Sunday, May 24, 2009

ಬೆತ್ತಲೆ -ಕತ್ತಲೆ-ಪ್ರೇಮ =ದೇವ್ ಡಿಆತನಿಗೆ ಬೆತ್ತಲಾಗುವುದೆಂದರೆ ಖುಷಿ, ಆಕೆಗೆ ಅವನ ತೃಪ್ತಿಪಡಿಸಿದರೆ ಸಂತಸ. ಬೆತ್ತಲಾಗಿ ಎಲ್ಲವನ್ನೂ ಕಳಚಿ ಸತ್ಯಶೋಧನೆಗೆ ತೆರಳಿದ್ದು ಜ್ಞಾನಿಗಳು. ಆದರೆ ಆಧುನಿಕ ದೇವದಾಸನ ವೃತ್ತಿ, ಪ್ರವೃತ್ತಿ ಎಲ್ಲವೂ ಮದ್ಯ ಹಾಗೂ ಮದಿರೆ. ವಿದೇಶದಲ್ಲಿರುವ ದೇವ್ ಹಳ್ಳಿಗಾಡಿನ ಪಾರೊಳೊಂದಿಗೆ ಕಾಮ ಹಂಚಿಕೊಳ್ಳುತ್ತಾನೆ ಮೊಬೈಲ್‌ನಲ್ಲಿ. ನನಗೆ ನಿಂದೊಂದು ಬೆತ್ತಲೆ ಫೋಟೊ ಬೇಕು ಎಂದಾಗ ಸಖನ ಆಜ್ಞಾ ಪಾಲನೆಗೆ ಪಾರೋ ಮೊಬೈಲ್ ಎದುರು ಬೆತ್ತಲಾಗಿ ಫೋಟೊ ಕ್ಲಿಕ್ಕಿಸಿ, ನಗರದ ಲ್ಯಾಬ್‌ನಲ್ಲಿ ನಗ್ನ ಚಿತ್ರ ಸಂಸ್ಕೃರಿಸಿ ಇ-ಮೇಲ್‌ನಲ್ಲಿ ದೇಶ ದಾಟಿಸುತ್ತಾಳೆ.
ಊರಿಗೆ ಬಂದಿಳಿಯುವ ದೇವ್ ಸಂಬಂಕರ ಮದುವೆ ಸಮಾರಂಭಕ್ಕೂ ಮುನ್ನ ಪಾರೋಳೊಂದಿಗೆ ಸುಖದ ಮೊದಲ ಹಂತ ಪೂರೈಸುತ್ತಾನೆ. ಚರಮ ಹಂತಕ್ಕೆ ತಲುಪುವಾಗ ಅಪ್ಪ ಬಾಗಿಲು ಬಡಿಯುತ್ತಾನೆ. ಆಮೇಲೆ ಮುಂದುವರಿಸೋಣ ಎಂದ ದೇವ್ ಹೊರಗೆ ಬರುವಷ್ಟರಲ್ಲಿ ಇನ್ನೊಬ್ಬ ಬಿಚ್ಚು ಹುಡುಗಿ ದೇವ್ ದೇಹ ತಟ್ಟುತ್ತಾಳೆ. ಮೆನೆಗೆ ಬೇಕಾದ ಸಾಮಾನುಗಳನ್ನು ತೆರಳುವ ದೇವ್‌ನದ್ದು ಆಕೆಯೊಂದಿಗೆ ರಾಸಕ್ರೀಡೆ. ಅಷ್ಟರಲ್ಲೇ ಸೈಕಲ್ ಮೇಲೆ ಹಾಸಿಗೆ ಹೇರಿಕೊಂಡು ಹೋಗುವ ಪಾರೋಳದ್ದು ದೇವ್ ಮಿಲನಕ್ಕಾಗಿ ಹೊಲದಲ್ಲಿ ಹಪಾಹಪಿ. ಆದರೆ ಅಷ್ಟರಲ್ಲಾಗಲೇ ಕೆಲಸ ಪೂರೈಸಿದ ದೇವ್‌ನಿಗೆ ಪಾರೋ ಖುಷಿ ಪಡಿಸಲು ಸಾಧ್ಯವಾಗುವುದಿಲ್ಲ. ಬೇಸತ್ತ ಪಾರೋ ಹಾಸಿಗೆ ಹೊತ್ತು ಮನೆಗೆ ವಾಪಸ್.
ದೇವ್ ಬಗ್ಗೆ ಅದೇಕೋ ಸಂಶಯಗೊಂಡ ಪಾರೋ ಬಗ್ಗೆ ಮನೆಯವರು ಮದುವೆಗೆ ತಕರಾರು ಎತ್ತುತ್ತಾರೆ. ಆಧುನಿಕ ಯುಗದ ಹುಡುಗಿಗೂ ಸಂಪ್ರದಾಯಿಕ ಮನಸ್ಥಿತಿ. ಪಾರೋ ಬೇರೊಬ್ಬನ ಪಾಲಾಗುತ್ತಾಳೆ, ಅಂದರೆ ದೇವ್‌ನ ದೇಹ ತಟ್ಟಿದ ಹೆಣ್ಣಿನ ಸಹೋದರನೊಂದಿಗೆ ಆಕೆಯ ಮದುವೆ. ಸೀಸನ್ಡ್ ಕುಡುಕನಾಗಿದ್ದ ದೇವ್ ಮತ್ತೆ ಬಾಟಲಿಗಟ್ಟಲೆ ಮದ್ಯ ಹೊಟ್ಟೆಗಿಳಿಸುತ್ತಾನೆ. ಮದುವೆ ಸಮಾರಂಭದಲ್ಲೂ ಕುಡಿತಕ್ಕೆ ತೋಬಾ ತೇರಾ ಜಲ್ವಾ, ತೋಬಾ ತೇರಾ ಪ್ಯಾರ್, ಇಮೋಶನಲ್ ಅತ್ಯಾಚಾರ ಹಾಡಿನ ಹಿಮ್ಮೇಳ.
ಪಾರೋ ದಿಲ್ಲಿಗೆ ತೆರಳುವುದರೊಂದಿಗೆ ದೇವ್ ಕೂಡ ದಿಲ್ಲಿ ಪಾಲಾಗುತ್ತಾನೆ.
ಆಕೆ ಚಂದ್ರಮುಖಿ, ವಿದೇಶದಲ್ಲಿ ಬೆಳೆದು ಭಾರತದಲ್ಲಿ ಸಖನ ಹುಡುಕುವ ಶಾಲಾ ಸುಂದರಿ. ಆಕೆಯೊಂದಿಗೆ ಮಜಾ ಮಾಡುವ ಯುವಕನೊಬ್ಬ ಬೆತ್ತಲೆ ವಿಡಿಯೋ ತೆಗೆದು ಎಲ್ಲೆಡೆ ಹಂಚುತ್ತಾನೆ. ಪರಿಣಾಮ ವಿದೇಶಕ್ಕೆ ಚಂದ್ರಮುಖಿ ಪರಿವಾರ ವಾಪಸ್, ಅಪ್ಪನ ಆತ್ಮಹತ್ಯೆ. ಭಾರತಕ್ಕೆ ವಾಪಸ್ಸಾಗುವ ಚಂದ್ರಮುಖಿ ಬೇಕೆಂತಲೆ ವೇಶ್ಯಾವಾಟಿಕೆ ಪಾಲಾಗುತ್ತಾಳೆ, ಜತೆಗೆ ವಿದ್ಯಾಭ್ಯಾಸವೂ ನಡೆಯುತ್ತದೆ. ಚಂದ್ರಮುಖಿಯ ಕದ ತಟ್ಟುವ ದೇವ್ ಆಕೆಯ ಮಟ್ಟಿಗೆ ದೇವರು. ದಿನವಿಡೀ ಕುಡಿತ, ರಾತ್ರಿಯಿಡೀ ಚಂದ್ರಮುಖಿಯೊಂದಿಗೆ ಪರಿಣಯ. ಇಂತಿಪ್ಪ ದೇವ್ ಜೀವನದಲ್ಲಿ ಮತ್ತೊಮ್ಮೆ ಪಾರೋ ಆಗಮನ, ಆತನ ಕೋಣೆಗೆ ಭೇಟಿ ನೀಡುವ ಆಕೆ ದೇವ್‌ನನ್ನು ಬದಲಾಯಿಸಲು ಯತ್ನಿಸುತ್ತಾಳೆ. ಆದರೆ ದೇವ್ ಯಥಾ ಪ್ರಕಾರ ಆಕೆಗೆ ಹಾಸಿಗೆಗೆ ಕರೆಯುತ್ತಾನೆ. ಈತನಿಂದ ಬೇಸತ್ತ ಪಾರೋ ಮತ್ತೆ ವಾಪಸ್ಸಾಗುತ್ತಾಳೆ, ಇತ್ತ ದೇವ್ ಕೊನೆಗೆ ಚಂದ್ರಮುಖಿಯತ್ತ ಮುಖ ಮಾಡುತ್ತಾನೆ.
ಅನುರಾಗ್ ಕಶ್ಯಪ್ ನಿರ್ದೇಶನದ ಆಧುನಿಕ ದೇವ್-ಡಿ ಚಿತ್ರದಲ್ಲಿ ಸೆಕ್ಸ್ ಚಾಟ್‌ನಿಂದ ಹಿಡಿದು ವಿವಾಹೇತರ ಸಂಬಂಧಗಳ ಬಗ್ಗೆ ಸಚಿತ್ರ ವಿವರವಿದೆ. ಹಳೆಯ, ಪುರಾತನ ಪ್ರೀತಿಯ ಬದಲು ಕಾಮಕ್ಕಷ್ಟೇ ಪ್ರೇಮಿಸುವ, ಪ್ರೇಮಿಸಲೆಂದೆ ಕಾಮಿಸುವ ಕತೆಯಿದೆ. ಹಳೆಯ ಎರಡು ದೇವದಾಸ್‌ಗಳಿಗಿಂತಲೂ ಈ ದೇವದಾಸ್ ವರ್ಣರಂಜಿತವಾಗಿದೆ. ಬಾರ್‌ಗಳು, ನಗರ ಪ್ರದೇಶದ ದೃಶ್ಯಗಳು, ವಸ್ತ್ರ ವಿನ್ಯಾಸ ಹಾಗೂ ಸಂಭಾಷಣೆ ಎಲ್ಲದರಲ್ಲೂ ಅಪ್‌ಡೆಟೇಡ್ ಚಿತ್ರವಿದು. ಆಧುನಿಕ ಮನಸ್ಥಿತಿಗೆ ಕನ್ನಡಿ ಹಿಡಿಯುವ ಚಿತ್ರವಾಗಿರುವುದರಿಂದ ಜಸ್ಟ್ ಎಂಜಾಯ್ ಮನೋಭಾವದವರು ವೀಕ್ಷಿಸಬೇಕಾದ ಚಿತ್ರ.