Sunday, June 14, 2009

ಸಿನೆಮಾ ಥೇಟರ್ ಎಂಬ ಮಾಯಾವಿ !ಮೈಲುದ್ದ ಕ್ಯೂನಲ್ಲಿ ಕಸರತ್ತು ಮಾಡಿ ಟಿಕೇಟ್ ಪಡೆದು ಸ್ನೇಹಿತರಿಗಾಗಿ ಕುರ್ಚಿ ಹಿಡಿಯಲು ಕರ್ಚೀಫ್ ಹಾಕಿ ಬರುತ್ತಿದ್ದ ಬೆವರು ಒರೆಸಿಕೊಳ್ಳುವಷ್ಟರಲ್ಲಿ ಚಿತ್ರಮಂದಿರ ತುಂಬಿ ತುಳುಕಲು ಪ್ರಾರಂಭ. ಆಹ್ ! ಅದೆಂಥ ಲೋಕ. ಮೊದಲ ಬಾರಿಗೆ ಸಿನೆಮಾ ಥೇಟರ್ ಎಂಬ ಮಾಯಾಲೋಕದೊಳಗೆ ಪ್ರವೇಶಿಸಿದ, ತಂದೆ ತಾಯಿ ಕೈ ಹಿಡಿದು ಕಣ್ಣು ಹೊಡೆಯುವ ಬಣ್ಣ, ಬಣ್ಣದ ಲೈಟುಗಳನ್ನು ನೋಡುತ್ತ ಕಾಲಿಡುವ ಚಿಣ್ಣರು, ನಮ್ಮಂತೆ ಶಾಲೆಯ ಪಿರಿಯಡ್ ತಪ್ಪಿಸಿ ಬಂದ ಸಹಪಾಠಿಗಳು, ಪಕ್ಕದ ಹೈಸ್ಕೂಲಿನ ಬೇರೆಯವರ ಗೆಳತಿಯರು, ಕಾಲೇಜು ಮೆಟ್ಟಿಲೇರಿ ಠೀವಿಯಿಂದ ಬಂದ ಸೀನಿಯರ್‌ಗಳು, ಫೆವಿಕಾಲ್ ಅಂಟಿಸಿದಂತೆ ಕೈ, ಮೈ, ಸೋಕಿಸಿಕೊಂಡು ಸೀಟು ಹುಡುಕುವ ನವದಂಪತಿ, ಸಂಸಾರದೊಂದಿಗೆ ಚಿತ್ರ ವೀಕ್ಷಣೆಗೆ ಬಂದವರು, ಪುರಾತನ ಕಾಲದಿಂದ ಚಿತ್ರ ವೀಕ್ಷಣೆ ಹವ್ಯಾಸವಾಗಿಸಿಕೊಂಡ ಹಿರಿಯರು....ಅದು ನಿಜಕ್ಕೂ ಮಾಯಾ ಲೋಕ ಅರ್ಥಾತ್ ಚಿತ್ರಮಂದಿರ.
ಎಲ್ಲರೂ ತಮ್ಮ ಕುರ್ಚಿಗಳನ್ನು ಭದ್ರಪಡಿಸಿಕೊಂಡು ಕುಳಿತುಕೊಳ್ಳುತ್ತಿದ್ದಂತೆ ಟ್ರಿಂಗ್ ಎಂಬ ಬೆಲ್ಲು. ಮಾತಿಗೆ ವಿರಾಮ, ಲೈಟುಗಳು ಕಣ್ಣು ಮುಚ್ಚಿದೊಡನೆ ಎಲ್ಲೆಡೆ ಕತ್ತಲೆ, ಮಾತಿಗೆ ವಿರಾಮ. ಬೃಹತ್ ಪರದೆಯ ಮೇಲೆ ಫಿಲ್ಮ್ ಡಿವಿಶನ್ ನಿರ್ಮಿಸಿದ ಗಾಂ, ಚಾಚಾ ನೆಹರೂರ ಸಾಕ್ಷ್ಯ ಚಿತ್ರ, ನಂತರ ವಿಕೋ ವಜ್ರದಂತಿ, ನಿರ್ಮಾ ಜಾಹೀರಾತು. ಬಿಡುಗಡೆ ಕಾಣಲಿರುವ ಚಿತ್ರಗಳ ಟ್ರೇಲರ್‌ಗಳು. ಚಿತ್ರ ಶುರುವಾಗುವ ಹೊತ್ತಿಗೆ ಹೊಸ ಲೋಕ ಸೃಷ್ಟಿಸಿದ ಅನುಭವ.
ಚಿತ್ರ ವೀಕ್ಷಣೆಯೆನ್ನುವುದನ್ನು ಅಕ್ಷರಶ: ಆಕರ್ಷಕವಾಗಿಸಿದ್ದು ಸಿನೆಮಾ ಥೇಟರ್‌ಗಳು. ಫ್ಯಾನ್ ಗಾಳಿಗೆ ಮುಖ ಸೋಕಿಸಿ ಚಿತ್ರ ವೀಕ್ಷಿಸಲು ಪ್ರಾರಂಭಿಸಿದರೆ ಹೊರಗಿನ ಲೋಕದ ಬಗ್ಗೆ ಡೋಂಟ್ ಕೇರ್. ವಿರಾಮದ ಸಮಯದಲ್ಲಿ ಮಿರ್ಚಿ ಭಜಿ (ಆಗ ಪಾಪ್ ಕಾರ್ನ್ ಇರಲಿಲ್ಲ), ವಡಾ ಪಾವ್, ಚಿಪ್ಸ್‌ಗಳ ಭರಾಟೆ. ಮತ್ತೆ ವಾಪಸ್ ಬಂದು ಕುಳಿತರೆ ಒಂದೂವರೆ ಗಂಟೆ ಭರ್ತಿ ಮನರಂಜನೆ. ಸಿನಿಮಾ ಥೇಟರ್ ಎಂಬ ಮಾಯಾವಿ ಆಗಿನಿಂದಲೂ ಈಗಿನವರೆಗೂ ಅದೇ ಆಕರ್ಷಣೆ ಉಳಿಸಿಕೊಂಡಿದೆ ಒಂದರ್ಥದಲ್ಲಿ ಇದು ಸದಾ ಸ್ವೀಟ್ ಸಿಕ್ಸ್‌ಟೀನ್.
ಐಮ್ಯಾಕ್ಸ್, ಮಲ್ಟಿಪ್ಲೆಕ್ಸ್, ೩ ಡಿ, ೬ ಡಿ, ಡಿಟಿಎಸ್, ಸ್ಯಾಟ್‌ಲೈಟ್ ಸ್ಕ್ರೀನಿಂಗ್ ಹೀಗೆ ಹೊಸ, ಹೊಸ ಅವಶೇಷಗಳು ಸೇರ್ಪಡೆಯಾಗಿದ್ದರೂ ಸಿನಿಮಾ ಥೇಟರ್ ನೀಡುವ ಮಜ ಸಾರ್ವಕಾಲಿಕ.
ಆಗೆಲ್ಲ ಸಿನಿಮಾ ಪೋಸ್ಟರ್‌ಗಳನ್ನೇ ನಂಬಿಕೊಂಡು ಸಿನಿಮಾ ನೋಡಬೇಕು, ಪರಿಚಿತ ತಾರೆಯರಿದ್ದರೆ ಸಿನಿಮಾ ವೀಕ್ಷಣೆಗೆ ಮನಸ್ಸು ಮಾಡಬೇಕು. ಇಲ್ಲವಾದರೆ ಇದು ಉತ್ತಮ ಚಿತ್ರ ಎಂಬ ಬಗ್ಗೆ ನೆರೆ, ಹೊರೆಯವರಿಂದ ಸರ್ಟಿಫಿಕೇಟ್ ದೊರೆತ ನಂತರವೇ ಚಿತ್ರ ವೀಕ್ಷಿಸಬೇಕು. ಈಗಿನಂತೆ ಆಗ ಟಿವಿಗಳಲ್ಲಿ ಟ್ರೇಲರ್‌ಗಳೂ, ತಾರೆಯರ ಆತ್ಮವಿಶ್ವಾಸದ ನುಡಿಗಳೂ, ಪ್ರೋಮೊಗಳೂ ಇರಲಿಲ್ಲ, ಪತ್ರಿಕೆಗಳಲ್ಲಿ ಬರುವ ವಿಮರ್ಶೆ, ಹಿಂದೊಮ್ಮೆ ಚಿತ್ರ ನೋಡಲು ತೆರಳಿದಾಗ ನೋಡಿದ ಟ್ರೇಲರ್‌ಗಳೇ ಚಿತ್ರ ವೀಕ್ಷಣೆಗೆ ಪೂರಕ ಪರಿಕರ. ಅಷ್ಟಕ್ಕೂ ಚಿತ್ರ ವೀಕ್ಷಣೆ ಎನ್ನುವುದು ಹವ್ಯಾಸದ ಪಟ್ಟಿಯಲ್ಲೂ ಇರಲಿಲ್ಲ. ಚಿತ್ರದಲ್ಲೂ ಆಂಗ್ರಿ ಯಂಗ್ ಮ್ಯಾನ್, ಸುಂದರ ನಟಿ, ಒಂದು ಕ್ಯಾಬರೆ, ನಾಲ್ಕು ಫೈಟ್, ಖಳನಾಯಕನ ವಿಕಟನಗೆ ಇದ್ದರಷ್ಟೇ ಅದು ಚಿತ್ರ ಎಂಬ ಭಾವನೆ. ಈಗ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗಾಗಿ ಬೇರೆ ಚಿತ್ರ, ಯುವಜನತೆಗಾಗಿ ಪ್ರತ್ಯೇಕ ಚಿತ್ರ, ಚಿಣ್ಣರಿಗಾಗಿ ಮತ್ತೊಂದು ಚಿತ್ರ, ಕಲಾತ್ಮಕ ಜೀವಿಗಳಿಗಾಗಿ ಮಗದೊಂದು ಚಿತ್ರ ಎನ್ನುವ ವಿಭಾಗಗಳಿವೆ. ಈಗ ಚಿತ್ರ ನೋಡಲೇಬೇಕು ಎಂದಾದರೆ ಆಯ್ಕೆಗೆ ಇಂಟರ್‌ನೆಟ್, ಟಿವಿಯಂತಹ ಹಲವಾರು ಆಯ್ಕೆಗಳಿವೆ.
ಚಿತ್ರಮಂದಿರಗಳೂ ಈಗ ಅಕ್ಷರಶ: ಮಾರ್ಕೆಟಿಂಗ್ ತಜ್ಞರ ಕನಸಿನ ಕೂಸು. ಒಮ್ಮೆ ಕಾಲಿಟ್ಟರೆ ಫರ್ನಿಚರ್, ಬೈಕ್, ಕಾರ್‌ನಿಂದ ಹಿಡಿದು ಅಂಡರ್‌ವೇರ್‌ವರೆಗೆ ಎಲ್ಲವನ್ನೂ ಖರೀದಿಸಿ ನಂತರ ಅದೇ ಸೂರಿನಲ್ಲಿ ಸಿನಿಮಾ ನೋಡಿ ಬರುವ ಪದ್ಧತಿ. ಆಗ ಚಿತ್ರಮಂದಿರವೆಂದರೆ ಕೇವಲ ಸಿನಿಮಾ ವೀಕ್ಷಣೆಗೆ ಮಾತ್ರ ಮೀಸಲು ಎಂಬ ನಿಯಮ. ಆದರೆ ಬಹುತೇಕ ಬಿ, ಸಿ ಕೇಂದ್ರಗಳಲ್ಲಿ ಈಗಲೂ ಸಿನಿಮಾ ಥೇಟರ್ ಎಂಬುದು ಕಡ್ಡಾಯವಾಗಿ ಸಿನೆಮಾ ವೀಕ್ಷಣೆಗೆ ಮಾತ್ರ ಎನ್ನುವ ಸ್ಥಿತಿಯಿದೆ.
೧೫ ರೀಲುಗಳ ಬೃಹತ್ ಸಿನಿಮಾದ ಮಧ್ಯೆ ರೀಲು ಕಟ್ ಆಗುವುದು, ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಚಿತ್ರ ಪ್ರಾರಂಭಿಸಿ ಎಂದು ನೀಡುತ್ತಿದ್ದ ಸಂದೇಶ ಈಗಿಲ್ಲ. ಕರೆಂಟು ಹೋದೊಡನೆ ಚಿತ್ರ ಮಂದಿರಗಳ ಲೈಟುಗಳು ಕಣ್ಣು ಬಿಡುತ್ತಿದ್ದವು. ಆಪರೇಟರ್ ರಿವೈಂಡ್ ಆದ ರೀಲು ಸರಿಪಡಿಸಿ ಮೊದಲಿದ್ದ ದೃಶ್ಯ ಹೊಂದಿಸುವಷ್ಟರ ವೇಳೆಗೆ ಪ್ರೇಕ್ಷಕರಿಗೆ ಅಲ್ಪ ವಿರಾಮ. ಸಿನಿಮಾ ಪ್ರಾರಂಭಕ್ಕೂ ಮುನ್ನ ಸ್ಟಿರಿಯೋಗಳಲ್ಲಿ ಕೇಳಿ ಬರುತ್ತಿದ್ದ ದೇವರ ನಾಮ, ವಿರಾಮದಲ್ಲಿ ತೋರಿಸಲಾಗುತ್ತಿದ್ದ ನಾನಾ ಸಂಸ್ಥೆಗಳ ಜಾಹೀರಾತು ಸ್ಲೈಡ್‌ಗಳು ಈಗ ಕಂಡುಬರುವುದಿಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ ಥೇಟರ್‌ಗಳು ಬದಲಾವಣೆ ಕಂಡಿವೆ. ಆದರೆ ಹರಿದ ಕುರ್ಚಿ, ಸೆಕೆಯಂತಹ ಕಷ್ಟಗಳು ಇನ್ನೂ ಇವೆ. ಕಾಲಕ್ಕೆ ತಕ್ಕಂತೆ ಚಿತ್ರಮಂದಿರಗಳು ಬದಲಾವಣೆ ಕಂಡರೂ ಸಿನೆಮಾ ಥೇಟರ್ ಎಂಬ ಮಾಯಾವಿ ಇನ್ನೂ ಚಿರಂಜೀವಿಯಾಗಿದೆ. ವಯಸ್ಸಾದ ದೇವಾನಂದ್‌ನ ಮುಖದ ನಗೆಯಂತೆ, ಅಜ್ಜಿಯಾದರೂ ಮಾಸದ ಹೇಮಾ ಮಾಲಿನಿ ಕೆನ್ನೆಯ ಗುಳಿಯಂತೆ ಚಿತ್ರಮಂದಿರವೆಂಬ ಮಾಯಾ ಕನ್ಯೆ ಈಗಲೂ ಹೊಸ ಲೋಕ, ಹೊಸ ಭಾವ, ಹೊಸತನದ ಸೃಷ್ಟಿ ಮುಂದುವರಿಸಿದ್ದಾಳೆ ! ಸಿನಿಮಾ ಮಂದಿರ ಎಂಬ ಈ ಮಾಯಾಲೋಕಕ್ಕೆ ಈಗಲೂ ನಾವೆಲ್ಲ ಬೆರಗಾಗುತ್ತಿರುವುದೇ ಖುಷಿಯ ಸಂಗತಿ, ಅಲ್ಲವೇ ?