Tuesday, May 19, 2009

ಜೋಜೋ ಗೆ ಜೈ ಹೋ !







ಪುಟ್ಟ ಕೈಕಾಲುಗಳು, ದೊಡ್ಡ ತಲೆ, ಅತ್ತಿಂದಿತ್ತ ಓಡಾಡುತ್ತ ಮಕ್ಕಳಂತೆ ಕಾಣುವ ವೇಷಧಾರಿಗಳು. ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ವೋಡಾಫೋನ್ ರೂಪಿಸಿರುವ ಜೋಜೋ ಪಾತ್ರಧಾರಿಗಳು ಈಗ ಎಲ್ಲರ ಅಚ್ಚುಮೆಚ್ಚು. ಓ ಮೊದಲು ನಾಯಿಗಳನ್ನು ಬಳಸಿ ತನ್ನ ಜಾಹೀರಾತಿನ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ವೋಡಾಫೊನ್ ಈಗ ಪುಟಾಣಿ ಪಾತ್ರಗಳ ಮೂಲಕ ಮಕ್ಕಳು, ಯುವಕರು ಹಾಗೂ ಹಿರಿಯರ ಮನ ಗೆದ್ದಿದೆ.
ಜೋಜೋ ಈ ಹೆಸರಿನ ಈ ಜಾಹೀರಾತು ಸರಣಿಯಲ್ಲಿ ಪುಟ್ಟ ಪಾತ್ರಧಾರಿಯ ಕಾಲು ಮುರಿದಿದ್ದು, ಕಿಟಲೆ ಮಾಡಿದ್ದು, ಮೇಲ್ ಬಾಕ್ಸ್ ಬೆನ್ನು ಹತ್ತಿರುವ, ಕಾರ್ ರೀಚಾರ್ಜ್ ಮಾಡುವ ದೃಶ್ಯಗಳು ಮತ್ತೊಮ್ಮೆ ನೋಡಬೇಕೆನಿಸುತ್ತವೆ. ಈ ಜಾಹೀರಾತುಗಳಿಗೆ ಜನ್ಮ ನೀಡಿದ್ದು ನಿರ್ವಾಣ ಸಂಸ್ಥೆ. ಕಳೆದ ವರ್ಷ ವೋಡಾಫೋನ್ನ ಹ್ಯಾಪಿ ಟು ಹೆಲ್ಪ್ ಜಾಹೀರಾತು ಸರಣಿ ರೂಪಿಸಿದ್ದ ಸಂಸ್ಥೆ ಈ ಬಾರಿ ವಿಭಿನ್ನ ಜಾಹೀರಾತು ಮಾಡಬೇಕೆಂದು ಹೊರಟಾಗ ಚಿಂತನೆ ನಡೆದಿದ್ದು ಕಾರ್ಟೂನ್ ಪಾತ್ರಧಾರಿಗಳ ಬಗ್ಗೆ. ಆದರೆ ಈಗಾಗಲೇ ಅಂತಹ ಹಲವಾರು ಜಾಹೀರಾತುಗಳು ಪ್ರದರ್ಶನಗೊಂಡಿರುವುದರಿಂದ ಮನುಷ್ಯರನ್ನೇ ಬಳಸಿ ಹೊಸ ಪಾತ್ರ ಸೃಷ್ಟಿಸುವ ಉತ್ಸಾಹ ತಂಡದಲ್ಲಿತ್ತು.
ಅದಕ್ಕಾಗಿ ಮೃದು ಉಣ್ಣೆಯ ಮನುಷ್ಯನ ಮೇಲ್ಕವಚ ನಿರ್ಮಿಸಿ, ತಲೆಯ ಭಾಗಕ್ಕೆ ಪರ್ಫೆಕ್ಸ್ ಎನ್ನುವ ವಸ್ತು ಬಳಸಲಾಯಿತು. ಮೃದು ದೇಹ, ದೊಡ್ಡ ತಲೆ, ಮಕ್ಕಳಂತೆ ನಡೆಯುವ ಪಾತ್ರಧಾರಿಗಳಿಂದಾಗಿ ಜೋಜೋ ಈಗ ಎಲ್ಲೆಡೆ ಜನಪ್ರಿಯ.
ಸಂಸ್ಥೆಯ ನಿರ್ದೇಶಕ ಪ್ರಕಾಶ್ ವರ್ಮಾ ಈ ಜಾಹೀರಾತು ರೂಪಿಸುವುದಕ್ಕಾಗಿ ಭರ್ತಿ ೩ ತಿಂಗಳು ಹೋಮ್ ವರ್ಕ್ ಮಾಡಿದ್ದಾರೆ. ಪಾತ್ರಧಾರಿಗಳಾಗಿ ಮಕ್ಕಳು, ಯುವತಿಯರು ಹಾಗೂ ಪುರುಷರು ಅಭಿನಯಿಸಿದ್ದಾರೆ. ಆದರೆ ಇಲ್ಲೊಂದು ವಿಶೇಷವಿದೆ, ಪಾತ್ರಧಾರಿಗಳು ಮಕ್ಕಳಂತೆ ಕಾಣಬೇಕು ಹಾಗೂ ಜಾಹೀರಾತು ಆಕರ್ಷಕವಾಗಿಸಬೇಕೆಂಬ ದೃಷ್ಟಿಯಿಂದ ತಕ್ಕಮಟ್ಟಿಗೆ ಆನಿಮೇಶನ್ ತಂತ್ರಜ್ಞಾನ ಬಳಸಲಾಗಿದೆ. ಹೈ ಸ್ಪೀಡ್ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಿ ಪಾತ್ರಧಾರಿಗಳ ನಡಿಗೆಯನ್ನು ವಿಭಿನ್ನವಾಗಿ ತೋರಿಸಿದ್ದು ಜಾಹೀರಾತಿನ ಹೆಗ್ಗಳಿಕೆ.
ಪ್ರೇಕ್ಷಕರ ಮನಸ್ಸು ಬೇರೆಡೆ ಆಕರ್ಷಿತವಾಗದಂತೆ ಹಿನ್ನೆಲೆಯಾಗಿ ಬೂದಿ ಬಣ್ಣ ಬಳಸಿದ್ದರೆ, ಪಾತ್ರಧಾರಿಗಳದ್ದು ಶ್ವೇತ ವಸ್ತ್ರ. ದಕ್ಷಿಣ ಆಫ್ರಿಕಾದ ಕೇಪ್ ಟೌನ್ನ ಪ್ಲಾಟಿಪಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸಿದ್ದು , ಜೋಜೋ ಜನಪ್ರಿಯತೆ ಪ್ರತಿ ದಿನ ಹೆಚ್ಚಾಗುತ್ತಿದೆ. ಐಪಿಎಲ್ಗಿಂತಲೂ ಹೆಚ್ಚು ಹಾಟ್ ಫೇವರಿಟ್ ಆಗಿರುವುದು ಜೋಜೋ ಜನಪ್ರಿಯತೆಗೆ ಸಾಕ್ಷಿ.