Friday, April 17, 2009

ಮಧು, ಮಧುರ ಚಿತ್ರ ಟ್ರಾಫಿಕ್ ಸಿಗ್ನಲ್ನೋಡಿ, ನಿಲ್ಲಿ, ಹೊರಡಿ...ಇದು ಬೃಹತ್ ನಗರಗಳ ಆಯಕಟ್ಟಿನ ಸ್ಥಾನಗಳಲ್ಲಿರುವ ಸಿಗ್ನಲ್ಗಳು ನಮಗೆ ಕಲಿಸುವ ಪಾಠ. ಮಧುರ್ ಬಂಡಾರಕರ್ರ ಟ್ರಾಫಿಕ್ ಸಿಗ್ನಲ್ ಚಿತ್ರ ಕೂಡ ಈ ಚಿಂತನೆಯನ್ನು ವಿಸ್ತಾರವಾಗಿಸುತ್ತದೆ. ಕೆಂಪು, ಹಳದಿ, ಹಸಿರು ಬಣ್ಣಗಳು ಸಿಗ್ನಲ್ನ ಪ್ರತಿಬಿಂಬ. ಕೆಂಪು ಎಚ್ಚರಿಕೆಯ ಸಂಕೇತ, ಹಳದಿ ಕಾಮದ ದರ್ಶನವಾದರೆ, ಹಸಿರು ಸಮೃದ್ಧತೆ ಸಾರುತ್ತದೆ.
ಹಾಗೆ ನೋಡಿದರೆ ಮಧುರ್ ಈ ಚಿತ್ರದ ಮೂಲಕ ಮೂರು ಬಣ್ಣಗಳ, ವೈವಿಧ್ಯತೆ ಹಾಗೂ ಜೀವನ ಪ್ರೀತಿಯನ್ನು ಸಂಕೇತಗಳ ಮೂಲಕ ನಿರೂಪಿಸುತ್ತಾರೆ. ಟ್ರಾಫಿಕ್ ಸಿಗ್ನಲ್ ಹಿಂದಿರುವ ಜೀವಗಳ ವೇದನೆ, ಜೀವನ್ಮುಖಿ ಪ್ರೀತಿ ಹಾಗೂ ಸಂತೋಷವನ್ನು ಚಿತ್ರದ ಪಾತ್ರಗಳ ಮೂಲಕ ಕಟ್ಟಿ ಕೊಡುತ್ತಾರೆ.
ಮಧುರ್ ಚಿತ್ರಗಳಲ್ಲಿರುವ ವಿಶೇಷತೆ ಪಾತ್ರಧಾರಿಗಳದ್ದು. ಉಳಿದೆಲ್ಲ ಚಿತ್ರಗಳಲ್ಲಿ ಪಾತ್ರ ಪೋಷಣೆ ಕೇವಲ ೧೦ ರಿಂದ ೧೫ ಪಾತ್ರಧಾರಿಗಳಿಗೆ ಸೀಮಿತ. ಆದರೆ ಬಂಢಾರಕರ್ ಚಿತ್ರಗಳಲ್ಲಿ ಪಾತ್ರಧಾರಿಗಳ ಸಂಖ್ಯೆ ೨೦ ರಿಂದ ೨೫. ಇದಕ್ಕೆ ಕಾರಣ ಮಧುರ್ ಜೀವನವನ್ನು ನೋಡುವ ಬಗೆ. ಜೀವನದ ಬಗೆಗಿರುವ ಪ್ರೀತಿ ಕಾಣಬೇಕೆಂದರೆ ಅದು ಜನಸಾಮಾನ್ಯರಲ್ಲಿ ಮಾತ್ರ ಸಾಧ್ಯ. ಏಕೆಂದರೆ ಅವರು ಭಾರಿ ಹಣ, ಪ್ರತಿಷ್ಠೆ ಬಯಸುವವರಲ್ಲ. ಅಲ್ಪ ತೃಪ್ತರು.
ಟ್ರಾಫಿಕ್ ಸಿಗ್ನಲ್ ಚಿತ್ರದಲ್ಲೂ ಕೂಡ ಮಧುರ್ ಈ ತಂತ್ರ ಬಳಸಿದ್ದಾರೆ. ನಾಯಕ ಸಿಲ್ಸಿಲಾ (ಅವರಪ್ಪನೂ ಸಿನಿಮಾ ಪ್ರೇಮಿ, ಸಿಲ್ಸಿಲಾ ಚಿತ್ರದ ಬಿಡುಗಡೆಯಾದಾಗ ನಾಯಕ ಹುಟ್ಟಿದ್ದರಿಂದ ಆತನ ಹೆಸರು ಹೀಗಿದೆ) ಟ್ರಾಫಿಕ್ ಸಿಗ್ನಲ್ ಪ್ರದೇಶದ ನಾಯಕ. ಢೋಂಗಿ ಭಿಕ್ಷುಕ, ಚಿಂದಿ ಆಯುವ ಹುಡುಗ ಚಿಂದಿ ಚೋರ್, ರಸ್ತೆ ಬದಿಯ ವೇಶ್ಯೆ, ಟೀ ಅಂಗಡಿಯವ, ಸಿಗ್ನಲ್ಗಳಲ್ಲಿ ಪ್ರತಿ ದಿನ ಸಂಚರಿಸುವ ಮೇಲ್ಮಧ್ಯಮ ವರ್ಗದ ಅತೃಪ್ತ ಆತ್ಮಗಳು, ಬೀದಿ ಬದಿಯ ಚಿತ್ರ ಕಲಾವಿದ, ಉಗುಳುವ ಮೂಲಕ ಸ್ಟ್ರಾಬೆರಿ ಹಣ್ಣುಗಳಿಗೆ ಮಿಂಚು ಬರಿಸುವ ಮಾರಾಟಗಾರ, ಯಾರದ್ದೋ ಮಗುವನ್ನು ತಂದು ಭಿಕ್ಷೆ ಬೇಡುವವರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು, ರಾಜಕಾರಣಿ, ಪೊಲೀಸರು....ಈ ಚಿತ್ರದ ತುಂಬ ಪಾತ್ರಧಾರಿಗಳದ್ದೇ ಜಾತ್ರೆ.
ಅಂದ ಹಾಗೆ ಚಿತ್ರದ ಪ್ರತಿ ಪಾತ್ರಧಾರಿಯೂ ವಿಶಿಷ್ಟ, ಪಾತ್ರಧಾರಿಗಳ ನಡವಳಿಕೆ, ಆಸೆ, ತೆವಲು, ಮರೀಚಿಕೆ, ಪ್ರೀತಿ, ಪ್ರೇಮ ಭಿನ್ನ, ಭಿನ್ನ. ಈ ಚಿತ್ರಕ್ಕಾಗಿ ಮಧುರ್ ಮುಂಬೈನ ಸ್ಟುಡಿಯೋವೊಂದರಲ್ಲಿ ಒಂದೂವರೆ ಕಿ.ಮೀ.ಉದ್ದದ ಬೃಹತ್ ನಗರದ ಸೆಟ್ ಹಾಕಿಸಿದ್ದರು. ಸತತ ಆರೂವರೆ ತಿಂಗಳವರೆಗೆ ಚಿತ್ರೀಕರಣ ನಡೆಸಿದ್ದರು. ಅದಕ್ಕೂ ಮೊದಲು ಟ್ರಾಫಿಕ್ ಸಿಗ್ನಲ್ ಸುತ್ತಲಿನ ಜಗತ್ತನ್ನು ಸ್ವತ: ಕಂಡು ಚಿತ್ರಕತೆ ಬರೆದಿದ್ದರು.
ಚಿತ್ರ ಸಿಗ್ನಲ್ ಸುತ್ತ ಕೇಂದ್ರೀಕೃತವಾಗಿದ್ದರೂ ಹಲವು ಸಮಸ್ಯೆ ಅನಾವರಣಗೊಳಿಸುತ್ತದೆ. ಇಡೀ ಟ್ರಾಫಿಕ್ ಸಿಗ್ನಲ್ ತೆಕ್ಕೆಗೆ ತೆಗೆದುಕೊಂಡಿರುವ ಮಾಫಿಯಾ, ಅಲ್ಲಿ ಓವರ್ ಬ್ರಿಜ್ ನಿರ್ಮಿಸಿ ಲಾಭ ಗಳಿಸುವ ದಂಧೆಕೋರರ ಹಪಾಹಪಿತನ, ಕಾಮದ ಮದೋನ್ಮತ್ತತೆ, ಹಸಿವು, ಅನಾಥ ಪ್ರಜ್ಞೆ ಹಾಗೂ ಪ್ರೀತಿ ಏಕಕಾಲಕ್ಕೆ ಪ್ರೇಕ್ಷಕರೆದುರು ಪ್ರತ್ಯಕ್ಷವಾಗುತ್ತವೆ. ಒಂದರ್ಥದಲ್ಲಿ ಚಿತ್ರ ಡಾಂಕ್ಯುಮೆಂಟರಿಯಾಗಬಹುದಾದ ಎಲ್ಲ ಸಾಧ್ಯತೆಯನ್ನು ತಮ್ಮ ಜೀವಂತಿಕೆ ನಿರ್ದೇಶನದಿಂದ ತಪ್ಪಿಸಿದ್ದಾರೆ ನಿರ್ದೇಶಕ.
ನಾಯಕ ಸಿಲ್ ಸಿಲಾ ಹಾಗೂ ಆತನ ಒಡನಾಡಿಗಳು ಎದುರಿಸುವ ಸಮಸ್ಯೆಗಳಿಗೆ ಚಿತ್ರದ ಕೊನೆಯಲ್ಲಿ ಪರಿಹಾರವನ್ನೂ ನೀಡುತ್ತಾರೆ. ಕಾರ್ನಲ್ಲಿ ಸಂಚರಿಸುವ ಮೇಲಮಧ್ಯಮ ವರ್ಗದ ಯುವತಿ ಇಟ್ಟುಕೊಂಡವನೊಂದಿಗೆ ಹೇಳುವ ಸಂಭಾಷಣೆ ನಿನಗೆ ಯಾವುದರಲ್ಲೂ ಸ್ಥಿರತೆಯಿಲ್ಲ. ಇದು ಕಾಮದ ಅತೃಪ್ತಿಗೆ ಕಾರಣವಾಗುತ್ತದೆ. ಪ್ರತಿ ದಿನ ಕಸ ಆರಿಸುವ ಚಿಂದಿ ಚೋರ್ ಸುನಾಮಿಯಲ್ಲಿ ಕಳೆದು ಹೋದ ತಂದೆಗಾಗಿ ಹಾಗೂ ಪರಿಹಾರಕ್ಕಾಗಿ ಕೂಡಿಟ್ಟ ಹಣದಲ್ಲಿ ಪರಿಹಾರ ಕೇಂದ್ರಕ್ಕೆ ಫೋನಾಯಿಸುವ ಅನಿವಾರ್ಯತೆ ಅಸಹಾಯಕತೆ ಬಿಂಬಿಸುತ್ತದೆ. ತಾನೊಬ್ಬ ಐಟಿ ಎಂಜಿನಿಯರ್ ಹಣ ಪಿಕ್ ಪಾಕೆಟ್ ಆಯಿತು ಎಂದು ಜನರಿಂದ ಹಣ ಪೀಕಿಸುವ ಮೋಸಗಾರ ಮೋಸಕ್ಕೊಳಗಾದವನಿಗೆ ಮತ್ತೆ ಭೇಟಿಯಾಗುವುದು ದುರಂತದ ಛಾಯೆಗೆ ಕಾರಣವಾಗುತ್ತದೆ. ಅವಕಾಶವಾದಿಗಳ ಮಧ್ಯೆ ಜೀವನಪ್ರೀತಿಯನ್ನಿಟ್ಟುಕೊಂಡ, ಆಶಾವಾದಿಗಳ ಚಿತ್ರವಿದು. ಸಿಗ್ನಲ್ ಚೌಕಟ್ಟಿನಲ್ಲಿ ಕೆಂಪು, ಹಳದಿ ಹಾಗೂ ಹಸಿರು ಬಣ್ಣಗಳನ್ನು ಗಾಢವಾಗಿ ಬಳಸಿದ್ದಾರೆ ಮಧುರ್. ಸಿಗ್ನಲ್ನಲ್ಲಿ ಎಲ್ಲರೂ ನಿಲ್ಲಲೇಬೇಕು, ಆದರೆ ಜನರಿಗೆ ಬೇಗ ಹೋಗುವ ಧಾವಂತ. ಬಹುಶ: ನಗರದ ಅಷ್ಟೂ ಜನರು ನನಗೆ ಒಂದಿಲ್ಲೊಂದು ದಿನ ಸಿಗ್ನಲ್ನಲ್ಲಿ ಕಂಡಿದ್ದಾರೆ ಎಂದು ನಾಯಕ ಚಿತ್ರದ ಮೊದಲು ಹೇಳುವ ಮಾತು ಚಿತ್ರಕ್ಕೂ ಅನ್ವಯವಾಗುತ್ತದೆ. ಇಂತಹದೊಂದು ಅದ್ಭುತ ಚಿತ್ರ ನಿರ್ಮಾಣವಾಗಿದ್ದರೂ ವಿದೇಶಿ ವಿಮರ್ಶಕರಿಗೆ, ಪ್ರಶಸ್ತಿ ನೀಡುವವರಿಗೆ ಈ ಚಿತ್ರ ಅಪ್ಯಾಯಮಾನವಾಗಿ ಕಂಡಿಲ್ಲ ಎಂಬುದು ವಿಷಾದ. ಆದರೆ ಮಧುರ್ ನಿರ್ದೇಶನ, ಸಂಗೀತ, ಚಿತ್ರಕತೆ, ಪಾತ್ರ ಪೋಷಣೆ ಮಾತ್ರ ಮಧು, ಮಧುರ.