Thursday, December 31, 2009

ಶ್ರೀ ಕೃಷ್ಣದೇವರಾಯ ಬಿಡುಗಡೆಗೆ ಸಿದ್ಧಸ್ನೇಹಿತ, ಟಿವಿ೯ ನಿರೂಪಕ ಶಿವಪ್ರಸಾದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾನೆ. ಪ್ರತಿ ವರ್ಷ ಹೊಸ ಸಾಹಸವೊಂದನ್ನು ಮಾಡು ಎಂಬ ಮಾತು ಆತನ ಡೈರಿಯಲ್ಲಿ ದಾಖಲಾಗಿರುತ್ತದೆ. ಈ ಸಂಪ್ರದಾಯದ ಪ್ರಕಾರ ಈ ವರ್ಷವೂ ಮತ್ತೊಂದು ಸಾಹಸದ ಚಾರಣ ಮುಗಿದಿದೆ. ಹೆಗಲಿಗೆ ಕ್ಯಾಮೆರಾ, ಕೈಯಲ್ಲೊಂದು ಪುಸ್ತಕ, ಲ್ಯಾಪ್‌ಟಾಪ್ ಇದ್ದರೆ ಶಿವಾ ಹೊಸ ಸಾಹಸಕ್ಕೆ ಹೊರಟಿದ್ದಾನೆ ಎಂದರ್ಥ. ಹಿಮದಿಂದಾವೃತವಾದ ಅಮರ್‌ನಾಥ್, ಸೈನಿಕರ ಛಳಿಯನ್ನೂ ಬಿಡಿಸುವ ಕಾರ್ಗಿಲ್, ವೇಶ್ಯೆಯರ ದುರ್ಭರ ಬದುಕಿನ ಕಾಮಾಟಿಪುರ, ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ, ಮುಂಬೈನಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ವರದಿಗಳನ್ನು ಹೆಕ್ಕಿ ತಂದವನೀತ.
ಸುಭಾಷ್ ಸಾವಿನ ಸುತ್ತ, ಚಂದ್ರಯಾನ, ಜಲಿಯನ್‌ವಾಲಾಬಾಗ್ ಎಂಬ ಮೂರು ಪುಸ್ತಕಗಳನ್ನು ಈಗಾಗಲೇ ಬರೆದಿದ್ದಾನೆ. ಕರ್ನಾಟಕದ ಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಬಗ್ಗೆ ಹೊಸ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ್ದಾನೆ ಶಿವ. ತಾಳಿಕೋಟೆ, ಹಂಪಿ ಸೇರಿದಂತೆ ಕೃಷ್ಣದೇವರಾಯನ ಇತಿಹಾಸವಿರುವ ಎಲ್ಲ ಸ್ಥಳಗಳಲ್ಲೂ ಓಡಾಡಿದ್ದಾನೆ. ನಾನಾ ಗ್ರಂಥಗಳು, ಪ್ರವಾಸಿಗರ ಡೈರಿಗಳನ್ನೂ ಅಭ್ಯಸಿಸಿ ಈ ಹೊಸ ಪುಸ್ತಕ ಅಣಿಗೊಳಿಸಿದ್ದಾನೆ. ಕೃಷ್ಣದೇವರಾಯನ ಬಗ್ಗೆ ಗೊತ್ತಿರದ ಕೆಲ ಸಂಗತಿಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ವಿಶೇಷ. ಅಂದ ಹಾಗೆ ಜ.೪ ರಂದು ಬೆಂಗಳೂರಿನಲ್ಲಿ ಶಿವಪ್ರಸಾದನ ಹೊಸ ಪುಸ್ತಕ ಬಿಡುಗಡೆಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ಪ್ರಕಾಶ್ ಭಾಗವಹಿಸಲಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾರ್ದಿಕ ಸ್ವಾಗತ, ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ ಬನ್ನಿ, ಭಾಗವಹಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿ.

ಡಾ.ವಿಷ್ಣು ಪ್ರೀತಿ... ಶೇಂಗಾ ಉಂಡೆ !


ಬಾದಾಮಿಯಲ್ಲಿ ನಡೆದ ಹಿಮಪಾತ ಚಿತ್ರದ ಚಿತ್ರೀಕರಣದಲ್ಲಿ ಅಭಿಮಾನಿಯೊಂದಿಗೆ ವಿಷ್ಣು.ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಬಾದಾಮಿಯಲ್ಲಿ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದರು !.
ಅದು ೧೯೯೭, ಹಿಮಪಾತ ಚಿತ್ರದ ಚಿತ್ರೀಕರಣಕ್ಕಾಗಿ ಸುಹಾಸಿನಿಯವರೊಂದಿಗೆ ವಿಷ್ಣು ಬಾದಾಮಿಯಲ್ಲಿದ್ದರು. ಉದ್ಯಮಿ ಮಹಾಂತೇಶ ಮಮದಾಪುರ ಅವರ ಆಯಿಲ್ ಮಿಲ್‌ನಲ್ಲಿ ಎರಡು ದಿನ ಶೂಟಿಂಗ್ ನಡೆದಿತ್ತು.
ವಿರಾಮದ ವೇಳೆ ವಿಷ್ಣು ಹಾಗೂ ಮಹಾಂತೇಶ ಉಭಯ ಕುಶಲೋಪರಿ ವಿಚಾರಕ್ಕೆ ಕುಳಿತರು. ಬಾಯಿಯ ಸ್ವಚ್ಛತೆಗೆ ಎಣ್ಣೆ ಬಳಸುವ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಆಗಷ್ಟೇ ಖ್ಯಾತಿ ಪಡೆದಿತ್ತು. ಆಯಿಲ್ ಪುಲ್ಲಿಂಗ್‌ನಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದ ವಿಷ್ಣು ಈ ಹೊಸ ಚಿಕಿತ್ಸೆ ಬಂದ ಬಗೆ, ಅದರ ವಿಧಾನ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಶುದ್ಧ ಎಣ್ಣೆ ದೊರಕುವುದಿಲ್ಲ, ನಿಮ್ಮ ಮಿಲ್‌ನ ಸೂರ್ಯಕಾಂತಿ ಎಣ್ಣೆ ಕೊಡಿ ಎಂದರು. ತಾವು ತೆರಳುವಾಗ ಸೂರ್ಯಕಾಂತಿ ಎಣ್ಣೆಯ ಡಬ್ಬಿ ಒಯ್ದರು ಎಂದು ಮಹಾಂತೇಶ ನೆನಪಿಸಿಕೊಳ್ಳುತ್ತಾರೆ.
ಉತ್ತರ ಕರ್ನಾಟಕದ ಖಾದ್ಯಗಳೆಂದರೆ ವಿಷ್ಣು ಕಣ್ಣರಳಿಸುತ್ತಿದ್ದರು. ಮಹಾಂತೇಶರ ಮನೆಯಲ್ಲಿ ಉಪಹಾರಕ್ಕೆ ಬಂದಾಗ ವಿಷ್ಣು ಗಮನ ಹರಿದಿದ್ದು ಶೇಂಗಾ ಉಂಡಿಯೆಡೆಗೆ. ಆಹಾ ಇದು ಚೆನ್ನಾಗಿದೆ ಎಂದ ಸಾಹಸಸಿಂಹ ಉಂಡಿಯನ್ನೇ ಉಪಹಾರವಾಗಿಸಿಕೊಂಡರು. ನಂತರ ಸುಹಾಸಿನಿ, ವಿಷ್ಣು ವಾಪಸ್ಸಾಗುವಾಗ ಶೇಂಗಾ ಉಂಡಿ ಹಾಗೂ ಉತ್ತರ ಕರ್ನಾಟಕದ ನೆನಪು ಜತೆಗಿತ್ತು.
ಹಿಮಪಾತ ಚಿತ್ರೀಕರಣ ಬಾದಾಮಿಯ ಮೇಣಬಸದಿ, ಪಟ್ಟದಕಲ್ಲ, ಐಹೊಳೆ, ವಿಜಾಪುರದ ಗೋಳಗುಮ್ಮಟ, ಬಾರಾಕಮಾನ್‌ಗಳಲ್ಲಿ ನಡೆದಿತ್ತು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ವಿಷ್ಣು ವಿವರವಾಗಿ ಮಾಹಿತಿ ಪಡೆದಿದ್ದರು. ವಿಜಾಪುರದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಅವಳಿ ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಸಾಹಸಸಿಂಹನಿಗೆ ಸಾಧ್ಯವಾಗಲಿಲ್ಲ.

ಆಪ್ತ ಮಿತ್ರನ ನೆರವು...
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಸಿಂಹನ ಕಲಾ ಪ್ರೀತಿವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

Monday, December 28, 2009

ಮೂವರು ಮೂರ್ಖರು, ಒಂದು ಸಿನಿಮಾ !

ನಿಮ್ಮ ಮನಸ್ಸಿಗೆ ತೋಚಿದ್ದು ಮಾಡಿ-ಇಂತಹದೊಂದು ಸಂದೇಶ ಹೊತ್ತು ತೆರೆಗೆ ಬಂದಿದೆ ಆಮೀರ್ ಖಾನ್‌ರ ೩ ಈಡಿಯಟ್ಸ್. ಯುವಜನರ ಕನಸು, ವಾಸ್ತವ, ಶಿಕ್ಷಣ ವ್ಯವಸ್ಥೆ, ಪಾಲಕರ ಒತ್ತಡ...ಹೀಗೆ ನೂರಾರು ವಿಷಯಗಳನ್ನು ಒಂದೇ ಚಿತ್ರದ ಮೂಲಕ ಕಲರ್‌ಫುಲ್ ಆಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಅಂದ ಹಾಗೆ ಈ ಚಿತ್ರದ ಮೂಲ ಪ್ರೇರಣೆ ಖ್ಯಾತ ಲೇಖಕ ಚೇತನ್ ಭಗತ್‌ರ ಬೆಸ್ಟ್ ಸೆಲ್ಲರ್ ಕಾದಂಬರಿ `ಫೈ ಪಾಯಿಂಟ್ ಸಮ್ ವನ್'. ಕಾದಂಬರಿ ಚಿತ್ರವಾಗುವಾಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಚೇತನ್‌ರ ಬರಹದಲ್ಲಿ ಕಾಣುವ ಸ್ವಾರಸ್ಯ, ಕ್ಲೀಷೆ ಹಾಗೂ ವಿನೋದ ಚಿತ್ರದುದ್ದಕ್ಕೂ ಇದೆ.
ಮೂವರು ಸ್ನೇಹಿತರು ನೂರಾರು ಆಕಾಂಕ್ಷೆ ಹೊತ್ತು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಾಗ ನಡೆಯುವ ಘಟನಾವಳಿಗಳು ಚಿತ್ರದ ಹೂರಣ. ಸ್ನೇಹಿತರನ್ನು ಪ್ರೇರೆಪಿಸುವ, ಹೊಸತನಕ್ಕೆ ತುಡಿಯುವ `ಆಲ ಇಸ್ ವೆಲ್' ಎನ್ನುತ್ತ ನಗೆ ಉಕ್ಕಿಸುವ ಯುವಕನಾಗಿ ಆಮೀರ್ ಮಿಂಚಿದ್ದಾರೆ. ಪ್ರತಿ ದೃಶ್ಯದಲ್ಲೂ ವಿಭಿನ್ನ ಹಾವಭಾವದ ಮೂಲಕ ಯುವಕರಷ್ಟೇ ಅಲ್ಲ ಚಿಣ್ಣರ ಮನಸ್ಸನ್ನೂ ಆಮೀರ್ ಕೊಳ್ಳೆ ಹೊಡೆಯುತ್ತಾರೆ. ಇದೊಂಥರ ತಾರೆ ಜಮೀನ್ ಪರ್‌ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ.
ಮುನ್ನಾಭಾಯಿ ಖ್ಯಾತಿಯ ರಾಜ್‌ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರ್‍ಯಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ.
ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದಾರೆ. ವರ್ಷಕ್ಕೊಂದೇ ಚಿತ್ರದಲ್ಲಿ ಅಭಿನಯಿಸುವ ಆಮೀರ್ ಹಾಗೂ ವರ್ಷಕ್ಕೊಂದೇ ಚಿತ್ರ ನಿರ್ದೇಶಿಸುವ ರಾಜ್‌ಕುಮಾರ್ ಈ ವರ್ಷದ ಅಷ್ಟೂ ಪ್ರಶಸ್ತಿಗಳಲ್ಲೂ ತಮ್ಮ ಹೆಸರು ನೋಂದಾಯಿಸಲಿದ್ದಾರೆ. ಶರ್ಮನ್ ಜೋಶಿ, ಮಾಧವನ್, ಕರೀನಾ ಕಪೂರ್ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ಪರಾಶರ್ ಬಹಳ ದಿನಗಳ ನಂತರ ಮತ್ತೆ ನಟಿಸಿದ್ದಾರೆ.
ಈ ಚಿತ್ರವನ್ನೊಮ್ಮೆ ನೋಡಿದರೆ ಕಾಲೇಜು, ಅಲ್ಲಿನ ಸಖಿಯರು, ಟಪೋರಿ ಗೆಳೆಯರು, ಕ್ಯಾಂಟೀನ್...ಹೀಗೆ ಹರೆಯ ಜಮಾನಾ ಕಣ್ಣು ಮುಂದೆ ಬಿಚ್ಚಿಕೊಳ್ಳಲಿದೆ. ಚಿತ್ರದ ಕೊನೆಗೆ ಕಣ್ಣೂ ತೇವಗೊಳ್ಳುತ್ತದೆ. ಹಾಗಾದರೆ ಈ ಚಿತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಜತೆಗೆ `ಫೈವ್ ಪಾಯಿಂಟ್ ಸಮ್ ಒನ್' ಕೂಡ ಓದಿ.