Wednesday, February 25, 2009

ಬಾದಾಮಿಯಲ್ಲಿ `ನಾನಾ'ವತಾರ



ನಾನಾ ಪಾಟೇಕರ್ ಹಿಂದಿ ಚಿತ್ರರಂಗದ ವಿಲಕ್ಷಣ, ಪ್ರತಿಭಾವಂತ ನಟ. ನಾನಾ ಮಾಧ್ಯಮಗಳಿಂದ ದೂರವಿದ್ದರೂ ಸುದ್ದಿಯಾಗುತ್ತಾರೆ. ಹೆಚ್ಚು ಮಾತನಾಡುವುದಿಲ್ಲ, ಕೆಲಸಕ್ಕಷ್ಟೇ ಮಹತ್ವ. ಅಂಕುಶ್, ಪ್ರಹಾರ್, ಯಶವಂತ್, ಅಗ್ನಿ ಸಾಕ್ಷಿಯಂತಹ ಗಂಭೀರ ಚಿತ್ರಗಳೊಂದಿಗೆ ವೆಲ್‌ಕಮ್‌ನಂತಹ ಹಾಸ್ಯ ಭರಿತ ಚಿತ್ರಗಳ ಮೂಲಕವೂ ಜನರಿಗೆ ಚಿರಪರಿಚಿತ ಈ ನಟ.
ಗಿದ್‌ನಂತಹ ಕಲಾತ್ಮಕ ಚಿತ್ರದಲ್ಲಿ ತಲೆಹಿಡುಕ, ಕ್ರಾಂತಿವೀರ್‌ನಲ್ಲಿ ಕ್ರಾಂತಿಕಾರಿ ಯುವಕ, ಯಶವಂತ್‌ನಲ್ಲಿ ಪೊಲೀಸ್ ಅಕಾರಿ ಪಾತ್ರದೊಂದಿಗೆ ಅಗ ಅಂಬಾ ಬಾಯಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು ಈ ನಾನಾ. ಗಣೇಶ ಚತುರ್ಥಿಯಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸದೆ ಮನೆಯಲ್ಲಿದ್ದುಕೊಂಡು ಗಣೇಶನ ಆರಾಧನೆ ನಡೆಸುವ ಈ ನಟನಿಗೆ ಕಂಟ್ರಿ ಸಾರಾಯಿ ಅಂದ್ರೆ ಪಂಚ ಪ್ರಾಣ. ರಾಷ್ಟ್ರೀಯ ಮಟ್ಟದ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ, ಹೊಸತನಕ್ಕೆ ತುಡಿಯುವ ಈ ನಟನ ಕಂಡರೆ ನನಗೇಕೋ ಭಾಳ ಪ್ರೀತಿ. ಇಂತಿಪ್ಪ ನಾನಾ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಾಗ ಸಂದರ್ಶನ ನಡೆಸಲು ಪ್ರಯತ್ನಿಸಿದ್ದೆ. ಆದರೆ ಮಾಧ್ಯಮದವರಿಂದ ಒಂದಡಿ ದೂರ ಉಳಿಯುವ ನಾನಾರಿಂದಾಗಿ ಪ್ರಯತ್ನ ವಿಫಲವಾಗಿತ್ತು.
ಆದರೆ ೨೦೦೬ರಲ್ಲಿ ನಾನಾ ಬಾದಾಮಿಯಲ್ಲಿ ರಾಣಾ ತೆಲಗು ಹಾಗೂ ತಮಿಳು ಚಿತ್ರದ ಶೂಟಿಂಗ್‌ಗೆ ಬಂದಿದ್ದರು. ಅಂತಹ ಅವಕಾಶ ಬಿಡಲು ಹೇಗೆ ಸಾಧ್ಯ ?. ಮರು ದಿನವೆ ಬಾದಾಮಿಯಲ್ಲಿದ್ದೆ, ನೆಚ್ಚಿನ ನಟನ ಸಂದರ್ಶನ ನಡೆಸಲು. ಗುಹಾಂತರ ದೇವಾಲಯದಲ್ಲಿ ನಾನಾ ನಟಿ ಕಾಜೋಲ್ ಅಗರವಾಲ್ ಜತೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಬಿಡುವಿನ ಸಮಯದಲ್ಲಿ ಆಟೋಗ್ರಾಫ್ ಕೇಳಲು ಬಂದ ಇಬ್ಬರನ್ನು ದಬಾಯಿಸಿದರು. ಅಷ್ಟರಲ್ಲೇ ಯುನಿಟ್‌ನ ಹುಡುಗರು ನೀವು ಈಗ ಸಂದರ್ಶನಕ್ಕೆ ಹೋದರೆ ಅವರು ಹತ್ತಿರಕ್ಕೆ ಕರೆಯುವುದಿಲ್ಲ ಸ್ವಲ್ಪ ತಡೆಯಿರಿ, ಅವರ ಮೂಡ್ ಕೆಟ್ಟರೆ ಪ್ಯಾಕಪ್ ಮಾಡಬೇಕಾಗುತ್ತದೆ ಎಂದು ಹೆದರಿಸಿದರು.
ನಾನಾ ಸಂದರ್ಶನ ಪಡೆಯಲೇಬೇಕು ಎಂದು ಪಣ ತೊಟ್ಟಿದ್ದ ನಾನು ಅಲ್ಲಿದ್ದ ವಾತಾಪಿ ಗಣಪತಿಗೆ ಏನಾದರೂ ಮಾಡಪ್ಪಾ ದೇವಾ ಎಂದು ಬೇಡಿಕೊಂಡೆ. ಶೂಟಿಂಗ್ ಮುಗಿಸಿದ ನಾನಾ ದೇವಾಲಯದ ಮೆಟ್ಟಿಲು ಇಳಿಯತೊಡಗಿದರು. ತಕ್ಷಣ ಧಾವಿಸಿದ ನಾನು ಪರಿಚಯ ಮಾಡಿಕೊಂಡು ನಿಮ್ಮನ್ನೊಂದಿಷ್ಟು ಪ್ರಶ್ನೆ ಕೇಳಬೇಕು ಎಂದೆ. ಹೂ ಅಂದರು ನಾನಾ.
ಹೀಗೆ ಶುರುವಾದ ವಾಕ್ ಇನ್ ಟಾಕ್ ಸಂದರ್ಶನದಲ್ಲಿ ನನ್ನ ಮೊದಲ ಪ್ರಶ್ನೆ, ನೀವು ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದೀರಿ ಹೇಗನಿಸುತ್ತೆ ? ಕರ್ನಾಟಕ ಉತ್ತಮ ಪ್ರದೇಶ ಎಂದು ನನ್ನತ್ತ ನೋಡಿದರು ನಾನಾ. ಮೊದಲ ಪ್ರಶ್ನೆ ಪೀಠಿಕೆ ಸರಿಯಾಗಲಿಲ್ಲ ಎಂದು ಮತ್ತೊಂದು ಪ್ರಶ್ನೆ ಕೇಳುವ ಭರದಲ್ಲಿ ನೀವು ಪರಿಂದಾ ಚಿತ್ರಕ್ಕಾಗಿ ಬೆಳಗಾವಿಗೆ ಬಂದಿದ್ದೀರಿ, ಹೇಗಿತ್ತು ಅನುಭವ ? ಅದು ಪರಿಂದಾ ಅಲ್ಲ ಪ್ರಹಾರ್ ಎಂದು ಸರಿಪಡಿಸಿದರು ಅವರು.
ನೀವು ರಾಷ್ಟ್ರೀಯ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದೀರಿ, ಚಿತ್ರಗಳಲ್ಲೂ ಅಭಿನಯಿಸುತ್ತೀರಿ ಎರಡನ್ನೂ ನಿಭಾಯಿಸುವುದು ಹೇಗೆ ? ನನಗೆ ಶೂಟಿಂಗ್ ಅಂದ್ರೆ ಇಷ್ಟ, ಅದು ಫಿಲ್ಮ್ ಆಗಿರಲಿ ಅಥವಾ ಗನ್ ಆಗಿರಲಿ. ಒಂದು ವರ್ಷ ಒಂದೇ ಚಿತ್ರ ಎನ್ನುವ ನಿಯಮಕ್ಕೆ ಅಂಟಿಕೊಂಡಿರುವುದರಿಂದ ನಿಭಾಯಿಸುತ್ತೇನೆ. ಟ್ಯಾಕ್ಸಿ ೯೨೧೧ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡಿದ್ದೀರಿ, ತೀರಾ ಸೀರಿಯಸ್ ಪಾತ್ರ ಬಯಸುವ ನೀವು ಅದನ್ನು ಹೇಗೆ ಒಪ್ಪಿಕೊಂಡಿರಿ ? ಹಾಗೆನಿಲ್ಲ ಅದು ಹಾಸ್ಯದಂತೆ ಕಂಡರೂ ಸೀರಿಯಸ್ ಪಾತ್ರವೆ. ನಟನೊಬ್ಬನ ಸಾಮರ್ಥ್ಯ ಪ್ರದರ್ಶನಕ್ಕೆ ಎಲ್ಲ ಬಗೆಯ ಪಾತ್ರಗಳು ಅವಶ್ಯ. ರಾಣಾ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ, ನಾನು ಸಿನಿಮಾ ನಿರ್ದೇಶಕ. ಬಾಲಿವುಡ್‌ನ ಸಿನಿಮಾಕ್ಕೆ ಸಂಬಂಸಿದಂತೆ ಚಿತ್ರದ ಕಥೆಯಿದೆ ಎನ್ನುವ ಉತ್ತರ ದೊರೆಯಿತು. ಇನ್ನೆರಡು ಪ್ರಶ್ನೆ ಕೇಳುವಷ್ಟರಲ್ಲಿ ಮೆಟ್ಟಿಲು ಇಳಿದಾಗಿತ್ತು. ಹವಾನಿಯಂತ್ರಿತ ವಾಹನದತ್ತ ನಾನಾ ಪಾದ ಬೆಳೆಸಿದರು. ನಾನು ನಿಮ್ಮ ಚಿತ್ರಗಳ ಅಭಿಮಾನಿ ಎಂದಾಗ ನಾನಾ ಮೊಗದಲ್ಲಿ ನಗು, ನನಗೊಂದು ಥ್ಯಾಂಕ್ಸ್ ಕೊಟ್ಟು ಹೊರಟೇ ಬಿಟ್ಟರು. ಹೀಗೆ ವಿಲಕ್ಷಣ ನಟನೊಬ್ಬನ ಸಂದರ್ಶನ ಮಾಡಿದ ಖುಷಿ, ನೆಚ್ಚಿನ ನಟನ ಮಾತನಾಡಿಸಿದ ತೃಪ್ತಿ ದೊರೆಯಿತು. ನಮ್ಮ ಪತ್ರಿಕೆಯಲ್ಲಿ ಹಾಗೂ ಸಿನಿ ವಿಜಯದಲ್ಲಿ ಸಂದರ್ಶನವೂ ಪ್ರಕಟವಾಯಿತು. ಅಂದ ಹಾಗೆ ಇಷ್ಟೆಲ್ಲ ಹೇಳಲು ಕಾರಣವೆಂದರೆ ಬಾದಾಮಿಯಲ್ಲಿ ಚಿತ್ರೀಕರಣಗೊಂಡ ರಾಣಾ ಚಿತ್ರ ಈಗ ಬಿಡುಗಡೆಯಾಗಿದೆ.