Friday, September 18, 2009

ಮರಾಠಿ ಕಿರುತೆರೆಯಲ್ಲಿ ಶಿವಾಜಿ ಅಲೆ !


ಮರಾಠಿ ಕಿರುತೆರೆಯಲ್ಲೀಗ ಹೊಸ ಅಲೆ, ಸ್ಟಾರ್ ಪ್ರವಾಹ್ ಚಾನೆಲ್‌ನಲ್ಲಿ ಮೂಡಿ ಬರುತ್ತಿರುವ ರಾಜಾ ಶಿವ ಛತ್ರಪತಿ ಧಾರಾವಾಹಿ ದೊಡ್ಡ ಬಜೆಟ್‌ನ ಸಿನಿಮಾದಷ್ಟೇ ಸುದ್ದಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ವಿಭಿನ್ನ ಮಾದರಿಯ ಕತೆ, ಸರಳ, ನೇರ ಸಂಭಾಷಣೆ, ಅದ್ಭುತ ಕಲಾ ನಿರ್ದೇಶನ ಹಾಗೂ ಭಾಳ ಚಂದ ಅಭಿನಯ.
ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ಅಮೋಲ್ ಕೊಲ್ಹೆ ಧಾರಾವಾಹಿಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದಾರೆ. ಇಡೀ ಧಾರಾವಾಹಿಯನ್ನು ಆವಾಹಿಸಿರುವುದು ಡಾ.ಅಮೋಲ್ ಹಾಗೂ ಔರಂಗಜೇಬ್ ಪಾತ್ರ ಮಾಡಿರುವ ಶಾಂತಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದ ನಿತಿನ್ ಕಾರ್ಯೇಕರ್. ಇಲ್ಲಿ ಶಿವಾಜಿ ಮಹಾರಾಜರನ್ನು ಬಹುಪರಾಕ್ ಮೂಲಕ ಹೊಗಳುವ, ಓತಪ್ರೋತವಾಗಿ ತೋರಿಸುವ ದೃಶ್ಯಗಳಿಲ್ಲ. ಬದಲು ನೇರ, ಸರಳ ನಿರೂಪಣೆ ಮೂಲಕ ಶಿವಾಜಿ ಮಹಾರಾಜರ ಜೀವನ ಬಿಂಬಿಸಿದ್ದು ಹೈಲೈಟ್. ಶಿವಾಜಿ ವಿರೋಗಳೇ ಶಿವಾಜಿಯನ್ನು ಹೊಗಳುವ, ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳ ಮೂಲಕ ಜೀವಕಳೆ ತುಂಬಲಾಗಿದೆ.
ದೇವದಾಸ್, ಲಗಾನ್ ಚಿತ್ರಗಳ ನಿರ್ಮಾಪಕ ನಿತಿನ್ ಚಂದ್ರಕಾಂತ್ ದೇಸಾಯಿ ಧಾರಾವಾಹಿಯ ನಿರ್ಮಾಪಕರು. ಹೇಮಂತ್ ದೇವಧರ್ ನಿರ್ದೇಶಕರು. ಶಿವಾಜಿ ಮಹಾರಾಜರ ಕೋಟೆಗಳು, ಮಹಾರಾಷ್ಟ್ರದ ದೇಸಿಯತೆ, ಸಂಸ್ಕೃತಿ ಸಾರುವ ಸಂಗೀತದೊಂದಿಗೆ ಮರಾಠಿ ತಿಳಿಯದವರೂ ಕೂಡ ಕುತೂಹಲದಿಂದ ಟಿವಿ ಕಡೆಗೆ ನೋಟ ಹರಿಸುವಂತೆ ಮಾಡಿದೆ ಶಿವಛತ್ರಪತಿ.
ಖ್ಯಾತ ನಟಿ ಮೃಣಾಲ್ ಕುಲಕರ್ಣಿ ಜೀಜಾಬಾಯಿ ಪಾತ್ರದಲ್ಲಿದ್ದರೆ, ಸಾಹಸ ನಿರ್ದೇಶನದ ಹೊಣೆ ಹೊತ್ತಿರುವುದು ಜೋಧಾ ಅಕ್ಬರ್ ಚಿತ್ರದ ಸಾಹಸ ನಿರ್ದೇಶಕ ರವಿ ದಿವಾನ್. ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿರುವ ಈ ಸೀರಿಯಲ್ ಸದ್ಯ ನಂ.೧ ಪಟ್ಟ ಬಿಟ್ಟುಕೊಡುತ್ತಿಲ್ಲ. ಮಹಾನ್ ಯೋಧ, ಪ್ರಜಾ ಪ್ರೇಮಿ ಹಾಗೂ ಧರ್ಮ ರಕ್ಷಕ ರಾಜನನ್ನು ಉತ್ಪ್ರೇಕ್ಷೆಯಿಲ್ಲದೆ ತೋರಿಸಿರುವುದು ಹೆಗ್ಗಳಿಕೆ. ಧಾರಾವಾಹಿಯ ಟೈಟಲ್ ಗೀತೆಗೂ ಕೂಡ ಅಂತರ್ಜಾಲದಲ್ಲಿ ಅಪಾರ ಬೇಡಿಕೆ. ಇಂತಹದೊಂದು ಬೃಹತ್ ಧಾರಾವಾಹಿಯ ಮೂಲಕ ಮರಾಠಿ ಕಿರುತೆರೆಯಲ್ಲಿ ಸುದ್ದಿಗೆ ಕಾರಣವಾಗಿರುವ ಸ್ಟಾರ್ ಪ್ರವಾಹ್ ಚಾನೆಲ್‌ನ ಉದ್ಘಾಟನೆ ಸಂದರ್ಭದಲ್ಲಿ ಸಿಇಓ ಉದಯ್ ಶಂಕರ್ ಹೇಳಿದ ಮಾತು ಹೀಗಿತ್ತು : ರಾಜಾ ಶಿವಛತ್ರಪತಿ ಧಾರಾವಾಹಿ ಮೂಲಕ ಮರಾಠಿ ಕಿರುತೆರೆಯಲ್ಲಿ ಹೊಸ ಬೆಳಕು ಕಾಣಲಿದೆ. ಕಿರುತೆರೆಯನ್ನು ಹಿರಿತೆರೆಯನ್ನಾಗಿಸುವ ಸಾಧ್ಯತೆ ಈ ಸೀರಿಯಲ್‌ಗಿದೆ. ಈ ಮಾತು ಈಗ ನಿಜವಾಗಿದೆ !.

Sunday, September 13, 2009

ವಿನಯ್‌ರಿಂದ ಸಾಧಕರ `ಪಾಠ`!ಖ್ಯಾತ ನಿರ್ದೇಶಕರು ಮಹಾನ್ ವ್ಯಕ್ತಿಗಳ ಆತ್ಮ ಚರಿತ್ರೆಯ ಸಿನಿಮಾ ಹಾಗೂ ಧಾರಾವಾಹಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಟಿವಿ ಚಾನೆಲ್‌ಗಳಲ್ಲಿ ಆಗಾಗ ಇಣುಕುತ್ತವೆ. ಮಲಯಾಳಂ, ತಮಿಳು ಕಿರುತೆರೆಯಲ್ಲಿ ಇಂತಹ ಕಾರ್ಯಕ್ರಮ ಹೇರಳವಾಗಿವೆ. ವ್ಯಕ್ತಿ ಹಾಗೂ ಜೀವನ ಶೈಲಿ, ಇತಿಹಾಸದ ಬಗ್ಗೆ ಮಾಹಿತಿ ನೀಡುವ ಫಾಕ್ಸ್ ಹಿಸ್ಟರಿ ಚಾನೆಲ್ ಇಂತಹ ಮತ್ತೊಂದು ಕಾರ್ಯಕ್ರಮ ಪ್ರದರ್ಶನಕ್ಕೆ ಸಜ್ಜಾಗಿದೆ. ಖ್ಯಾತ ನಟ, ನಿರೂಪಕ ವಿನಯ್ ಪಾಠಕ್ ಈ ಚಾನೆಲ್‌ಗಾಗಿ ಇತಿಹಾಸದ ಸಾಧಕರ ಮೆಗಾ ಧಾರಾವಾಹಿಗಳ ತುಣುಕು ಹಾಗೂ ಮಾಹಿತಿಯುಳ್ಳ ಕಾರ್ಯಕ್ರಮಕ್ಕೆ ನಿರೂಪಕರಾಗಿದ್ದಾರೆ. ಪ್ರತಿ ಭಾನುವಾರ ರಾತ್ರಿ ೯ಕ್ಕೆ ಹಾಗೂ ವಾರವಿಡೀ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಅಂದ ಹಾಗೆ ಈ ಮೊದಲು ಅನುರಾಗ್ ಕಶ್ಯಪ್ ಜಾಗತಿಕ ಸಿನಿಮಾ ರಂಗದ ಅತ್ಯುತ್ತಮ ನಟರು ಹಾಗೂ ನಿರ್ದೇಶಕರ ಬಗ್ಗೆ ಶೋಕೇಸ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹೊಸ ಕಾರ್ಯಕ್ರಮ ಶೋಕೇಸ್‌ನ ಮುಂದುವರಿದ ಭಾಗ.

Thursday, September 10, 2009

ಸಿನಿಮಾ ಅಂದರೆ...
ಸಿನೆಮಾ ಎಂದರೆ ಏನು ? ಅದು ಬದುಕು, ವಾಸ್ತವ, ಭ್ರಮೆ, ಕನಸುಗಳು…ಹೀಗೆ ನೂರಾರು ಪ್ರಶ್ನೆಗಳು ಮುತ್ತುತ್ತವೆ. ಸಿನೆಮಾ ಎಂದ ಕೂಡಲೇ ಬಾಲ್ಯದ ನೆನಪುಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ. ಊರಿಗೆ ಬಂದ ಹೊಸ ಸಿನಿಮಾದ ಪೋಸ್ಟರ್ ನೋಡಿ ಚಿತ್ರವೊಂದನ್ನು ಅನುಭವಿಸುವ ಕಾಲವದು. ವಿಷ್ಣುವರ್ಧನ್, ಡಾ.ರಾಜ್‌ಕುಮಾರ್, ಟೈಗರ್ ಪ್ರಭಾಕರ್, ಶಿವರಾಜ್‌ಕುಮಾರ್‌ರಂತಹ ಚಿತ್ರಗಳು ಆಗ ನಮಗೆ ಒಡನಾಡಿ.

ಭಾನುವಾರದ ದಿನ ತಂದೆ ಕೊಟ್ಟ 10 ರೂ. ನಲ್ಲಿ ಚಿತ್ರ ನೋಡಿ, ಮಿರ್ಚಿ ಭಜಿ ತಿಂದು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಆಗಿನ ಸಿನಿಮಾ ಆಕರ್ಷಣೆ. ಹೊಡೆದಾಟ, ಬಡಿದಾಟದ ಚಿತ್ರಗಳತ್ತಲೇ ನಮ್ಮ ಗಮನ. ಶಂಕರ್‌ನಾಗ್‌ರ ಆಕ್ಷನ್ ಚಿತ್ರಗಳು, ವಿನೋದ್ ರಾಜ್‌ರ ಡ್ಯಾನ್ಸ್, ವಜ್ರಮುನಿ ಗಂಭೀರ ಅಭಿನಯ, ದ್ವಾರಕೀಶ್‌ರ ಹಾಸ್ಯ…ಇವಿಷ್ಟು ಸಿನೆಮಾ ಎಂಬುದು ನಮ್ಮ ಭಾವನೆ. ಸಿನೆಮಾ ನೋಡಿ ಬಂದ ನಂತರ ಥೇಟರ್‌ಗಳ ಅಕ್ಕ, ಪಕ್ಕ ದೊರೆಯುತ್ತಿದ್ದ ವೇಸ್ಟ್ ರೀಲುಗಳನ್ನು ಮನೆಗೆ ತಂದು, ಮನೆ ಹೊರಗಿನ ಆವರಣದಲ್ಲಿ ಕನ್ನಡಿ ಇಟ್ಟು ಅದರ ಬೆಳಕು ಒಳಗೆ ಬಿಟ್ಟು, ಹಳೆಯ ಶುಭ್ರ ಲುಂಗಿಯೊಂದನ್ನು ಬಾಗಿಲಿಗೆ ಆನಿಸಿ, ದುರ್ಬೀನಿಗೆ ಬೆಳಕು ಹಾಯಿಸಿ ರೀಲು ಹಿಡಿದರೆ ಮನೆಯಲ್ಲೂ ಸಿನಿಮಾ. ಆದರೆ ಆ ಚಿತ್ರಗಳನ್ನು ಚಲಿಸುವಂತೆ ಮಾಡುವ ಸಾಧ್ಯತೆ ಇರಲಿಲ್ಲವಾದ್ದರಿಂದ ನಮ್ಮದು ಸ್ಥಿರ ಚಿತ್ರಗಳ ಹೋಮ್ ಥಿಯೇಟರ್.

ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಇಂಗ್ಲೀಷ್ ಚಿತ್ರಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು (ವಯಸ್ಕರ ಚಿತ್ರಗಳೂ ಸೇರಿದಂತೆ). ಇಂಡೋ ಓರಿಯೆಂಟಲ್ ಸಂಸ್ಥೆ ನಿರ್ಮಿಸುತ್ತಿದ್ದ ಜಪಾನಿ, ಚೀನಿ ಹಾಗೂ ಇಂಗ್ಲೀಷ್ ಭಾಷೆಗಳ ಚಿತ್ರಗಳು ನಮ್ಮ ಹಾಟ್ ಫೇವರಿಟ್. ಜಾಕಿ ಚಾನ್, ಜೆಟ್ ಲೀಯಂತಹ ನಾಯಕರ ಕುಂಗ್ ಫೂ, ಕರಾಟೆ ಚಿತ್ರಗಳು ಮನಸ್ಸಿಗೆ ಖುಷಿ ಹಾಗೂ ಕಾಲೇಜಿನಲ್ಲಿ ಹೊಡೆದಾಟಕ್ಕೆ ಸ್ಪೂರ್ತಿ. ಹಿಂದಿ ಸಿನೆಮಾಗಳೆಂದರೆ ಹೊಡೆದಾಟ, ನಟಿಯ ಮೈ ಪ್ರದರ್ಶನ, ಮಧ್ಯೆ ಕಾಮದ ದೃಶ್ಯವಿರಬೇಕು ಎಂಬ ನಿಯಮ. ಅಪ್ರಾಪ್ತರಾದರೂ ವಯಸ್ಕರ ಚಿತ್ರಗಳನ್ನು ನೋಡುವ ಖುಷಿಯೇ ಬೇರೆ. ಚಿತ್ರ ಪ್ರಾರಂಭಗೊಂಡ ನಂತರ ಥೇಟರ್‌ನಲ್ಲಿ ಪಾದಾರ್ಪಣೆ ಮಾಡಿ, ಇಂಟರ್‌ವೆಲ್‌ನಲ್ಲಿ ಶೌಚಾಲಯದಲ್ಲಿ ಅಡಗಿ, ಕೊನೆಯ ದೃಶ್ಯ ಮುಗಿಯುವ ಮೊದಲೇ ಕಾಲು ಕಿತ್ತುವುದು ಆಗಿನ ಹವ್ಯಾಸ.

ಆದರೆ ಸಿನೆಮಾ ಎಂದರೆ ಇಷ್ಟೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು ದೂರದರ್ಶನ ಹಾಗೂ ಡಿಡಿ ಮೂವಿ ಚಾನೆಲ್‌ಗಳು. ದೂರದರ್ಶನದಲ್ಲಿ ವಾರಕ್ಕೊಂದು ಬಾರಿ ಪ್ರಸಾರವಾಗುತ್ತಿದ್ದ ಪ್ರಶಸ್ತಿ ವಿಜೇತ ಚಿತ್ರಗಳೂ, ಡಿಡಿ ಮೂವಿಯಲ್ಲಿ ಪ್ರಸಾರವಾಗುತ್ತಿದ್ದ ಬೇರೆ ದೇಶಗಳ ಚಿತ್ರಗಳೂ ಕಲಾತ್ಮಕ ಚಿತ್ರಗಳ ಬಗ್ಗೆ ಆಸಕ್ತಿ ಬೆಳೆಸಿದವು. ೩೦ರ ಆಸುಪಾಸು ವಯಸ್ಸು ಹೊರಳಾಡುತ್ತಿದ್ದಂತೆ ಅಕಿರಾ ಕುರಾಸೊವಾ, ಮೊಹಮ್ಮದ್, ಶ್ಯಾಂ ಬೆನಗಲ್, ವಿಶಾಲ್ ಭಾರಧ್ವಾಜ್‌ರಂತಹವರು ಮೋಡಿ ಮಾಡಿದರು. ಸಿನೆಮಾ ಸಂದೇಶ ನೀಡಲು ಸಾಧ್ಯವಿಲ್ಲ ಎನ್ನುವುದು ಒಂದಿಷ್ಟು ನಿರ್ದೇಶಕರ ಮಾತು, ಆದರೆ ಚಿತ್ರವನ್ನಷ್ಟೇ ನಿರ್ಮಿಸಿ ಸಂದೇಶವನ್ನು ಜಾಣ ಪ್ರೇಕ್ಷಕರಿಗೆ ಬಿಡುವುದು ಚತುರ ನಿರ್ದೇಶಕರ ಕ್ರಿಯಾಶೀಲತೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಕಮೀನೆ ಚಿತ್ರದ ಫಟಾಕ್ ಹಾಡು ಇಂತಹ ಸಂದೇಶಕ್ಕೊಂದು ಉದಾಹರಣೆ. ಸಭ್ಯತೆಯ ಪರಿಯಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಫಟಾಕ್ ಚಿಕ್ಕಮಕ್ಕಳಲ್ಲೂ ಸುರಕ್ಷಿತ ಲೈಂಗಿಕತೆ ಬಗ್ಗೆ ಜ್ಞಾನ ಮೂಡಿಸಲು ಸಹಕಾರಿ. ಇನ್ನು ಅಕಿರಾ ರಂತಹವರು ಏನೂ ಹೇಳದೇ ಎಲ್ಲವನ್ನೂ ಹೇಳುವ ಸಾಮರ್ಥ್ಯವುಳ್ಳವರು. ಶ್ಯಾಂ ಬೆನಗಲ್ ಜೀವನದ ನಾನಾ ಸಮಸ್ಯೆಗಳನ್ನು ಹಾಸ್ಯದ ಮೂಲಕ ಹೇಳಿದರು. ಪುಟ್ಟಣ್ಣರಂತಹ ಹಿರಿಯರು ದುರಂತವನ್ನೂ ಸುಮಧುರವಾಗಿ ಚಿತ್ರಿಸಿದರು.

ಸಿನೆಮಾ ಎಂದರೆ ಬದುಕು ಹಾಗೂ ಬದುಕಿನ ಸುತ್ತ ಮುತ್ತ ಓಲಾಡುವ ಭಾವನೆಗಳನ್ನು ಪ್ರತಿಬಿಂಬಿಸುವುದು ಎನ್ನುವುದು ನನ್ನ ಭಾವನೆ. ಪೌರಾಣಿಕ, ಸಾಮಾಜಿಕ, ಯುದ್ಧದ ಭೀಕರತೆ, ಪ್ರೇಮ, ಕಾಮ, ಬಡತನ, ಹಸಿವು ಹೀಗೆ ಜೀವನವನ್ನೇ ವಿಭಿನ್ನ ದೃಷ್ಟಿಕೋನಗಳಲ್ಲಿ ತೋರಿಸುವುದು ಸಿನಿಮಾ. ನಾವು ಮಾಡುವ ಅಥವಾ ಮಾಡಲಾಗದ ಸಾಧ್ಯತೆಗಳನ್ನೇ ತೆರೆದಿಡುವುದು ಸಿನೆಮಾ. ಹಾಗಾಗಿ ಸಿನೆಮಾ ಎಂದರೆ ಬದುಕು, ಬದುಕು ಎಂದರೆ ಸಿನಿಮಾ.