋಡಾಫೋನ್ನ ಹ್ಯಾಪಿ ಟು ಹೆಲ್ಪ್ ಜಾಹೀರಾತು ಸರಣಿ ರೂಪಿಸಿದ್ದ ಸಂಸ್ಥೆ ಈ ಬಾರಿ ವಿಭಿನ್ನ ಜಾಹೀರಾತು ಮಾಡಬೇಕೆಂದು ಹೊರಟಾಗ ಚಿಂತನೆ ನಡೆದಿದ್ದು ಕಾರ್ಟೂನ್ ಪಾತ್ರಧಾರಿಗಳ ಬಗ್ಗೆ. ಆದರೆ ಈಗಾಗಲೇ ಅಂತಹ ಹಲವಾರು ಜಾಹೀರಾತುಗಳು ಪ್ರದರ್ಶನಗೊಂಡಿರುವುದರಿಂದ ಮನುಷ್ಯರನ್ನೇ ಬಳಸಿ ಹೊಸ ಪಾತ್ರ ಸೃಷ್ಟಿಸುವ ಉತ್ಸಾಹ ತಂಡದಲ್ಲಿತ್ತು.
ಅದಕ್ಕಾಗಿ ಮೃದು ಉಣ್ಣೆಯ ಮನುಷ್ಯನ ಮೇಲ್ಕವಚ ನಿರ್ಮಿಸಿ, ತಲೆಯ ಭಾಗಕ್ಕೆ ಪರ್ಫೆಕ್ಸ್ ಎನ್ನುವ ವಸ್ತು ಬಳಸಲಾಯಿತು. ಮೃದು ದೇಹ, ದೊಡ್ಡ ತಲೆ, ಮಕ್ಕಳಂತೆ ನಡೆಯುವ ಪಾತ್ರಧಾರಿಗಳಿಂದಾಗಿ ಜೋಜೋ ಈಗ ಎಲ್ಲೆಡೆ ಜನಪ್ರಿಯ.
ಸಂಸ್ಥೆಯ ನಿರ್ದೇಶಕ ಪ್ರಕಾಶ್ ವರ್ಮಾ ಈ ಜಾಹೀರಾತು ರೂಪಿಸುವುದಕ್ಕಾಗಿ ಭರ್ತಿ ೩ ತಿಂಗಳು ಹೋಮ್ ವರ್ಕ್ ಮಾಡಿದ್ದಾರೆ. ಪಾತ್ರಧಾರಿಗಳಾಗಿ ಮಕ್ಕಳು, ಯುವತಿಯರು ಹಾಗೂ ಪುರುಷರು ಅಭಿನಯಿಸಿದ್ದಾರೆ. ಆದರೆ ಇಲ್ಲೊಂದು ವಿಶೇಷವಿದೆ, ಪಾತ್ರಧಾರಿಗಳು ಮಕ್ಕಳಂತೆ ಕಾಣಬೇಕು ಹಾಗೂ ಜಾಹೀರಾತು ಆಕರ್ಷಕವಾಗಿಸಬೇಕೆಂಬ ದೃಷ್ಟಿಯಿಂದ ತಕ್ಕಮಟ್ಟಿಗೆ ಆನಿಮೇಶನ್ ತಂತ್ರಜ್ಞಾನ ಬಳಸಲಾಗಿದೆ. ಹೈ ಸ್ಪೀಡ್ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಿ ಪಾತ್ರಧಾರಿಗಳ ನಡಿಗೆಯನ್ನು ವಿಭಿನ್ನವಾಗಿ ತೋರಿಸಿದ್ದು ಜಾಹೀರಾತಿನ ಹೆಗ್ಗಳಿಕೆ.
ಪ್ರೇಕ್ಷಕರ ಮನಸ್ಸು ಬೇರೆಡೆ ಆಕರ್ಷಿತವಾಗದಂತೆ ಹಿನ್ನೆಲೆಯಾಗಿ ಬೂದಿ ಬಣ್ಣ ಬಳಸಿದ್ದರೆ, ಪಾತ್ರಧಾರಿಗಳದ್ದು ಶ್ವೇತ ವಸ್ತ್ರ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನ ಪ್ಲಾಟಿಪಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿದ್ದು , ಜೋಜೋ ಜನಪ್ರಿಯತೆ ಪ್ರತಿ ದಿನ ಹೆಚ್ಚಾಗುತ್ತಿದೆ. ಐಪಿಎಲ್ಗಿಂತಲೂ ಹೆಚ್ಚು ಹಾಟ್ ಫೇವರಿಟ್ ಆಗಿರುವುದು ಜೋಜೋ ಜನಪ್ರಿಯತೆಗೆ ಸಾಕ್ಷಿ.

Saturday, May 9, 2009

ಹಂ ಸಾಥ್ ಸಾಥ್ ಹೈ


ಅವ ಸುಬೋಧ್ ಕೊಲ್ಕತ್ತಾದ ಖ್ಯಾತ ಫುಟ್ಬಾಲ್ ತಂಡ ಮೋಹನ್ ಬಗಾನ್ನ ತರಬೇತುದಾರ. ಪಂದ್ಯದ ಸಂದರ್ಭದಲ್ಲಿ ಹೊಡೆದಾಟ ನಡೆದು ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬೆಂಕಿ ಹಚ್ಚುತ್ತಾರೆ, ಆತ ಮನೆಗೆ ಮರಳುತ್ತಾನೆ. ರಾಮಾನುಜನ್ ಹಿಂದಿ ಭಾಷೆ ಪ್ರಚಾರಕ. ನೆಲೆಸಿರುವುದು ತಮಿಳುನಾಡಿನ ಚೆನ್ನೈನಲ್ಲಿ. ಹಿಂದಿ ಭಾಷೆ ಪ್ರತಿಭಟನಾಕಾರರು ಆತನ ಮನೆ ಎದುರು ಹಿಂದಿ ಭಾಷೆ ವಿರೋಸಿ ಪ್ರತಿಕೃತಿ ದಹಿಸುತ್ತಾರೆ. ಮಗನ ಕೈಲಿದ್ದ ಹಿಂದಿ ಪುಸ್ತಕ ಕಿತ್ತೆಸೆಯುವ ಆತ , ಹಿಂದಿ ಭಾಷೆಯಲ್ಲಿದ್ದ ನೇಮ್ ಪ್ಲೇಟ್ ಕೂಡ ಕಿತ್ತು ಹಾಕುತ್ತಾನೆ. ಮಹಾರಾಷ್ಟ್ರದ ರತ್ನಾಗಿರಿಯಲ್ಲಿರುವ ತುಕಾರಾಮ್ ಝಾಲಾಚಾ ಪಾಯಿಜೆ ಚಳವಳಿ ನೇತಾರ. ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟದ ನೇತೃತ್ವ ಈತನದ್ದು. ಉತ್ತರ ಪ್ರದೇಶದ ಅನ್ವರ್ ಉರ್ದು ಪಂಡಿತ. ಉರ್ದು ಭಾಷೆ ವಿರೋಸಿದ ಕೆಲವರು ಆತನ ಮನೆಗೆ ಕೊಳ್ಳಿಯಿಡುತ್ತಾರೆ, ಮನೆ ಭಸ್ಮವಾಗುತ್ತದೆ.
ಪಂಜಾಬ್ನಲ್ಲಿರುವ ಉತ್ಪಲ್ ಮನೆಗೆ ಬಂದಾಗ ರೆಡಿಯೋದಲ್ಲಿ ಪಂಜಾಬ್ ವಿಭಜನೆಯ ಸುದ್ದಿ ಕೇಳುತ್ತಾನೆ, ಕ್ಷಣ ಕಾಲ ಅರನಾಗುತ್ತಾನೆ. ಬನಾರಸ್ನ ಶರ್ಮಾ ಸಂಸ್ಕೃತ ಪಂಡಿತ, ಬಿಹಾರದ ಮತ್ತೊಬ್ಬ ಯುವಕ ಕೃಷಿಕ. ಇವರೆಲ್ಲರಿಗೂ ಒಂದು ಟೆಲಿಗ್ರಾಂ ಬರುತ್ತದೆ ಗೋವಾದ ಮರಿಯಾ ಫರ್ನಾಂಡಿಸ್ಳಿಂದ...ನಾನು ಮರಣ ಶಯ್ಯೆಯಲ್ಲಿದ್ದೇನೆ, ಎಲ್ಲಿದ್ದರೂ ಬೇಗ ಬನ್ನಿ.
ನೆನಪಿನ ರೀಲು ೬ ವರ್ಷಗಳ ಹಿಂದಿನ ಫ್ಲ್ಯಾಶ್ಬ್ಯಾಕ್ಗೆ ಬಿಚ್ಚಿಕೊಳ್ಳುತ್ತದೆ....
ಅದು ಬೆಳಗಾವಿ, ಪೋರ್ಚುಗೀಸರ ವಶದಲ್ಲಿರುವ ಗೋವಾ ವಿಮೋಚನೆ ಹೋರಾಟಕ್ಕೆ ರಂಗಭೂಮಿ. ಎಲ್ಲೆಡೆಯಿಂದ ಅಲ್ಲಿ ಆಗಮಿಸುವ ಈ ಆರು ಯುವಕರು ಹೋರಾಟಕ್ಕಾಗಿ ಗೋವಾಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಮಾರ್ಗದರ್ಶಿ, ಸಾಥಿಯಾಗುವುದು ಮರಿಯಾ ಫರ್ನಾಂಡಿಸ್. ಪೋರ್ಚುಗೀಸರ ಕ್ರೌರ್ಯ ಮರಿಯಾಳ ತಂದೆ, ತಾಯಿ, ಸಹೋದರ ಹಾಗೂ ಆಕೆಯ ಶೀಲ ಕಿತ್ತುಕೊಂಡಿರುತ್ತದೆ. ಅದಕ್ಕಾಗಿ ಗೋವಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು ಅವಳ ಹೆಬ್ಬಯಕೆ. ಈ ಆರು ಯುವಕರೊಂದಿಗೆ ಆಕೆಯೂ ಸೇರಿ ಮುನ್ನಡೆಯುವ ಗುಂಪಿನ ಹೆಸರು `ಸಾತ್ ಹಿಂದುಸ್ತಾನಿ`.
ಈ ತಂಡ ಮದ್ದು, ಗುಂಡಿನೊಂದಿಗೆ ಹೋರಾಟ ನಡೆಸುವುದಿಲ್ಲ. ಪೋರ್ಚುಗೀಸರ ಅಕಾರ ಕೇಂದ್ರಗಳ ಮೇಲೆ ಭಾರತ ಧ್ವಜ ಹಾರಿಸಿ ಸ್ವಾತಂತ್ರ್ಯಕ್ಕೆ ಪ್ರೇರೆಪಿಸುವುದು ತಂಡದ ಮುಖ್ಯ ಅಜೆಂಡಾ. ಹೀಗೆ ದೇಶದ ಹೆಸರಿನಲ್ಲಿ ಒಂದಾಗುವ ತಂಡ ಅಸ್ಪ್ರಶ್ಯತೆ, ಜಾತಿವಾದ, ಧರ್ಮಗಳ ನಡುವಿನ ಭಿನ್ನತೆಯನ್ನೂ ಕಾಣುತ್ತದೆ. ಅದೆಲ್ಲವನ್ನೂ ಮೆಟ್ಟಿ ನಿಂತು ಗೋವಾದ ನಾನಾ ಕಡೆ ಗುಪ್ತವಾಗಿ ಭಾರತ ಧ್ವಜ ಹಾರಿಸುತ್ತದೆ. ಈ ತಂಡದ ಜನಪ್ರಿಯತೆ ಹೆಚ್ಚಿದಂತೆ ಪೋರ್ಚುಗೀಸರು ಇವರಿಗಾಗಿ ತಡಕಾಡುತ್ತಾರೆ.
ಜೀವ ಕಳೆದುಕೊಂಡ ಊರುಗಳು, ಪೋರ್ಚುಗೀಸರ ಒದೆ ತಿಂದ ಜನರ ಮುಖಗಳು, ಅಪರಿಚಿತರು ಬಂದರೆ ಹೆದರಿ ಹೋಗುವ ಅವಸ್ಥೆ ಹೀಗೆ ಆಗಿನ ಗೋವಾದ ಚಿತ್ರಣ ಚಿತ್ರದಲ್ಲಿ ಮಧ್ಯೆ, ಮಧ್ಯೆ ಹಾಯ್ದು ಹೋಗುತ್ತದೆ. ಅದೊಂದು ದಿನ ಊಟ ತರಲು ಹೋದ ತುಕಾರಾಮ್ ಗೋವಾ ಫೆನ್ನಿ ಸವಿಯುತ್ತಾನೆ. ಅಮಲಿನಲ್ಲಿ ತನ್ನ ಚಪ್ಪಲಿ ಮರೆತು ಬರುತ್ತಾನೆ, ಪೊಲೀಸರು ಹುಡುಕಾಟ ಪ್ರಾರಂಭಿಸುತ್ತಾರೆ. ಉಳಿದವರನ್ನೆಲ್ಲ ದಡ ಸೇರಿಸುವ ಅನ್ವರ್ ಮಾತ್ರ ಬಂತನಾಗುತ್ತಾನೆ.
ಮಾರಿಯಾಳ ಜನ್ಮದಿನದಂದು ಉಡುಗೊರೆಯಾಗಿ ಪಣಜಿಯ ವೃತ್ತದಲ್ಲಿ ದೇಶ ಧ್ವಜ ಹಾರಿಸಲು ಉಳಿದ ಐವರು ಪಣ ತೊಡುತ್ತಾರೆ. ಧ್ವಜ ಹಾರಿಸುತ್ತಾರೆ, ಆದರೆ ಬಂತರಾಗುತ್ತಾರೆ. ಅಷ್ಟೂ ಜನರನ್ನು ಹಿಂಸಿಸಿ ಬಾಯಿ ಬಿಡಿಸಲು ಪೊಲೀಸರು ಹರ ಸಾಹಸ ಪಡುತ್ತಾರೆ. ಆದರೆ ದೇಶಭಕ್ತಿ ರಹಸ್ಯ ಹೊರಡಿಸುವುದಿಲ್ಲ. ಕೊನೆಗೆ ಐವರೂ ಬಿಡುಗಡೆಯಾಗುತ್ತಾರೆ, ಆಗ ಮರಿಯಾಳಿಗೆ ಜೈಲು ಶಿಕ್ಷೆಯಾದ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ತಮ್ಮ ಊರಿಗೆ ವಾಪಸ್ಸಾಗುತ್ತಾರೆ. ಕೊನೆಯ ದೃಶ್ಯದಲ್ಲಿ ಮರಿಯಾ ಭೇಟಿಗೆ ಎಲ್ಲರೂ ಹೊರಟು ಬರುತ್ತಾರೆ, ಆದರೆ ಅಷ್ಟರಲ್ಲಿ ಮರಿಯಾ ಹೊರಟು ಹೋಗುತ್ತಾಳೆ, ಶಾಶ್ವತವಾಗಿ ಜೀವನದಿಂದ.
ಖ್ವಾಜಾ ಅಹ್ಮದ್ ಅಬ್ಬಾಸ್ ಚಿತ್ರದ ನಿರ್ದೇಶಕರು, ಟಿ.ಪಿ.ಕೌಶಿಕ್ ಸಂಗೀತವಿದೆ, ಖ್ಯಾತ ಸಾಹಿತಿ ಕೈಫಿ ಆಜ್ಮಿ ಸಾಹಿತ್ಯ ರಚಿಸಿದ್ದಾರೆ. ಜಲಾಲ್ ಆಗಾ, ಎ.ಕೆ.ಹಾನಗಲ್, ಉತ್ಪಲ್ ದತ್ ರಂತಹ ಪ್ರತಿಭಾವಂತರು ನಟಿಸಿದ್ದಾರೆ. ೧೯೬೯ರಲ್ಲಿ ಬಿಡುಗಡೆಯಾದ ಈ ಚಿತ್ರ ೧೯೭೦ರಲ್ಲಿ ನರ್ಗಿಸ್ ದತ್ ಪ್ರಶಸ್ತಿ ಪಡೆದಿದೆ. ಅಮಿತಾಬ್ ಈ ಚಿತ್ರದಿಂದ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯೂ ಅವರದ್ದಾಯಿತು. ಈ ಚಿತ್ರ ಬೆಳಗಾವಿಯಲ್ಲೂ ಚಿತ್ರೀಕರಣಗೊಂಡಿದ್ದು, ದೂದ್ ಸಾಗರ್ ಜಲಪಾತದ ಕಣಿವೆಯಲ್ಲೂ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರದ ಸಿಡಿ ಟಿ-ಸೀರೀಸ್ನಲ್ಲಿ ಲಭ್ಯ.