Thursday, June 25, 2009

ಸೂರ್ಯ-ಚಂದ್ರರಿಲ್ಲದೆ ಹೇಗೆ ಅಂದಿದ್ದೆ ? ಈಗ ನೀನಿಲ್ಲದೆ.....

what about sunlight ? what about raining ? ಹೀಗೆ ತನ್ನ ಹಿಸ್ಟರಿ ಆಲ್ಬಮ್‌ನಲ್ಲಿ ಪ್ರಶ್ನಿಸಿದ್ದ ಮಹಾನ್ ಕಲಾವಿದ ಮೈಕೆಲ್ ಜಾಕ್ಸನ್. ಧರೆಗುರುಳುವ ಮರಗಳು, ಜೀವಚ್ಛವವಾದ ಆನೆ, ಮಾಡು ಕಳೆದುಕೊಂಡ ಮನೆಗಳು, ನಿಸ್ಸಹಾಯಕರಾಗಿ ನಿಂತ ಬುಡಕಟ್ಟು ಜನ. ಹಾಡಿನ ಕೊನೆಗೆ ಮತ್ತೆಲ್ಲವೂ ಮೈದಳೆಯುತ್ತವೆ, ಹಸಿರು ಹಾಡಾಗುತ್ತದೆ. ತಾನು ಮಾಡುವುದು ವಿಭಿನ್ನವಾಗಿರಬೇಕು, ಜನರ ಎದೆಗೆ ತಟ್ಟುವಂತಿರಬೇಕು ಎಂಬುದು ಜಾಕ್ಸನ್ ನಿಲುವು. ಸಲಿಂಗಕಾಮ, ದಿವಾಳಿತನ, ಕೌಟುಂಬಿಕ ಸಮಸ್ಯೆಗಳು ಮೈತುಂಬ ಆವರಿಸಿಕೊಂಡಿದ್ದರೂ ಅವುಗಳನ್ನೆಲ್ಲ ಝಾಡಿಸಿ ಒದ್ದು ತನ್ನೊಳಗಿನ ಮಾನವೀಯತೆಗೆ, ಪರಿಸರ ಪ್ರೇಮಕ್ಕೆ, ಜನಾಂಗೀಯ ದ್ವೇಷದ ವಿರುದ್ಧದ ಒತ್ತಾಸೆಗೆ ಧ್ವನಿಯಾಗಿದ್ದ ಜಾಕ್ಸನ್.
ಪ್ರೇಮ, ಕಾಮ, ಮನರಂಜನೆಗೆ ಮಾತ್ರ ಸೀಮಿತವಾಗಿದ್ದ ಪಾಪ್ ಸಂಗೀತ ಲೋಕವನ್ನು ಸಾಮಾಜಿಕ ಸಮಸ್ಯೆಗಳಿಗೂ ಅನ್ವಯಿಸಿ ಗೆದ್ದದ್ದು ಜಾಕ್ಸನ್ ಸಾಧನೆ. ಗಣಿ ಕಾರ್ಮಿಕನೊಬ್ಬನ ೧೨ ಮಕ್ಕಳ ಭರ್ತಿ ಕುಟುಂಬದ ಜಾಕ್ಸನ್ ಕರಿಯ ಅಮೆರಿಕನ್ನರನ್ನು ದ್ವೇಷಿಸುವ ಅಮೆರಿಕದ ಮನೋಭಾವನೆಗೆ ಸಡ್ಡು ಹೊಡೆಯಲು ಬಿಳಿಯನಾದ. ಫುಡ್ ಟ್ಯಾಪಿಂಗ್ ನೃತ್ಯಗಳ ಮೂಲಕ ಹೊಸ ಲೋಕ ಸೃಷ್ಟಿಸಿದ. ಭಾರತದಿಂದಲೂ ಪ್ರೇರಣೆ ಪಡೆದಿದ್ದ ಜಾಕ್ಸನ್‌ನ ಹಲವು ಆಲ್ಬಮ್‌ಗಳಲ್ಲಿ ಭರತನಾಟ್ಯವನ್ನೂ ಬಳಸಿಕೊಂಡಿದ್ದು ಆತನ ಜಾಗತಿಕ ಪ್ರೇಮಕ್ಕೆ ಸಾಕ್ಷಿ. ಆತ ಗಂಡಸೋ, ಹೆಂಗಸೋ ಅಥವಾ ಮಂಗಳಮುಖಿಯೋ ಎನ್ನುವ ಪ್ರಶ್ನೆಗಳು ಎದ್ದಾಗ ಸಂಗೀತ ಪ್ರೇಮಿಗಳು ಹೇಳುತ್ತಿದ್ದ ಮಾತು ಒಂದೇ, ಅದನ್ನೇನು ಮಾಡ್ತೀರಾ ಸುಮ್ನೆ ಹಾಡು ಕೇಳಿ.
ಮಕ್ಕಳೆಂದರೆ ಭರ್ತಿ ಪ್ರೀತಿಯ ಜಾಕ್ಸನ್ ತನ್ನ ಬಹುತೇಕ ಹಾಡುಗಳಲ್ಲಿ ಮಕ್ಕಳಿಗೆ ಅಗ್ರ ಶ್ರೇಯಾಂಕ ನೀಡಿದ್ದಾನೆ. ಆತನ ಜೀವನ ಸಾಧನೆ ಬಿಂಬಿಸುವ ಆಲ್ಬಮ್ ಎಂದೆ ಖ್ಯಾತವಾದ ಹಿಸ್ಟರಿ (ಹಿಸ್-ಸ್ಟೋರಿ)ಯಲ್ಲೂ ಚಿಣ್ಣರಿಗೆ ಮಣೆ. ತನ್ನ ಮನೆ ಆವರಣದಲ್ಲಿ ಕರೆಗಟ್ಟಲೆ ಮನರಂಜನಾ ಉದ್ಯಾನವನ ನಿರ್ಮಿಸಿದ್ದ ಆತನ ಮನಸ್ಸೂ ಮಕ್ಕಳದ್ದೇ. ೨೦ ವರ್ಷಗಳ ಹಿಂದೆ ನೃತ್ಯ ಕಲಿಯುವ, ಕಲಿತ ಹಾಗೂ ನುರಿತ ನೃತ್ಯ ಪಟುಗಳಿಗೂ ಜಾಕ್ಸನ್ ರೋಲ್ ಮಾಡೆಲ್. ಹಾವಿನಂತೆ ಸರಸವಾಡುವ ಆತನ ಕಾಲುಗಳ ನರ್ತನ, ಆಂಗಿಕ ಭಾಷೆ, ಸಂಗೀತ ಹಾಗೂ ಗೀತೆಯ ಪದ ಜೋಡಣೆ ಎಂಥವರನ್ನೂ ಮೋಡಿ ಮಾಡಿತ್ತು. ನಾನು ಸ್ನೇಹಿತರೊಂದಿಗೆ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸುವ ಮುನ್ನ ದೇವರು ಹಾಗೂ ಜ್ಯಾಕ್ಸನ್‌ನನ್ನು ನೆನಪಿಸಿಕೊಂಡೇ ನೃತ್ಯಕ್ಕಿಳಿಯುತ್ತಿದ್ದೆವು. ದೊಡ್ಡ ನಗರಗಳಲ್ಲಿ ದೊರಕುತ್ತಿದ್ದ ಆತನ ಕ್ಯಾಸೆಟ್‌ಗಳನ್ನು ತಂದು ಹಾಡು ಕೇಳಿ, ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಆತನ ನೃತ್ಯ ಕಾರ್ಯಕ್ರಮದ ಝಲಕ್ ನೋಡಿ ನೃತ್ಯ ಕಲಿತ ನನ್ನಂಥ ಕೋಟ್ಯಂತರ ಜನ ಜಗದಲ್ಲಿದ್ದಾರೆ.
ಜಾಕ್ಸನ್‌ನ ಮಾಯೆ ಬಾಲಿವುಡ್‌ನ್ನೂ ಬಿಟ್ಟಿಲ್ಲ. ಖ್ಯಾತ ನೃತ್ಯ ಪಟು ಪ್ರಭುದೇವ ತಮ್ಮ ಕಾದಲನ್ ಚಿತ್ರಕ್ಕೆ ಜಾಕ್ಸನ್‌ರನ್ನು ಕರೆತರಬೇಕೆಂದು ಬಯಸಿದ್ದರು. ಆದರೆ ಮೈಕೆಲ್‌ನ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಹಿಂದಿ ಚಿತ್ರರಂಗದಲ್ಲಿ ನೃತ್ಯದ ಮೂಲಕ ಹೊಸ ಭಾಷೆ ಬರೆದ ಜಾವೇದ್ ಜಾಫ್ರಿ, ರವಿ ಬೆಹ್ಲ್, ಮಿಥುನ್ ಚಕ್ರವರ್ತಿ ಕೂಡ ಜಾಕ್ಸನ್ ಪ್ರೇರಣೆ ಪಡೆದವರು. ನೋಡಿ ಅವನು ಜಾಕ್ಸನ್ ಹಾಗೆ ನರ್ತಿಸುತ್ತಾನೆ ಎಂದು ಹೊಗಳಿಸಿಕೊಳ್ಳುವುದೂ ಕೂಡ ಆ ಕಾಲದ ಮಟ್ಟಿಗಿನ ಹೆಮ್ಮೆಯ ಮಾತು.
೧೦ ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಜಾಕ್ಸನ್ ನೃತ್ಯ ಕಾರ್ಯಕ್ರಮಕ್ಕೆ ಭರ್ತಿ ೭೫ ಸಾವಿರ ಜನ ಬಂದಿದ್ದರು. ೨೦ ಸಾವಿರ ರೂ.ಬೆಲೆಯ ಟಿಕೆಟ್ ಖರೀದಿಸಿ ಅವರೆಲ್ಲ ಜಾಕ್ಸನ್ ಮೋಡಿಗೆ ಬೆರಗಾದರು, ಹಾಡಾದರು. ಕಾರ್ಯಕ್ರಮಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾಕ್ಸನ್ ಹಾಡಿ, ನರ್ತಿಸಬೇಕಿರಲಿಲ್ಲ. ಕೇವಲ ಆತನ ಮುಖ, ನಗು, ಮಾತು ಇಷ್ಟೇ ಸಾಕಿತ್ತು ಅಭಿಮಾನಿಗಳಿಗೆ. ಜಗತ್ತಿನ ನಾನಾ ಥರಹದ ವಾದ್ಯಗಳು, ಕಲಾವಿದರು, ಸಂಗೀತವನ್ನು ಮೇಳೈಸಿ ಹೊಸ ಗಾನ ಹೊಸೆಯುತ್ತಿದ್ದ ಈ ಮಾಂತ್ರಿಕ. ಜು.೧೩ ರಿಂದ ಲೈವ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ ಜಾಕ್ಸನ್ ಇಂದು ಬೆಳಗ್ಗೆ ಮರೆಯಾದ. ಟಿವಿಯಲ್ಲಿ ಆತನ ನಿಧನದ ಸುದ್ದಿ ನೋಡಿದ ಅಮ್ಮ ಹೇಳಿದ್ದು ಆತ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ಹಾಡು ಚೆನ್ನಾಗಿದೆಯಲ್ಲ ?. ಇಂಗ್ಲೀಷ್ ಹಾಡುಗಳ ಬಗ್ಗೆ ಮಾಹಿತಿಯಿರದ, ಕೇವಲ ಸಂಗೀತದಿಂದ ಹಾಡು ಅರ್ಥೈಸುವ ಅಮ್ಮನಿಗೂ ಜಾಕ್ಸನ್ ಇಷ್ಟವಾಗಿದ್ದನೆಂದರೆ ಆತನ ಜನಪ್ರಿಯತೆಗೆ ಮತ್ತೇನು ಉದಾಹರಣೆ ಬೇಕು ?
ಜಾಕ್ಸನ್ ನಿಶ್ಚಲವಾಗಿದ್ದಾನೆ, ಆದರೆ ಆತನ ಸಂಗೀತದ ನಾದ ಹೊಸ ಪೀಳಿಗೆಯಲ್ಲಿದೆ. ಇದೂ ತಲೆತಲಾಂತರದವರೆಗೆ ಮುನ್ನಡೆಯಲಿದೆ. ಆ ಮಹಾನ್ ಸಂಗೀತಕಾರನ ಶೋಧನೆ, ಗಾನ, ನೃತ್ಯ ಪ್ರಾಚ್ಯಶಿಲ್ಪಗಳಂತೆ ಅಮರವಾಗಲಿದೆ. ಅಂದ ಹಾಗೆ ಜಾಕ್ಸನ್ ನೃತ್ಯ ನೋಡುವ ಬಯಕೆ ದೇವರಿಗೂ ಇದ್ದೀತು. ಅದಕ್ಕೆ ೫೦ನೇ ವರ್ಷಕ್ಕೆ ಆತನನ್ನು ಕರೆಸಿಕೊಂಡಿದ್ದಾನೆ. ದೇವರೂ ಜಾಕ್ಸನ್ ಅಭಿಮಾನಿಯೆ ?.

Sunday, June 14, 2009

ಸಿನೆಮಾ ಥೇಟರ್ ಎಂಬ ಮಾಯಾವಿ !ಮೈಲುದ್ದ ಕ್ಯೂನಲ್ಲಿ ಕಸರತ್ತು ಮಾಡಿ ಟಿಕೇಟ್ ಪಡೆದು ಸ್ನೇಹಿತರಿಗಾಗಿ ಕುರ್ಚಿ ಹಿಡಿಯಲು ಕರ್ಚೀಫ್ ಹಾಕಿ ಬರುತ್ತಿದ್ದ ಬೆವರು ಒರೆಸಿಕೊಳ್ಳುವಷ್ಟರಲ್ಲಿ ಚಿತ್ರಮಂದಿರ ತುಂಬಿ ತುಳುಕಲು ಪ್ರಾರಂಭ. ಆಹ್ ! ಅದೆಂಥ ಲೋಕ. ಮೊದಲ ಬಾರಿಗೆ ಸಿನೆಮಾ ಥೇಟರ್ ಎಂಬ ಮಾಯಾಲೋಕದೊಳಗೆ ಪ್ರವೇಶಿಸಿದ, ತಂದೆ ತಾಯಿ ಕೈ ಹಿಡಿದು ಕಣ್ಣು ಹೊಡೆಯುವ ಬಣ್ಣ, ಬಣ್ಣದ ಲೈಟುಗಳನ್ನು ನೋಡುತ್ತ ಕಾಲಿಡುವ ಚಿಣ್ಣರು, ನಮ್ಮಂತೆ ಶಾಲೆಯ ಪಿರಿಯಡ್ ತಪ್ಪಿಸಿ ಬಂದ ಸಹಪಾಠಿಗಳು, ಪಕ್ಕದ ಹೈಸ್ಕೂಲಿನ ಬೇರೆಯವರ ಗೆಳತಿಯರು, ಕಾಲೇಜು ಮೆಟ್ಟಿಲೇರಿ ಠೀವಿಯಿಂದ ಬಂದ ಸೀನಿಯರ್‌ಗಳು, ಫೆವಿಕಾಲ್ ಅಂಟಿಸಿದಂತೆ ಕೈ, ಮೈ, ಸೋಕಿಸಿಕೊಂಡು ಸೀಟು ಹುಡುಕುವ ನವದಂಪತಿ, ಸಂಸಾರದೊಂದಿಗೆ ಚಿತ್ರ ವೀಕ್ಷಣೆಗೆ ಬಂದವರು, ಪುರಾತನ ಕಾಲದಿಂದ ಚಿತ್ರ ವೀಕ್ಷಣೆ ಹವ್ಯಾಸವಾಗಿಸಿಕೊಂಡ ಹಿರಿಯರು....ಅದು ನಿಜಕ್ಕೂ ಮಾಯಾ ಲೋಕ ಅರ್ಥಾತ್ ಚಿತ್ರಮಂದಿರ.
ಎಲ್ಲರೂ ತಮ್ಮ ಕುರ್ಚಿಗಳನ್ನು ಭದ್ರಪಡಿಸಿಕೊಂಡು ಕುಳಿತುಕೊಳ್ಳುತ್ತಿದ್ದಂತೆ ಟ್ರಿಂಗ್ ಎಂಬ ಬೆಲ್ಲು. ಮಾತಿಗೆ ವಿರಾಮ, ಲೈಟುಗಳು ಕಣ್ಣು ಮುಚ್ಚಿದೊಡನೆ ಎಲ್ಲೆಡೆ ಕತ್ತಲೆ, ಮಾತಿಗೆ ವಿರಾಮ. ಬೃಹತ್ ಪರದೆಯ ಮೇಲೆ ಫಿಲ್ಮ್ ಡಿವಿಶನ್ ನಿರ್ಮಿಸಿದ ಗಾಂ, ಚಾಚಾ ನೆಹರೂರ ಸಾಕ್ಷ್ಯ ಚಿತ್ರ, ನಂತರ ವಿಕೋ ವಜ್ರದಂತಿ, ನಿರ್ಮಾ ಜಾಹೀರಾತು. ಬಿಡುಗಡೆ ಕಾಣಲಿರುವ ಚಿತ್ರಗಳ ಟ್ರೇಲರ್‌ಗಳು. ಚಿತ್ರ ಶುರುವಾಗುವ ಹೊತ್ತಿಗೆ ಹೊಸ ಲೋಕ ಸೃಷ್ಟಿಸಿದ ಅನುಭವ.
ಚಿತ್ರ ವೀಕ್ಷಣೆಯೆನ್ನುವುದನ್ನು ಅಕ್ಷರಶ: ಆಕರ್ಷಕವಾಗಿಸಿದ್ದು ಸಿನೆಮಾ ಥೇಟರ್‌ಗಳು. ಫ್ಯಾನ್ ಗಾಳಿಗೆ ಮುಖ ಸೋಕಿಸಿ ಚಿತ್ರ ವೀಕ್ಷಿಸಲು ಪ್ರಾರಂಭಿಸಿದರೆ ಹೊರಗಿನ ಲೋಕದ ಬಗ್ಗೆ ಡೋಂಟ್ ಕೇರ್. ವಿರಾಮದ ಸಮಯದಲ್ಲಿ ಮಿರ್ಚಿ ಭಜಿ (ಆಗ ಪಾಪ್ ಕಾರ್ನ್ ಇರಲಿಲ್ಲ), ವಡಾ ಪಾವ್, ಚಿಪ್ಸ್‌ಗಳ ಭರಾಟೆ. ಮತ್ತೆ ವಾಪಸ್ ಬಂದು ಕುಳಿತರೆ ಒಂದೂವರೆ ಗಂಟೆ ಭರ್ತಿ ಮನರಂಜನೆ. ಸಿನಿಮಾ ಥೇಟರ್ ಎಂಬ ಮಾಯಾವಿ ಆಗಿನಿಂದಲೂ ಈಗಿನವರೆಗೂ ಅದೇ ಆಕರ್ಷಣೆ ಉಳಿಸಿಕೊಂಡಿದೆ ಒಂದರ್ಥದಲ್ಲಿ ಇದು ಸದಾ ಸ್ವೀಟ್ ಸಿಕ್ಸ್‌ಟೀನ್.
ಐಮ್ಯಾಕ್ಸ್, ಮಲ್ಟಿಪ್ಲೆಕ್ಸ್, ೩ ಡಿ, ೬ ಡಿ, ಡಿಟಿಎಸ್, ಸ್ಯಾಟ್‌ಲೈಟ್ ಸ್ಕ್ರೀನಿಂಗ್ ಹೀಗೆ ಹೊಸ, ಹೊಸ ಅವಶೇಷಗಳು ಸೇರ್ಪಡೆಯಾಗಿದ್ದರೂ ಸಿನಿಮಾ ಥೇಟರ್ ನೀಡುವ ಮಜ ಸಾರ್ವಕಾಲಿಕ.
ಆಗೆಲ್ಲ ಸಿನಿಮಾ ಪೋಸ್ಟರ್‌ಗಳನ್ನೇ ನಂಬಿಕೊಂಡು ಸಿನಿಮಾ ನೋಡಬೇಕು, ಪರಿಚಿತ ತಾರೆಯರಿದ್ದರೆ ಸಿನಿಮಾ ವೀಕ್ಷಣೆಗೆ ಮನಸ್ಸು ಮಾಡಬೇಕು. ಇಲ್ಲವಾದರೆ ಇದು ಉತ್ತಮ ಚಿತ್ರ ಎಂಬ ಬಗ್ಗೆ ನೆರೆ, ಹೊರೆಯವರಿಂದ ಸರ್ಟಿಫಿಕೇಟ್ ದೊರೆತ ನಂತರವೇ ಚಿತ್ರ ವೀಕ್ಷಿಸಬೇಕು. ಈಗಿನಂತೆ ಆಗ ಟಿವಿಗಳಲ್ಲಿ ಟ್ರೇಲರ್‌ಗಳೂ, ತಾರೆಯರ ಆತ್ಮವಿಶ್ವಾಸದ ನುಡಿಗಳೂ, ಪ್ರೋಮೊಗಳೂ ಇರಲಿಲ್ಲ, ಪತ್ರಿಕೆಗಳಲ್ಲಿ ಬರುವ ವಿಮರ್ಶೆ, ಹಿಂದೊಮ್ಮೆ ಚಿತ್ರ ನೋಡಲು ತೆರಳಿದಾಗ ನೋಡಿದ ಟ್ರೇಲರ್‌ಗಳೇ ಚಿತ್ರ ವೀಕ್ಷಣೆಗೆ ಪೂರಕ ಪರಿಕರ. ಅಷ್ಟಕ್ಕೂ ಚಿತ್ರ ವೀಕ್ಷಣೆ ಎನ್ನುವುದು ಹವ್ಯಾಸದ ಪಟ್ಟಿಯಲ್ಲೂ ಇರಲಿಲ್ಲ. ಚಿತ್ರದಲ್ಲೂ ಆಂಗ್ರಿ ಯಂಗ್ ಮ್ಯಾನ್, ಸುಂದರ ನಟಿ, ಒಂದು ಕ್ಯಾಬರೆ, ನಾಲ್ಕು ಫೈಟ್, ಖಳನಾಯಕನ ವಿಕಟನಗೆ ಇದ್ದರಷ್ಟೇ ಅದು ಚಿತ್ರ ಎಂಬ ಭಾವನೆ. ಈಗ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗಾಗಿ ಬೇರೆ ಚಿತ್ರ, ಯುವಜನತೆಗಾಗಿ ಪ್ರತ್ಯೇಕ ಚಿತ್ರ, ಚಿಣ್ಣರಿಗಾಗಿ ಮತ್ತೊಂದು ಚಿತ್ರ, ಕಲಾತ್ಮಕ ಜೀವಿಗಳಿಗಾಗಿ ಮಗದೊಂದು ಚಿತ್ರ ಎನ್ನುವ ವಿಭಾಗಗಳಿವೆ. ಈಗ ಚಿತ್ರ ನೋಡಲೇಬೇಕು ಎಂದಾದರೆ ಆಯ್ಕೆಗೆ ಇಂಟರ್‌ನೆಟ್, ಟಿವಿಯಂತಹ ಹಲವಾರು ಆಯ್ಕೆಗಳಿವೆ.
ಚಿತ್ರಮಂದಿರಗಳೂ ಈಗ ಅಕ್ಷರಶ: ಮಾರ್ಕೆಟಿಂಗ್ ತಜ್ಞರ ಕನಸಿನ ಕೂಸು. ಒಮ್ಮೆ ಕಾಲಿಟ್ಟರೆ ಫರ್ನಿಚರ್, ಬೈಕ್, ಕಾರ್‌ನಿಂದ ಹಿಡಿದು ಅಂಡರ್‌ವೇರ್‌ವರೆಗೆ ಎಲ್ಲವನ್ನೂ ಖರೀದಿಸಿ ನಂತರ ಅದೇ ಸೂರಿನಲ್ಲಿ ಸಿನಿಮಾ ನೋಡಿ ಬರುವ ಪದ್ಧತಿ. ಆಗ ಚಿತ್ರಮಂದಿರವೆಂದರೆ ಕೇವಲ ಸಿನಿಮಾ ವೀಕ್ಷಣೆಗೆ ಮಾತ್ರ ಮೀಸಲು ಎಂಬ ನಿಯಮ. ಆದರೆ ಬಹುತೇಕ ಬಿ, ಸಿ ಕೇಂದ್ರಗಳಲ್ಲಿ ಈಗಲೂ ಸಿನಿಮಾ ಥೇಟರ್ ಎಂಬುದು ಕಡ್ಡಾಯವಾಗಿ ಸಿನೆಮಾ ವೀಕ್ಷಣೆಗೆ ಮಾತ್ರ ಎನ್ನುವ ಸ್ಥಿತಿಯಿದೆ.
೧೫ ರೀಲುಗಳ ಬೃಹತ್ ಸಿನಿಮಾದ ಮಧ್ಯೆ ರೀಲು ಕಟ್ ಆಗುವುದು, ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಚಿತ್ರ ಪ್ರಾರಂಭಿಸಿ ಎಂದು ನೀಡುತ್ತಿದ್ದ ಸಂದೇಶ ಈಗಿಲ್ಲ. ಕರೆಂಟು ಹೋದೊಡನೆ ಚಿತ್ರ ಮಂದಿರಗಳ ಲೈಟುಗಳು ಕಣ್ಣು ಬಿಡುತ್ತಿದ್ದವು. ಆಪರೇಟರ್ ರಿವೈಂಡ್ ಆದ ರೀಲು ಸರಿಪಡಿಸಿ ಮೊದಲಿದ್ದ ದೃಶ್ಯ ಹೊಂದಿಸುವಷ್ಟರ ವೇಳೆಗೆ ಪ್ರೇಕ್ಷಕರಿಗೆ ಅಲ್ಪ ವಿರಾಮ. ಸಿನಿಮಾ ಪ್ರಾರಂಭಕ್ಕೂ ಮುನ್ನ ಸ್ಟಿರಿಯೋಗಳಲ್ಲಿ ಕೇಳಿ ಬರುತ್ತಿದ್ದ ದೇವರ ನಾಮ, ವಿರಾಮದಲ್ಲಿ ತೋರಿಸಲಾಗುತ್ತಿದ್ದ ನಾನಾ ಸಂಸ್ಥೆಗಳ ಜಾಹೀರಾತು ಸ್ಲೈಡ್‌ಗಳು ಈಗ ಕಂಡುಬರುವುದಿಲ್ಲ. ಇಷ್ಟೆಲ್ಲ ಇಲ್ಲಗಳ ಮಧ್ಯೆಯೂ ಥೇಟರ್‌ಗಳು ಬದಲಾವಣೆ ಕಂಡಿವೆ. ಆದರೆ ಹರಿದ ಕುರ್ಚಿ, ಸೆಕೆಯಂತಹ ಕಷ್ಟಗಳು ಇನ್ನೂ ಇವೆ. ಕಾಲಕ್ಕೆ ತಕ್ಕಂತೆ ಚಿತ್ರಮಂದಿರಗಳು ಬದಲಾವಣೆ ಕಂಡರೂ ಸಿನೆಮಾ ಥೇಟರ್ ಎಂಬ ಮಾಯಾವಿ ಇನ್ನೂ ಚಿರಂಜೀವಿಯಾಗಿದೆ. ವಯಸ್ಸಾದ ದೇವಾನಂದ್‌ನ ಮುಖದ ನಗೆಯಂತೆ, ಅಜ್ಜಿಯಾದರೂ ಮಾಸದ ಹೇಮಾ ಮಾಲಿನಿ ಕೆನ್ನೆಯ ಗುಳಿಯಂತೆ ಚಿತ್ರಮಂದಿರವೆಂಬ ಮಾಯಾ ಕನ್ಯೆ ಈಗಲೂ ಹೊಸ ಲೋಕ, ಹೊಸ ಭಾವ, ಹೊಸತನದ ಸೃಷ್ಟಿ ಮುಂದುವರಿಸಿದ್ದಾಳೆ ! ಸಿನಿಮಾ ಮಂದಿರ ಎಂಬ ಈ ಮಾಯಾಲೋಕಕ್ಕೆ ಈಗಲೂ ನಾವೆಲ್ಲ ಬೆರಗಾಗುತ್ತಿರುವುದೇ ಖುಷಿಯ ಸಂಗತಿ, ಅಲ್ಲವೇ ?

Thursday, June 11, 2009

ಅನುರಾಗ್ ಮಾತನಾಡಲಿದ್ದಾರೆ...ಪ್ರತಿ ಶುಕ್ರವಾರ ರಾತ್ರಿ ೧೦ ಗಂಟೆಗೆ ಫಾಕ್ಸ್ ಹಿಸ್ಟರಿ ಚಾನೆಲ್ ಚಾಲನೆಗೊಳಿಸಿ. ನೈಜ, ವಾಸ್ತವವಾದಿ ಚಿತ್ರಗಳ ನಿರ್ದೇಶ ಅನುರಾಗ್ ಕಶ್ಯಪ್ ಈ ಚಾನೆಲ್‌ನಲ್ಲಿ ಸಿನಿಮಾ ಕುರಿತಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಉತ್ತಮ ಚಿತ್ರಗಳು, ವಿಭಿನ್ನ ಚಿತ್ರಗಳು, ಕಲಾತ್ಮಕ ಚಿತ್ರಗಳು, ಕಮರ್ಶಿಯಲ್ ಚಿತ್ರಗಳು, ಪ್ರಸಿದ್ಧ ಸಿನಿಮಾಗಳು, ಮನತಟ್ಟಿದ ದೃಶ್ಯಗಳು ಹೀಗೆ ಸಿನಿಮಾ ಕುರಿತಾದ ತಮ್ಮ ನೆಚ್ಚಿನ ಕತೆ, ಕಲಾವಿದರು ಹಾಗೂ ಜನರ ಮೆಚ್ಚುಗೆ ಪಡೆದ ಸಿನಿಮಾಗಳ ಬಗ್ಗೆ ಅನುರಾಗ್ ಮಾತು ಹಂಚಿಕೊಳ್ಳಲಿದ್ದಾರೆ. ಜಾಗತಿಕ ಸಿನಿಮಾ ಬಗ್ಗೆ ಮಾಹಿತಿ ಪಡೆಯಲು ಈ ಕಾರ್ಯಕ್ರಮ ಕುತೂಹಲದ ಕಿಟಕಿ. ಒಬ್ಬ ಖ್ಯಾತ ನಿರ್ದೇಶಕನ ಮೂಲಕ ಸಿನಿಮಾ ಬಗ್ಗೆ ತಿಳಿದುಕೊಳ್ಳುವುದೂ ಕೂತುಹಲಕಾರಿ ಅಲ್ಲವೇ ?.

Tuesday, June 9, 2009

ನನ್ನ ಲೇಖನ ಓದಿ ಸಾಂಗತ್ಯದಲ್ಲಿ..


ಕನಸು ಕಾಣಲು ಹಣ ನೀಡಬೇಕಿಲ್ಲ, ಆದರೆ ಅದು ವಾಸ್ತವವಾಗಿರಬೇಕು. ಇದು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಶ್ಯಾಂ ಬೆನಗಲ್ ಅನಿಸಿಕೆ. ಅವರು ನಡೆದಿದ್ದೂ ಹಾಗೆ, 1970 ರಲ್ಲಿ ಚಿತ್ರ ನಿರ್ದೇಶಿಸುವುದಕ್ಕಿಂತಲೂ ಹಣ ಹೊಂದಿಸುವುದು ಕಷ್ಟದ ಮಾತಾಗಿತ್ತು. ಈ ಸಂದರ್ಭದಲ್ಲಿ ಶ್ಯಾಮ್ ಐಡಿಯಾ ಮಾಡಿದರು. ಗುಜರಾತ್‌ನ ಆಣಂದ್‌ನಲ್ಲಿ ನಡೆದ ಹಾಲು ಉದ್ಯಮದ ಅಭಿವೃದ್ಧಿ ಗಾಥೆಯನ್ನು ಸಿನಿಮಾ ಮಾಡುವ ಉದ್ದೇಶ ಅವರಿಗಿತ್ತು. ಆದರೆ ಹಣವಿರಲಿಲ್ಲ, ಅದಕ್ಕಾಗಿ ರಾಜ್ಯದ 5 ಲಕ್ಷ ಹಾಲು ಉತ್ಪಾದಕರಿಂದ ತಲಾ 2 ರೂ. ಸಂಗ್ರಹಿಸಿ ಮಂಥನ್ ಸಿನಿಮಾ ನಿರ್ದೇಶಿಸಿದರು. ಹಾಲು ಉತ್ಪಾದಕರು ಹಣ ನೀಡಿದ್ದಷ್ಟೇ ಅಲ್ಲ ಟ್ರಕ್, ಟ್ರ್ಯಾಕ್ಟರ್‌ಗಳಲ್ಲಿ ಬಂದು ಸಿನಿಮಾ ನೋಡಿದರು, ಪರಿಣಾಮ ಚಿತ್ರ ಹಿಟ್ ಆಯಿತು, ಪ್ರಶಸ್ತಿಯನ್ನೂ ತಂದುಕೊಟ್ಟಿತು.
ನಮ್ಮ ಸಾಂಗತ್ಯ ಬ್ಲಾಗ್ನಲ್ಲಿ ನಾನು ಬರೆದ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ...http://saangatya.wordpress.com/