Sunday, January 3, 2010

೩ ಈಡಿಯಟ್ಸ್ ವಿವಾದ


ಅದು ನನ್ನದೇ ಕತೆ ಅನ್ನೋದು ಚೇತನ್ ಭಗತ್ ಉವಾಚ. ಹಾಗೇನಿಲ್ಲ ಅದು ನನ್ನ ಸ್ವಂತ ಕತೆ ಅಂತಾರೆ ಕತೆಗಾರ ಅಭಿಜಿತ್ ಜೋಶಿ. ಮಾಧ್ಯಮದವರು ಬಾಯ್ಮುಚ್ಚಿ ಎನ್ನುವುದು ವಿಧು ವಿನೋದ್ ಚೋಪ್ರಾ ಫರ್ಮಾನು. ವಾರವೊಂದರಲ್ಲಿ ೧೮೦ ಕೋಟಿ ರೂ. ಗಳಿಸಿ ವರ್ಷದ ಕೊನೆಯ ಹಿಟ್ ಚಿತ್ರವೆಂಬ ಹಣೆಪಟ್ಟಿ ಅಂಟಿಸಿಕೊಳ್ಳುತ್ತಿರುವ೩ ಈಡಿಯಟ್ಸ್ ಚಿತ್ರದ ತಾಜಾ ವಿವಾದವಿದು.
ಫೈವ್ ಪಾಯಿಂಟ್ ಸಮ್ ವನ್ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ ಎನ್ನುವುದಂತೂ ಪುಸ್ತಕ ಪ್ರಿಯರಿಗೆ ಚೆನ್ನಾಗಿ ಗೊತ್ತು. ಚಿತ್ರದ ಸಣ್ಣ, ಪುಟ್ಟ ಬದಲಾವಣೆ ಹೊರತುಪಡಿಸಿದರೆ ಪಾತ್ರಧಾರಿಗಳೂ ಸೇರಿದಂತೆ ಚಿತ್ರದ ಲೋಕೇಶನ್ ಸಹ ಫೈವ್...ನಂತಿವೆ. ನನ್ನ ಕಾದಂಬರಿಯನ್ನೇ ಭಟ್ಟಿ ಇಳಿಸಿ ನನಗೆ ಕ್ರೆಡಿಟ್ ಕೊಡದಿದ್ದರೆ ಹೇಗೆ ಎನ್ನುವುದು ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಪ್ರಶ್ನೆ. ಚಿತ್ರ ನಿರ್ಮಾಣ ಹಂತದಲ್ಲಿದ್ದಾಗ ಇದು ನನ್ನ ಕಾದಂಬರಿ ಆಧಾರಿತ ಎಂಬುದು ಗೊತ್ತಾಗಿತ್ತು. ನನಗೂ ಟೈಟಲ್ ಕಾರ್ಡ್‌ನಲ್ಲಿ ಕ್ರೆಡಿಟ್ ಕೊಡಬಹುದು ಎಂದುಕೊಂಡಿದ್ದೆ. ಆದರೆ ಸಿನಿಮಾದ ಮಂದಿ ನನ್ನ ಹೆಸರು ಕಾದಂಬರಿಯನ್ನೂ ಮರೆತಿದ್ದಾರೆ. ಅಪಾರ ಅಭಿಮಾನಿಗಳು ಈ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ, ನಾನೇನು ಉತ್ತರ ಕೊಡಲಿ ?. ಚಿತ್ರ ಬಿಡುಗಡೆಗೂ ಮುನ್ನ ನನ್ನನ್ನು ಕರೆದ ವಿಧು ವಿನೋದ್ ಚೋಪ್ರಾ ನಾವು ಸ್ನೇಹಿತರಾಗಿರೋಣ ಎಂದೆಲ್ಲ ಹೇಳಿದ್ದರು. ಈಗ ಅನಾಗರಿಕ ವರ್ತನೆ ಮಾಡುತ್ತಿದ್ದಾರೆ ಎಂಬುದು ಚೇತನ್ ಆರೋಪ.
ಆದರೆ ಚಿತ್ರದ ನಿರ್ಮಾಪಕ ವಿಧು ಹೇಳೋದೇ ಬೇರೆ. ಚಿತ್ರದ ಕತೆ ಅಭಿಜಿತ್ ಜೋಶಿಯದ್ದು. ಫೈವ್...ಗೂ ಇದಕ್ಕೂ ಸಂಬಂಧವಿಲ್ಲ. ಚಿತ್ರ ಕಾದಂಬರಿಗೆ ಹೋಲಿಕೆಯಾದರೆ ನಾವೇನೂ ಮಾಡುವಂತಿಲ್ಲ. ಚೇತನ್ ಪ್ರಚಾರಕ್ಕಾಗಿ ಇಂತಹ ಕೀಳುಮಟ್ಟದ ವಿವಾದ ಹುಟ್ಟುಹಾಕಿದ್ದಾರೆ ಎನ್ನುತ್ತಾರೆ. ಅಂದ ಹಾಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದ ವಿಧು ಬಾಯ್ಮುಚ್ಚಿ ಎಂದು ಗದರಿದ್ದರು. ನಂತರ ಕ್ಷಮೆಯನ್ನೂ ಯಾಚಿಸಿದ್ದಾರೆ. ಕತೆ ಬರೆದ ಅಭಿಜಿತ್ ಜೋಶಿ ಇದು ಸ್ವಂತ ಕತೆ ಎಂದೂ ಸಮರ್ಥಿಸಿಕೊಂಡಿದ್ದಾರೆ.
ಆದರೆ ಈ ಮೂವರ ಹೇಳಿಕೆಗಳ ಮಧ್ಯೆ ಪ್ರಶ್ನೆಯೊಂದು ಉದ್ಭವಿಸುತ್ತದೆ. ಚೇತನ್‌ರಂತಹ ಪ್ರಖ್ಯಾತ ಕಾದಂಬರಿಕಾರ ತನ್ನ ಕಾದಂಬರಿಯನ್ನೇ ಚಿತ್ರವಾಗಿಸಿಕೊಂಡವರ ವಿರುದ್ಧ ಮೊದಲೇ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ?. ಚಿತ್ರ ಬಿಡುಗಡೆಯಾಗಿ ಹಿಟ್ ಆದ ನಂತರ ಯಾಕೆ ಆಕ್ರೋಶ ಬಂತು ? ಅಷ್ಟಕ್ಕೂ ಫೈವ್...ಚಿತ್ರವಾಗುತ್ತಿರುವ ಬಗ್ಗೆ ತಮ್ಮ ಬ್ಲಾಗ್‌ನಲ್ಲೇ ಚೇತನ್ ಬರೆದುಕೊಂಡಿದ್ದರು. ಚಿತ್ರ ಬಿಡುಗಡೆಯಾಗುವವರೆಗೂ ಯಾಕೆ ಸುಮ್ಮನೆ ಕುಳಿತರು ? ನ್ಯಾಯಾಲಯಕ್ಕೆ ಯಾಕೆ ಮೊರೆ ಹೋಗಲಿಲ್ಲ ? ಎಂಬ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿದಿವೆ. ವಿಧು ಕೂಡ ಇನ್ನು ಮುಂದೆ ಚೇತನ್‌ರನ್ನು ಭೇಟಿಯಾಗುವುದಿಲ್ಲ ಎಂಬ ಶಪಥವನ್ನೂ ಮಾಡಿದ್ದಾರೆ. ಹಣ, ಖ್ಯಾತಿ, ಹೆಸರು ಮೂರು ಇರುವ ಈ ಕಾದಂಬರಿಕಾರ, ಆ ಖ್ಯಾತ ನಿರ್ಮಾಪಕ ಹಾಗೂ ಸಂಭಾಷಣೆಕಾರರ ಮಧ್ಯೆ ಜಗಳ ಯಾಕಾಗಿದೆ ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಎಂಬುದು ಚಿತ್ರಪ್ರೇಮಿಗಳ ಪ್ರಶ್ನೆ. ಈ ವಿವಾದದಿಂದ ೩ ಈಡಿಯಟ್ಸ್ ಚಿತ್ರ ನೋಡುವ, ಫೈವ್...ಕಾದಂಬರಿ ಓದುವವರ ಸಂಖ್ಯೆ ಹೆಚ್ಚಾಗಲಿದೆ ಎಂಬುದಂತೂ ಸತ್ಯ. ಅಂದ ಹಾಗೆ ಮೂವರು ಮೂರ್ಖರು ಯಾರು ?