Wednesday, February 25, 2009

ಬಾದಾಮಿಯಲ್ಲಿ `ನಾನಾ'ವತಾರ



ನಾನಾ ಪಾಟೇಕರ್ ಹಿಂದಿ ಚಿತ್ರರಂಗದ ವಿಲಕ್ಷಣ, ಪ್ರತಿಭಾವಂತ ನಟ. ನಾನಾ ಮಾಧ್ಯಮಗಳಿಂದ ದೂರವಿದ್ದರೂ ಸುದ್ದಿಯಾಗುತ್ತಾರೆ. ಹೆಚ್ಚು ಮಾತನಾಡುವುದಿಲ್ಲ, ಕೆಲಸಕ್ಕಷ್ಟೇ ಮಹತ್ವ. ಅಂಕುಶ್, ಪ್ರಹಾರ್, ಯಶವಂತ್, ಅಗ್ನಿ ಸಾಕ್ಷಿಯಂತಹ ಗಂಭೀರ ಚಿತ್ರಗಳೊಂದಿಗೆ ವೆಲ್‌ಕಮ್‌ನಂತಹ ಹಾಸ್ಯ ಭರಿತ ಚಿತ್ರಗಳ ಮೂಲಕವೂ ಜನರಿಗೆ ಚಿರಪರಿಚಿತ ಈ ನಟ.
ಗಿದ್‌ನಂತಹ ಕಲಾತ್ಮಕ ಚಿತ್ರದಲ್ಲಿ ತಲೆಹಿಡುಕ, ಕ್ರಾಂತಿವೀರ್‌ನಲ್ಲಿ ಕ್ರಾಂತಿಕಾರಿ ಯುವಕ, ಯಶವಂತ್‌ನಲ್ಲಿ ಪೊಲೀಸ್ ಅಕಾರಿ ಪಾತ್ರದೊಂದಿಗೆ ಅಗ ಅಂಬಾ ಬಾಯಿ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದು ಈ ನಾನಾ. ಗಣೇಶ ಚತುರ್ಥಿಯಲ್ಲಿ ಶೂಟಿಂಗ್‌ನಲ್ಲಿ ಭಾಗವಹಿಸದೆ ಮನೆಯಲ್ಲಿದ್ದುಕೊಂಡು ಗಣೇಶನ ಆರಾಧನೆ ನಡೆಸುವ ಈ ನಟನಿಗೆ ಕಂಟ್ರಿ ಸಾರಾಯಿ ಅಂದ್ರೆ ಪಂಚ ಪ್ರಾಣ. ರಾಷ್ಟ್ರೀಯ ಮಟ್ಟದ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ, ಹೊಸತನಕ್ಕೆ ತುಡಿಯುವ ಈ ನಟನ ಕಂಡರೆ ನನಗೇಕೋ ಭಾಳ ಪ್ರೀತಿ. ಇಂತಿಪ್ಪ ನಾನಾ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಾಗ ಸಂದರ್ಶನ ನಡೆಸಲು ಪ್ರಯತ್ನಿಸಿದ್ದೆ. ಆದರೆ ಮಾಧ್ಯಮದವರಿಂದ ಒಂದಡಿ ದೂರ ಉಳಿಯುವ ನಾನಾರಿಂದಾಗಿ ಪ್ರಯತ್ನ ವಿಫಲವಾಗಿತ್ತು.
ಆದರೆ ೨೦೦೬ರಲ್ಲಿ ನಾನಾ ಬಾದಾಮಿಯಲ್ಲಿ ರಾಣಾ ತೆಲಗು ಹಾಗೂ ತಮಿಳು ಚಿತ್ರದ ಶೂಟಿಂಗ್‌ಗೆ ಬಂದಿದ್ದರು. ಅಂತಹ ಅವಕಾಶ ಬಿಡಲು ಹೇಗೆ ಸಾಧ್ಯ ?. ಮರು ದಿನವೆ ಬಾದಾಮಿಯಲ್ಲಿದ್ದೆ, ನೆಚ್ಚಿನ ನಟನ ಸಂದರ್ಶನ ನಡೆಸಲು. ಗುಹಾಂತರ ದೇವಾಲಯದಲ್ಲಿ ನಾನಾ ನಟಿ ಕಾಜೋಲ್ ಅಗರವಾಲ್ ಜತೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರು. ಬಿಡುವಿನ ಸಮಯದಲ್ಲಿ ಆಟೋಗ್ರಾಫ್ ಕೇಳಲು ಬಂದ ಇಬ್ಬರನ್ನು ದಬಾಯಿಸಿದರು. ಅಷ್ಟರಲ್ಲೇ ಯುನಿಟ್‌ನ ಹುಡುಗರು ನೀವು ಈಗ ಸಂದರ್ಶನಕ್ಕೆ ಹೋದರೆ ಅವರು ಹತ್ತಿರಕ್ಕೆ ಕರೆಯುವುದಿಲ್ಲ ಸ್ವಲ್ಪ ತಡೆಯಿರಿ, ಅವರ ಮೂಡ್ ಕೆಟ್ಟರೆ ಪ್ಯಾಕಪ್ ಮಾಡಬೇಕಾಗುತ್ತದೆ ಎಂದು ಹೆದರಿಸಿದರು.
ನಾನಾ ಸಂದರ್ಶನ ಪಡೆಯಲೇಬೇಕು ಎಂದು ಪಣ ತೊಟ್ಟಿದ್ದ ನಾನು ಅಲ್ಲಿದ್ದ ವಾತಾಪಿ ಗಣಪತಿಗೆ ಏನಾದರೂ ಮಾಡಪ್ಪಾ ದೇವಾ ಎಂದು ಬೇಡಿಕೊಂಡೆ. ಶೂಟಿಂಗ್ ಮುಗಿಸಿದ ನಾನಾ ದೇವಾಲಯದ ಮೆಟ್ಟಿಲು ಇಳಿಯತೊಡಗಿದರು. ತಕ್ಷಣ ಧಾವಿಸಿದ ನಾನು ಪರಿಚಯ ಮಾಡಿಕೊಂಡು ನಿಮ್ಮನ್ನೊಂದಿಷ್ಟು ಪ್ರಶ್ನೆ ಕೇಳಬೇಕು ಎಂದೆ. ಹೂ ಅಂದರು ನಾನಾ.
ಹೀಗೆ ಶುರುವಾದ ವಾಕ್ ಇನ್ ಟಾಕ್ ಸಂದರ್ಶನದಲ್ಲಿ ನನ್ನ ಮೊದಲ ಪ್ರಶ್ನೆ, ನೀವು ಕರ್ನಾಟಕಕ್ಕೆ ಹಲವು ಬಾರಿ ಬಂದಿದ್ದೀರಿ ಹೇಗನಿಸುತ್ತೆ ? ಕರ್ನಾಟಕ ಉತ್ತಮ ಪ್ರದೇಶ ಎಂದು ನನ್ನತ್ತ ನೋಡಿದರು ನಾನಾ. ಮೊದಲ ಪ್ರಶ್ನೆ ಪೀಠಿಕೆ ಸರಿಯಾಗಲಿಲ್ಲ ಎಂದು ಮತ್ತೊಂದು ಪ್ರಶ್ನೆ ಕೇಳುವ ಭರದಲ್ಲಿ ನೀವು ಪರಿಂದಾ ಚಿತ್ರಕ್ಕಾಗಿ ಬೆಳಗಾವಿಗೆ ಬಂದಿದ್ದೀರಿ, ಹೇಗಿತ್ತು ಅನುಭವ ? ಅದು ಪರಿಂದಾ ಅಲ್ಲ ಪ್ರಹಾರ್ ಎಂದು ಸರಿಪಡಿಸಿದರು ಅವರು.
ನೀವು ರಾಷ್ಟ್ರೀಯ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದೀರಿ, ಚಿತ್ರಗಳಲ್ಲೂ ಅಭಿನಯಿಸುತ್ತೀರಿ ಎರಡನ್ನೂ ನಿಭಾಯಿಸುವುದು ಹೇಗೆ ? ನನಗೆ ಶೂಟಿಂಗ್ ಅಂದ್ರೆ ಇಷ್ಟ, ಅದು ಫಿಲ್ಮ್ ಆಗಿರಲಿ ಅಥವಾ ಗನ್ ಆಗಿರಲಿ. ಒಂದು ವರ್ಷ ಒಂದೇ ಚಿತ್ರ ಎನ್ನುವ ನಿಯಮಕ್ಕೆ ಅಂಟಿಕೊಂಡಿರುವುದರಿಂದ ನಿಭಾಯಿಸುತ್ತೇನೆ. ಟ್ಯಾಕ್ಸಿ ೯೨೧೧ ಚಿತ್ರದಲ್ಲಿ ಹಾಸ್ಯ ಪಾತ್ರ ಮಾಡಿದ್ದೀರಿ, ತೀರಾ ಸೀರಿಯಸ್ ಪಾತ್ರ ಬಯಸುವ ನೀವು ಅದನ್ನು ಹೇಗೆ ಒಪ್ಪಿಕೊಂಡಿರಿ ? ಹಾಗೆನಿಲ್ಲ ಅದು ಹಾಸ್ಯದಂತೆ ಕಂಡರೂ ಸೀರಿಯಸ್ ಪಾತ್ರವೆ. ನಟನೊಬ್ಬನ ಸಾಮರ್ಥ್ಯ ಪ್ರದರ್ಶನಕ್ಕೆ ಎಲ್ಲ ಬಗೆಯ ಪಾತ್ರಗಳು ಅವಶ್ಯ. ರಾಣಾ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ, ನಾನು ಸಿನಿಮಾ ನಿರ್ದೇಶಕ. ಬಾಲಿವುಡ್‌ನ ಸಿನಿಮಾಕ್ಕೆ ಸಂಬಂಸಿದಂತೆ ಚಿತ್ರದ ಕಥೆಯಿದೆ ಎನ್ನುವ ಉತ್ತರ ದೊರೆಯಿತು. ಇನ್ನೆರಡು ಪ್ರಶ್ನೆ ಕೇಳುವಷ್ಟರಲ್ಲಿ ಮೆಟ್ಟಿಲು ಇಳಿದಾಗಿತ್ತು. ಹವಾನಿಯಂತ್ರಿತ ವಾಹನದತ್ತ ನಾನಾ ಪಾದ ಬೆಳೆಸಿದರು. ನಾನು ನಿಮ್ಮ ಚಿತ್ರಗಳ ಅಭಿಮಾನಿ ಎಂದಾಗ ನಾನಾ ಮೊಗದಲ್ಲಿ ನಗು, ನನಗೊಂದು ಥ್ಯಾಂಕ್ಸ್ ಕೊಟ್ಟು ಹೊರಟೇ ಬಿಟ್ಟರು. ಹೀಗೆ ವಿಲಕ್ಷಣ ನಟನೊಬ್ಬನ ಸಂದರ್ಶನ ಮಾಡಿದ ಖುಷಿ, ನೆಚ್ಚಿನ ನಟನ ಮಾತನಾಡಿಸಿದ ತೃಪ್ತಿ ದೊರೆಯಿತು. ನಮ್ಮ ಪತ್ರಿಕೆಯಲ್ಲಿ ಹಾಗೂ ಸಿನಿ ವಿಜಯದಲ್ಲಿ ಸಂದರ್ಶನವೂ ಪ್ರಕಟವಾಯಿತು. ಅಂದ ಹಾಗೆ ಇಷ್ಟೆಲ್ಲ ಹೇಳಲು ಕಾರಣವೆಂದರೆ ಬಾದಾಮಿಯಲ್ಲಿ ಚಿತ್ರೀಕರಣಗೊಂಡ ರಾಣಾ ಚಿತ್ರ ಈಗ ಬಿಡುಗಡೆಯಾಗಿದೆ.

Friday, February 6, 2009

ಪರ ಸತಿ ಪ್ರಿಯನ ಪ್ರೇಮ-ಬೆಡ್ ಆಂಡ್ ಬೋರ್ಡ್


ಪರ ಸಂಗದ ಪರಿಣಾಮಗಳ ಬಗ್ಗೆ ಎಚ್ಚರಿಸುವ ಚಿತ್ರವಿದು. ನಾಯಕ ಆಂಟೋನ್, ಪತ್ನಿ ಕ್ರಿಸ್ಟೀನ್‌ಳೊಂದಿಗೆ ಪುಟ್ಟ ಪಟ್ಟಣದ ವಾಸಿ. ಹೂವಿನ ವ್ಯಾಪಾರದ ಆಂಟೋನ್‌ಗೆ ಜೀವನದ ಬಗ್ಗೆ, ಹುಡುಗಿಯರ ಬಗ್ಗೆ ವಿಚಿತ್ರ ಆಕರ್ಷಣೆ. ಕಾಮ ಮಧುರ ಎನ್ನುವ ಖಯಾಲಿಯವ. ಇಂತಿಪ್ಪ ಆಂಟೋನ್ ಜಪಾನಿ ಹುಡುಗಿಯೊಬ್ಬಳ ಸಂಗ ಮಾಡುತ್ತಾನೆ.
ಇತ್ತ ಪತ್ನಿ ಕ್ರಿಸ್ಟೀನ್ ಗರ್ಭಿಣಿಯಾದರೆ ಅತ್ತ ಆಂಟೋನ್‌ಗೆ ಜಪಾನಿ ಭಾಷೆ ಸಾಂಗತ್ಯ. ಪುಟ್ಟ ಕಣ್ಣುಗಳ ಸುಂದರಿ ಕೊಯ್ಕೊಳೊಂದಿಗೆ ಊಟ, ಉಪಹಾರ, ನಿದ್ದೆ. ಕೊನೆಗೊಂದು ದಿನ ಕ್ರಿಸ್ಟೀನ್‌ಗೆ ಆಂಟೋನ್ ಸಂಬಂಧ ತಿಳಿಯುವ ದೃಶ್ಯ ಕುತೂಹಲಕಾರಿ. ಕೊಯ್ಕೊ ಜಪಾನಿ ಸಂಪ್ರದಾಯದಂತೆ ಹೂವುಗಳಲ್ಲಿ ಬರೆದಿಟ್ಟ ಪ್ರೇಮ ಪತ್ರ ಆಂಟೋನ್‌ಗೆ ಕಳುಹಿಸಿರುತ್ತಾಳೆ. ಆದರೆ ಹೂವಿನಲ್ಲಿ ಪ್ರೇಮ ಪತ್ರವಿರುವುದು ಆಂಟೋನ್‌ಗೆ ಗೊತ್ತಿಲ್ಲ. ಮನೆಯಲ್ಲಿ ಹೂಗುಚ್ಛದಲ್ಲಿ ತಂದಿಟ್ಟ ಹೂಗಳು ಒಂದು ದಿನ ಅರಳುತ್ತವೆ. ಆಂಟೋನ್ ಮನೆಯಲ್ಲಿರದ ಸಮಯದಲ್ಲಿ ಕುತೂಹಲದಿಂದ ಹೂವಿನೆಡೆ ಸಾಗುವ ಕ್ರಿಸ್ಟೀನ್ ಪ್ರೇಮ ಪತ್ರ ಕಾಣುತ್ತಾಳೆ.
ನಂತರ ಮನೆ ಬಿಟ್ಟು ಹೋಗುವ ಆಂಟೋನ್ ಜಪಾನಿ ಭಾಷೆಯ ಉನ್ನತಾಭ್ಯಾಸದಲ್ಲಿ ತೊಡಗುತ್ತಾನೆ. ಆದರೆ ಈ ಬದಲಾವಣೆಗಳನ್ನೆಲ್ಲ ನಿರ್ದೇಶಕ ನಾಲ್ಕು ದೃಶ್ಯಗಳಲ್ಲಿ ತೆರೆದಿಟ್ಟಿದ್ದಾರೆ. ಸೋಮವಾರದಿಂದ ಶನಿವಾರದವರೆಗೆ ಜಪಾನಿ ಸಂಪ್ರದಾಯದ ಪ್ರಕಾರ ಊಟಕ್ಕೆ ಕುಳಿತಾಗ ಫ್ರೆಂಚ್ ಸಂಪ್ರದಾಯದ ಆಂಟೋನ್ ಅನುಭವಿಸುವ ಯಾತನೆ ಜಪಾನಿ ಪ್ರೇಮದ ತಾತ್ಸಾರಕ್ಕೆ ಕಾರಣವಾಗುತ್ತದೆ. ಕೊನೆಗೆ ತನಗೆ ಜಪಾನಿ ಸಂಸ್ಕೃತಿ, ಹುಡುಗಿ ಒಪ್ಪದು ಎಂದು ನಿರ್ಧರಿಸಿದ ಆಂಟೋನ್ ಮನೆಗೆ ವಾಪಸ್ಸಾಗುತ್ತಾನೆ.
ಚಿಕ್ಕ ಕತೆಯೊಂದನ್ನು ಸಮರ್ಥವಾಗಿ ಹೇಗೆ ಬಿಂಬಿಸಬಹುದು ಎಂಬುದಕ್ಕೆ ಈ ಚಿತ್ರ ಉದಾಹರಣೆ. ಎರಡು ಸಂಸ್ಕೃತಿಗಳ ಸಮ್ಮಿಲನವೂ ಎಷ್ಟು ಕಷ್ಟಕರ ಎಂಬುದು ಕೂಡ ಇಲ್ಲಿ ಬಿಂಬಿತವಾಗುತ್ತದೆ. ನಿರ್ದೇಶಕ ಕಟ್ಟಿ ಕೊಡುವ ಕೆಲ ದೃಶ್ಯಗಳಲ್ಲಿ ಪರ ಸಂಗದ ಪರಿಣಾಮ, ಶುಭ್ರ ಪ್ರೀತಿಯ ಅನುಭವ ನಮ್ಮದಾಗುತ್ತದೆ. ಅಂದ ಹಾಗೆ ಫ್ರೆಂಚ್ ಭಾಷೆಯಲ್ಲಿ ಡೊಮಿಸೈಲ್ ಕೊಂಜುಗಲ್ ಹೆಸರಿನ ಈ ಚಿತ್ರ ಇಂಗ್ಲೀಷ್ ಅವತರಣಿಕೆಯಲ್ಲಿ ಬೆಡ್ ಆಂಡ್ ಬೋರ್ಡ್ ಆಗಿದೆ. ನಿರ್ದೇಶಕ ಫ್ರಾನ್ಸಿಸ್ ಟ್ರಾಫ್ಯಾಟ್. ಜೀನ್ ಪಿಯರ್, ಕ್ಲೌಡಾ ಜೇಡ್ ಮುಖ್ಯ ಪಾತ್ರಧಾರಿಗಳು. ಚಿತ್ರ ಬಿಡುಗಡಗೊಂಡ ವರ್ಷ ೧೯೭೦.

Monday, February 2, 2009

ಚಂದ್ರಯಾನ ಬಿಡುಗಡೆ




ಸ್ನೇಹಿತ, ಪತ್ರಕರ್ತ ಶಿವಪ್ರಸಾದ್ ಬರೆದ ಚಂದ್ರಯಾನ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿತು. ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದು ಯುವಜನರ ಆರಾಧಕ, ಖ್ಯಾತ ವಿಜ್ಞಾನಿ, ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ. ಪುಸ್ತಕ ಬಿಡುಗಡೆ ಸಮಾರಂಭದ ವಿವರ ಇಲ್ಲಿದೆ...

ನವದೆಹಲಿ, ಜ. 27: ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸ್ಟಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಇಂದು ಇಲ್ಲಿ ಹೇಳಿದರು.
ಅವರು, ಪತ್ರಕರ್ತ ಶಿವಪ್ರಸಾದ್ ಬರೆದಿರುವ ಚಂದ್ರಯಾನ ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಕಾನ್ಸ್ಟಾಂಟಿನ್ ಕಿವುಡನಾಗಿದ್ದ. ಆದರೆ ಅಧ್ಯಯನದಲ್ಲಿ ಅತೀವ ಆಸಕ್ತಿ ಹೊಂದಿದ್ದ. ತನ್ನ ಅಧ್ಯಯನದಿಂದ ವಿವಿಧ ಸಮೀಕರಣಗಳನ್ನು ರಚಿಸಿದ್ದ. ಆ ಮೂಲಕ ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು ತಿಳಿಸಿದ್ದ. ಇಂದು ಆತನ ಊಹೆ ನಿಜವಾಗಿದೆ. ನಾವು ಚಂದ್ರನ ಮೇಲೆ ಹೊಗಿ ಬಂದಿದ್ದೇವೆ. ಹೀಗಾಗಿ ಚಂದ್ರಯಾನದ ಕಲ್ಪನೆಯ ಜನಕ ಕನ್ಸ್ಟಾಂಟಿನ್ ಎಂದರು.
ಪುಸ್ತಕ ಬಿಡುಗಡೆ ಮಾಡಿದ ನಂತರ ಪ್ರಥಮ ಪ್ರತಿಯನ್ನು ದಿ ವೀಕ್ ನ ಸ್ಥಾನಿಕ ಸಂಪಾದಕರಾದ ಕೆ.ಎಸ್. ಸಚ್ಚಿದಾನಂದ ಮೂರ್ತಿ ಅವರಿಗೆ ನೀಡಿದರು. ನಂತರ ಪುಸ್ತಕದಲ್ಲಿನ ವಿವಿಧ ಅಧ್ಯಾಯಗಳ ಬಗ್ಗೆ ಮಾಹಿತಿ ಪಡೆದರು.
ಚಂದ್ರಯಾನ ಉಡ್ಡಯನದ ನಂತರ ಅಮೇರಿಕಾದ ನಾಸಾ, ಒಬಾಮಾ ನೀಡಿದ್ದ ಪ್ರತಿಕ್ರಿಯೆ ಹಾಗೂ ಆ ಬಗ್ಗೆ ಮಾಧವನ್ ನಾಯರ್ ನೀಡಿದ್ದ ವಿವರಣೆ ಇರುವ ಅಧ್ಯಾಯವನ್ನು ಲೇಖಕ ಶಿವಪ್ರಸಾದ್ ಅವರಿಂದ ಓದಿಸಿ, ವಿವರಣೆ ಪಡೆದರು.
ನಂತರ ಮತ್ತೋರ್ವ ಪತ್ರಕರ್ತ ವಿನಾಯಕ್ ಭಟ್ ಬರೆದಿದ್ದ ದಿ ಗ್ರೇಟ್ ಮೂನ್ ಹೋಕ್ಸ್-1835 ಅಧ್ಯಾಯದ ಬಗ್ಗೆಯೂ ವಿವರಣೆ ಪಡೆದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿನಾಯಕ್ ಭಟ್ ಅವರಿಗೆ ಅವರ ಲೇಖನದಲ್ಲಿದ್ದ ಫೋಟೋ ತೋರಿಸಿ, ಈ ಬಗ್ಗೆ ವಿವರಣೆ ಕೇಳಿ ಆನಂದಿಸಿದರು.
'ಚಂದ್ರಯಾನ ಪುಸ್ತಕ ಬರೆಯಲು ಒಂದು ವರ್ಷ ತೆಗೆದುಕೊಂಡಿದ್ದೀರಿ. ಐತಿಹಾಸಿಕ ಯೋಜನೆಯಾದ ಚಂದ್ರಯಾನ ಕುರಿತ ಸಮಗ್ರ ವಿವರ ಇರುವ ಪುಸ್ತಕವನ್ನು ಹೊರ ತಂದಿರುವುದು ಉತ್ತಮ ಪ್ರಯತ್ನ' ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ 'ಪ್ರಜಾವಾಣಿ' ವಿಶೇಷ ಪ್ರತಿನಿಧಿ ದಿನೇಶ್ ಅಮಿನ್ ಮಟ್ಟು, 'ಡೆಕ್ಕನ್ ಹೆರಾಲ್ಡ್' ಸ್ಥಾನಿಕ ಸಂಪಾದಕ ಬಿ.ಎಸ್. ಅರುಣ್, 'ವಿಜಯ ಕರ್ನಾಟಕ' ದೆಹಲಿ ಪ್ರತಿನಿಧಿ ವಿನಾಯಕ್ ಭಟ್, ಕರ್ನಾಟಕ ವಾರ್ತಾ ಕೇಂದ್ರದ ಸಹಾಯಕ ನಿರ್ದೆಶಕ ವೀರಣ್ಣ ಕಮ್ಮಾರ, ಸುವರ್ಣ ಚಾನೆಲ್ ವರದಿಗಾರ ಪ್ರಶಾಂತ್ ನಾತೂ ಉಪಸ್ಥಿತರಿದ್ದರು.