Tuesday, August 11, 2009

ಸಾಂಗತ್ಯ ಚಿತ್ರೋತ್ಸವದ ನೆನಪಿನ ರೀಲುಗಳು


ಚರ್ಚೆಯಲ್ಲಿ ಗುರುಪ್ರಸಾದ್, ಗುರುಸ್ವಾಮಿ
]
ಚಿತ್ರೋತ್ಸವದಲ್ಲಿ ಸಿನಿಮಾ ಪ್ರಿಯರು

ಕವಿಶೈಲದಲ್ಲಿ ಚರ್ಚೆ

ಪರಮೇಶ್ವರ್ ಗುರುಸ್ವಾಮಿ ಅವರಿಂದ ಮಾಹಿತಿ...

ಸಾಂಗತ್ಯ ಚಿತ್ರೋತ್ಸವದ ಸವಿ ನೆನಪು...




ಸ್ಥಳ : ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದ ಮಿನಿ ಚಿತ್ರಮಂದಿರ, ಕುಪ್ಪಳ್ಳಿ.
ವೇಳೆ : ಬೆಳಗಿನ ೯ ಗಂಟೆ.
ವಿಭಿನ್ನ ನೆಲೆಯ ಚಿತ್ರಗಳ ವೀಕ್ಷಣೆಗೆ ಮಂಗಳೂರು, ಬೆಂಗಳೂರು, ಮೈಸೂರುಗಳಿಂದ ಬಂದ ಚಿತ್ರಪ್ರೇಮಿಗಳದ್ದೆಲ್ಲ ಸಂಭ್ರಮ, ಸಡಗರ. ಇದಕ್ಕೆಲ್ಲ ಕಾರಣವಾಗಿದ್ದು ಸಾಂಗತ್ಯ ತಂಡದ ಎರಡನೇ ಚಿತ್ರೋತ್ಸವ. ಜನೆವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವದಲ್ಲಿ ರಮ್ಯ ಚಿತ್ರಗಳನ್ನು ನೋಡಿದ್ದ ಚಿತ್ರಾಸಕ್ತರಿಗೆ ಈ ಬಾರಿ ನಾಲ್ಕು ಹಂತಗಳಲ್ಲಿ ಚಿತ್ರ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ತವಕ.
ಷೇಕ್ಸ್‌ಪಿಯರನ್ ಮ್ಯಾಕ್‌ಬೆತ್ ನಾಟಕ ಅಧರಿಸಿದ ಪೊಲೊನ್‌ಸ್ಕಿ ನಿರ್ದೇಶನದ ಮ್ಯಾಕ್‌ಬೆತ್ ಹಾಗೂ ಅಕಿರಾ ಕುರೊಸೊವಾ ನಿರ್ದೇಶಿಸಿದ ಥ್ರಾನ್ ಆಫ್ ಬ್ಲಡ್. ಎರಡೂ ಚಿತ್ರಗಳು ವಿಭಿನ್ನ ನೆಲೆಯವು ಒಂದು ಪಾಶ್ಯಾತ್ಯದ ಕತಾ ಹಂದರ ಹೊಂದಿದ್ದರೆ ಇನ್ನೊಂದು ಏಶಿಯಾ ಪರಂಪರೆಯಲ್ಲಿ ಮ್ಯಾಕ್‌ಬೆತ್‌ನ ಕಥೆಯುಳ್ಳದ್ದು. ಮ್ಯಾಕ್ ಬೆತ್‌ನ ಪಾಪ ಪ್ರಜ್ಞೆ, ಅಕಾರ ಲಾಲಸೆಯನ್ನು ದೃಶ್ಯ ಮಾಧ್ಯಮದಲ್ಲಿ ತೆರೆದಿಟ್ಟ ಚಿತ್ರಗಳನ್ನು ನೋಡಿದ ಶಿಬಿರಾರ್ಥಿಗಳಿಗೆ ಹೊಸ ಅನುಭವ. ನಂತರ ಈ ಚಿತ್ರಗಳ ಬಗ್ಗೆ ನಡೆದ ಎರಡು ಗಂಟೆಯ ಚರ್ಚೆಯಲ್ಲಿ ಎರಡೂ ಚಿತ್ರಗಳ ನಾನಾ ಆಯಾಮಗಳ ಬಗ್ಗೆ ವಿಶ್ವ ದರ್ಶನವಾಯಿತು.
ಭಾರತೀ ಶಂಕರ್ ನಿರ್ದೇಶನದ ಕಾರಂತಜ್ಜನಿಗೊಂದು ಪತ್ರ ನೋಡಿದವರ ಮನ ಸೆಳೆಯಿತು, ಚಿತ್ರದ ಕೊನೆಯ ದೃಶ್ಯ ಎಲ್ಲರಲ್ಲೂ ಚಿಂತನೆಗೆ ಕಾರಣವಾಯಿತು. ಕಡಲ್ಕೊರೆತದಂತಹ ಸಮಸ್ಯೆಯೊಂದಿಗೆ ಸಮಾಜದ ನಾನಾ ಸ್ತರಗಳ ಸಮಸ್ಯೆಗಳನ್ನು ಎದುರಿಟ್ಟ ಚಿತ್ರಕ್ಕೆ ಭರ್ತಿ ಚಪ್ಪಾಳೆ, ಮೆಚ್ಚುಗೆ. ಹಿಟ್ಲರ್ ತನ್ನ ಕಾಲದಲ್ಲಿ ನಡೆಸಿದ ಪಾಶವೀ ಕೃತ್ಯದ ಬಗ್ಗೆ ಬಾಲಕನೊಬ್ಬನ ದೃಷ್ಟಿಯನ್ನು ಬಿಂಬಿಸಿದ್ದು ದ ಬಾಯ್ ವಿತ್ ಸ್ಟ್ರಿಪಡ್ ಪೈಜಾಮಾ. ಚಿತ್ರದಲ್ಲಿ ಮನ ಕಲಕುವ ದೃಶ್ಯಗಳು ಚರ್ಚೆಯಲ್ಲಿ ಮೆಚ್ಚುಗೆಗೆ ಪಾತ್ರವಾದವು. ಕಾರ್ತಿಕ್ ಪರಾಡ್ಕರ್‌ರ ನಾಗ ಮಂಡಲ ಸಾಕ್ಷ್ಯಚಿತ್ರ, ಘೋಸ್ಟ್ ಇನ್ ದಿ ಡಾರ್ಕ್‌ನೆಸ್ ಚಿತ್ರಗಳನ್ನು ವೀಕ್ಷಿಸಿದ ಶಿಬಿರಾರ್ಥಿಗಳು ಭೇಷ್ ಎಂದರು.
ಈ ಬಾರಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡು ಮಾರ್ಗದರ್ಶನ ನೀಡಿದ್ದು ಖ್ಯಾತ ನಿರ್ದೇಶಕ ಗುರುಪ್ರಸಾದ್. ನಿರ್ದೇಶಕನಿಗೆ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ, ವ್ಯಾಮೋಹವಿರಬೇಕು ಆಗ ಮಾತ್ರ ಒಳ್ಳೆಯ ಚಿತ್ರ ನಿರ್ಮಿಸಲು ಸಾಧ್ಯ ಎಂದ ಅವರು ಚಿತ್ರ ನಿರ್ಮಾಣದ ಬಗ್ಗೆ ಹಲವು ಕುತೂಹಲದ ಸಂಗತಿಗಳನ್ನು ತೆರೆದಿಟ್ಟರು. ಸಾಂಗತ್ಯದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ಆಯೋಜಿಸಿದರೆ ಸಹಕಾರ ನೀಡಲು ಸಾಧ್ಯ ಎಂದರು.
ಎರಡು ದಿನಗಳ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರಗಳೊಂದಿಗೆ ಮಲೆನಾಡಿನ ಅದ್ಭುತ ಉಪಹಾರ, ಊಟವಿತ್ತು. ಮತ್ತೊಂದು ಚಿತ್ರೋತ್ಸವಕ್ಕೆ ಬಂದೇ ಬರುತ್ತೇವೆ ಎನ್ನುತ್ತ ಎಲ್ಲರೂ ಚಿತ್ರಗಳ ಸವಿ ನೆನಪಿನ ರೀಲುಗಳನ್ನು ಮನದಲ್ಲಿ ಜೋಪಾನವಾಗಿಟ್ಟು ತೆರಳಿದರು. ಚಿತ್ರೋತ್ಸವ ಆಯೋಜನೆಗೆ ಕಾರಣರಾದ ಅರವಿಂದ ನಾವಡ ಸರ್, ಸುಂದ್ರ ಕುಮಾರ್, ಪರಮೇಶ್ವರ ಗುರುಸ್ವಾಮಿ, ದೀಪಾ ಹಿರೇಗುತ್ತಿ, ಕಡಿದಾಳ್ ಪ್ರಕಾಶ್‌ರಿಗೆ ವಂದನೆ, ಅಭಿನಂದನೆ.

Monday, August 3, 2009

ಜಾಣ ಪ್ರಶ್ನೆಗಳು ಆಲಸಿ ಮಂಜನದ್ದೋ ? ನಿರ್ದೇಶಕರದ್ದೋ ?

ಒಬ್ಬ ಉತ್ತಮ ಚಿತ್ರ ನಿರ್ದೇಶಕ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಿರ್ದೇಶನಕ್ಕೆ ಮುಂದಾಗುತ್ತಾನೆ. ಈ ಪ್ರಶ್ನೆಗಳು ಚಿತ್ರ ನೋಡಿದ ನಂತರ ಪ್ರೇಕ್ಷಕನನ್ನೂ ಕಾಡಬೇಕು. ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು, ಪ್ರೇಕ್ಷಕರ ಮನದಲ್ಲೂ ಹಲವು ಪ್ರಶ್ನೆಗಳನ್ನು ಮೂಡಿಸಿರುವುದು ಗುರುಪ್ರಸಾದ್‌ರ ಎದ್ದೇಳು ಮಂಜುನಾಥ. ಭಾರಿ ಆಲಸಿಯೊಬ್ಬ ಜೀವಿಸುವ ರೀತಿ, ಸಮಾಜದ ವಿಡಂಬನೆಯನ್ನೇ ಮಾಡುತ್ತ ಮತ್ತೆ ನಿದ್ದೆಗೆ ಜಾರುವ ಕಳ್ಳ ಮಂಜ ಸಮಾಜ, ಸಿನಿಮಾ, ರಾಜಕೀಯ, ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ನಮ್ಮೆದುರು ಹರಡುತ್ತಾನೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ ಮಂಜನ ಬಗ್ಗೆ ಕನಿಕರ ಮೂಡುವುದಿಲ್ಲ, ಬದಲಿಗೆ ಅಭಿಮಾನ ವ್ಯಕ್ತವಾಗುತ್ತದೆ. ಪೂರ್ಣ ಲೇಖನ ಓದಿ...

http://saangatya.wordpress.com

Tuesday, July 28, 2009

ಸಾಂಗತ್ಯದ ಇನ್ನೊಂದು ಹೆಜ್ಜೆ

ಆ. 8 ಮತ್ತು 9 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಸಾಂಗತ್ಯ ಆಯೋಜಿಸಿರುವ ಎರಡನೇ ಚಿತ್ರೋತ್ಸವಕ್ಕೆ ಹೆಸರು ನೋಂದಣಿ ಆರಂಭವಾಗಿದೆ.

ಈ ಬಾರಿ ಹೆಸರು ನೋಂದಣಿ ಕಡ್ಡಾಯವಾಗಿದ್ದು, ಸಾಂಗತ್ಯ ಹಲವೆಡೆ ಮಾಹಿತಿ ಮತ್ತು ನೋಂದಣಿಗೆ ತನ್ನ ಪ್ರತಿನಿಧಿಗಳನ್ನು ನಿಯೋಜಿಸಿದೆ. ಜತೆಗೆ ಸಾಕ್ಷ್ಯಚಿತ್ರಗಳನ್ನೂ ಆಹ್ವಾನಿಸಿದೆ. ಆ. 5 ರೊಳಗೆ 20 ನಿಮಿಷಗಳೊಳಗಿನ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಕಳುಹಿಸಬಹುದು. ಆಯ್ಕೆಯಾದ ಎರಡು ಸಾಕ್ಷ್ಯಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಈ ಬಾರಿ ಚಲನಚಿತ್ರೋತ್ಸವದಲ್ಲಿ ಸಾಕಷ್ಟು ಹೊಸತನವನ್ನು ಹೊಂದಿದ್ದು, ಚರ್ಚೆ, ಸಂವಾದಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ವಿದೇಶಿ ಭಾಷೆಗಳ ಚಿತ್ರಗಳೊಂದಿಗೆ, ದೇಶಿ ಅದರಲ್ಲೂ ದಕ್ಷಿಣ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಆಲೋಚಿಸಿದ್ದು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹೆಸರು ನೋಂದಾಯಿಸಿದವರು ತಕ್ಷಣವೇ ತಮ್ಮ ಹೆಸರನ್ನು ದಾಖಲಿಸಬಹುದು.

ಬಹಳ ವಿಶಿಷ್ಟವಾಗಿ ಈ ಉತ್ಸವವನ್ನು ಸಂಘಟಿಸಿದ್ದು, ಸಿನಿಮಾ ಗ್ರಹಿಕೆ, ಸಿನಿಮಾ ನಿರ್ಮಾಣ ಇತ್ಯಾದಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇದು ಸಿನಿಮಾ ಗ್ರಹಿಕೆಯ ವಿಧಾನವನ್ನು ಅರಿಯಲೆಂದೇ ರೂಪಿಸಿದ್ದು, ಆಸಕ್ತರು ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ 93433 81802, 98444 91532 ಗೆ ಸಂಪರ್ಕಿಸಬಹುದು.

ಪ್ರವೇಶ ಶುಲ್ಕ 300 ರೂ.. ಬೆಂಗಳೂರಿನಲ್ಲಿ ಮಹೇಶ್ ಹೆಗಡೆ-99864 11247, ಪ್ರವೀಣ್ ಬಣಗಿ- 98444 91532, ಮೈಸೂರಿನಲ್ಲಿ ನಾವಡ- 93433 81802, ಬಾಗಲಕೋಟೆ- ರವಿರಾಜ್ ಗಲಗಲಿ-93433 81818, ಉಡುಪಿ, ದಕ್ಷಿಣ ಕನ್ನಡದಲ್ಲಿ ಸಿಬಂತಿ ಪದ್ಮನಾಭ-94495 25854, ತೀರ್ಥಹಳ್ಳಿಯಲ್ಲಿ ಮಧುಕರ್ ಮಯ್ಯ-94481 54298, ಚಿಕ್ಕಮಗಳೂರು, ಕೊಪ್ಪದಲ್ಲಿ ದೀಪಾ ಹಿರೇಗುತ್ತಿ-94804 76176…ಇವರಲ್ಲಿ ಹೆಸರು ನೋಂದಾಯಿಸಬಹುದು.

ಸಾಕ್ಷ್ಯಚಿತ್ರಗಳಿಗೆ ಆಹ್ವಾನ
ಚಿತ್ರೋತ್ಸವದಲ್ಲಿ ಹವ್ಯಾಸಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಾಕ್ಷ್ಯಚಿತ್ರಗಳು ೨೦ ನಿಮಿಷಗಳೊಳಗಿರಬೇಕು. ಬಂದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶನಕ್ಕೆ ತಜ್ಞರ ಸಮಿತಿ ಆಯ್ಕೆ ಮಾಡಲಿದೆ. ಆಸಕ್ತರು ತಾವು ನಿರ್ಮಿಸಿದ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಸಾಂಗತ್ಯ, c/o ಸುಧಾ, 905/175 ಎ, 7 ನೇ ಕ್ರಾಸ್, ನಾಲ್ಕನೇ ಮುಖ್ಯರಸ್ತೆ, ಸಾರ್ವಜನಿಕ ಹಾಸ್ಟೆಲ್ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು 570 008 ಇಲ್ಲಿಗೆ ಕಳುಹಿಸಬಹುದು.

Monday, July 13, 2009

ಮೌನದ ಭಾಷೆ-ನಿಶಾಂತ್



ಆ ಪುಟ್ಟ ಹಳ್ಳಿಯಲ್ಲಿ ಮೌನವೇ ಸರ್ವತ್ರ ಸಾಧನ, ಮೌನವೇ ಭಾಷೆ, ಮೌನದ್ದೇ ಸಂವಹನ. ಗ್ರಾಮದ ಜಮೀನ್ದಾರ ಸಹೋದರರು ನಡೆಸುವ ದೌರ್ಜನ್ಯ, ಅತ್ಯಾಚಾರಕ್ಕೆ ಮೌನವೇ ಉತ್ತರ. ಖ್ಯಾತ ನಿರ್ದೇಶಕ ಶ್ಯಾಂ ಬೆನಗಲ್ ೧೯೭೬ರಲ್ಲಿ ನಿರ್ದೇಶಿಸಿದ ನಿಶಾಂತ್ ಚಿತ್ರದ ಒನ್ ಲೈನ್ ಕತೆಯಿದು.
ನಿಶಾಂತ್ ಅರ್ಥಾತ್ ರಾತ್ರಿಯ ಕೊನೆ, ಚಿತ್ರದಲ್ಲೆಲ್ಲ ಕತ್ತಲೆ ಬೆಳಕಿನ ಆಟವನ್ನಾಡಿದ್ದಾರೆ ಶ್ಯಾಂ. ೧೯೪೫ರಲ್ಲಿ ಆಂಧ್ರ ಪ್ರದೇಶದ ಗ್ರಾಮವೊಂದರಲ್ಲಿ ನಡೆಯುವ ಜಮೀನ್ದಾರರ ದೌರ್ಜನ್ಯ ಇಲ್ಲಿ ಕತೆಯಾಗಿದೆ. ಆ ಹಳ್ಳಿಯಲ್ಲಿ ಜಮೀನ್ದಾರರು ಹೇಳಿದ್ದೆ ಮಾತು, ಆಡಿದ್ದೇ ಆಟ. ಹಿರಿಯಣ್ಣ ಹಾಗೂ ಇಬ್ಬರು ಸಹೋದರರ ಜಮೀನ್ದಾರರ ಕುಟುಂಬ ಅಕ್ಷರಶ: ಹಳ್ಳಿಯನ್ನು ನರಕವಾಗಿಸುತ್ತಾರೆ. ಸಂತೆಯಲ್ಲಿ ಕೋಳಿ ಮಾರುವವಳ ಬುಟ್ಟಿಗೆ ಜಮೀನ್ದಾರರ ಸಹೋದರರು ಕೈ ಹಾಕಿದರೆ ಬುಟ್ಟಿಯಲ್ಲಿನ ಕೋಳಿಗಳು ಅವರ ಹೊಟ್ಟೆ ಹಸಿವು ತಣಿಸಿದರೆ, ಕೋಳಿ ಮಾರುವಾಕೆ ದೇಹದ ಹಸಿವು ಪೂರೈಸಬೇಕು. ಹಿರಿಯಣ್ಣ (ಅಮರೀಶ್ ಪುರಿ), ಕಿರಿಯವ (ಡಾ.ಮೋಹನ್ ಅಗಾಸೆ), ಚಿಕ್ಕ ಸಹೋದರ (ಅನಂತ್ ನಾಗ್) ಸುತ್ತ ಚಿತ್ರದ ಕತೆ ಸುತ್ತುತ್ತದೆ.
ಗ್ರಾಮಕ್ಕೆ ಬರುವ ಶಾಲಾ ಮಾಸ್ತರ್(ಗಿರೀಶ್ ಕಾರ್ನಾಡ್) ಹೆಂಡತಿ ಸುಶೀಲಾ (ಶಬಾನಾ ಆಜ್ಮಿ) ಜಮೀನ್ದಾರ ಸಹೋದರರ ಕಣ್ಣಿಗೆ ಬೀಳುತ್ತಾಳೆ. ಅದೊಂದು ದಿನ ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗುವ ಜಮೀನ್ದಾರರು ಆಕೆಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಆಸೆ ಪೂರೈಸಿಕೊಳ್ಳುತ್ತಾರೆ. ಅದು ಜಮೀನ್ದಾರರ ವಿಷಯವಾಗಿರುವುದರಿಂದ ಯಾರೂ ಬಾಯಿ ಬಿಡುವುದಿಲ್ಲ. ಪೊಲೀಸರು, ಕಲೆಕ್ಟರ್ ಕಚೇರಿ ಹೀಗೆ ಕಂಡ ಕಂಡಲೆಲ್ಲ ಅಲೆದಾಡಿ ಪತ್ನಿಯನ್ನು ವಾಪಸ್ ಪಡೆಯಲು ನಡೆಸಿದ ಪ್ರಯತ್ನಗಳು ವಿಫಲವಾಗುತ್ತವೆ. ಇತ್ತ ಜಮೀನ್ದಾರರ ಮನೆಯ ವಾತಾವರಣಕ್ಕೆ ಹೊಂದಿಕೊಂಡ ಸುಶೀಲಾ ಪ್ರತಿರೋಧದ ಶಕ್ತಿ ಕಳೆದುಕೊಳ್ಳುತ್ತಾಳೆ. ಜಮೀನ್ದಾರನ ಕಿರಿಯ ಸಹೋದರ (ನಾಸಿರುದ್ದೀನ್ ಶಾ)ಆಕೆಯಲ್ಲಿ ಅನುರಕ್ತನಾಗುತ್ತಾನೆ.
ಒಮ್ಮೆ ದೇವಾಲಯದ ಎದುರು ಮಾಸ್ತರ್ ಹಾಗೂ ಆತನ ಪತ್ನಿ ಮುಖಾಮುಖಿಯಾಗುತ್ತಾರೆ. ನನ್ನನ್ನು ಅಪಹರಿಸಿಕೊಂಡು ಹೋದರೂ ನೀವು ಬಿಡಿಸಲು ಏಕೆ ಯತ್ನಿಸಿಲ್ಲ ಎಂದು ಪ್ರಶ್ನಿಸುವ ಸುಶೀಲಾ ಜಮೀನ್ದಾರನ ಮನೆಗೆ ವಾಪಸ್ಸಾಗುತ್ತಾಳೆ. ದೇವಾಲಯದ ಪೂಜಾರಿಯಿಂದ ನೈತಿಕ ಸ್ಥೈರ್ಯ ಪಡೆಯುವ ಶಾಲಾ ಮಾಸ್ತರ್ ಉತ್ಸವದ ಸಂದರ್ಭದಲ್ಲಿ ಜನರನ್ನು ಒಗ್ಗೂಡಿಸಿ ದಂಗೆ ಏಳುತ್ತಾನೆ. ಗ್ರಾಮಸ್ಥರ ಆಕ್ರೋಶಕ್ಕೆ ಜಮೀನ್ದಾರ ಹಾಗೂ ಆತನ ಇಬ್ಬರು ಸಹೋದರರು ಹಾಗೂ ಕೊನೆಯ ಸಹೋದರನ ಪತ್ನಿ ರುಕ್ಮಿಣಿ ಕೊಲೆಯಾಗುತ್ತಾರೆ. ಕೊನೆಯ ಸಹೋದರ (ನಾಸಿರುದ್ದೀನ್ ಶಾ)ನೊಂದಿಗೆ ಸುಶೀಲಾ ಪರಾರಿಯಾಗುತ್ತಾಳೆ. ಜಮೀನ್ದಾರರೊಂದಿಗೆ ಹೋರಾಟದಲ್ಲಿ ಕೈಗೆ ಗುಂಡು ಬಡಿದು ಗಾಯಗೊಂಡ ಮಾಸ್ತರ್ ಪತ್ನಿಯನ್ನು ಹುಡುಕುತ್ತ ಅಸಹಾಯಕನಾಗಿ ನಿಲ್ಲುತ್ತಾನೆ.
ಕತ್ತಲಿಗೆ ಕೊನೆಯಿದೆ, ಬೆಳಗು ಬಂದೇ ಬರುತ್ತದೆ ಎಂಬುದನ್ನು ಹಲವು ದೃಶ್ಯಗಳ ಮೂಲಕ ಶ್ಯಾಂ ಚಿತ್ರದಲ್ಲಿ ನಿರೂಪಿಸುತ್ತಾರೆ. ಚಿತ್ರದ ಮೊದಲ ದೃಶ್ಯವೇ ಮುಂಜಾವಿನಲ್ಲಿ ಮಂತ್ರ ಹೇಳುತ್ತ ದೇವಾಲಯದ ಬಾಗಿಲು ತೆಗೆಯುವ ಪೂಜಾರಿಯದ್ದು. ಅಸಹಾಯಕತೆ, ದೌರ್ಜನ್ಯಕ್ಕೆ ಬಲಿಯಾದ ಸುಶೀಲಾ ತನ್ನ ಮೇಲೆ ಮಮಕಾರ, ಪ್ರೀತಿ ತೋರಿಸಿದವನ ಹೆಂಡತಿ ರುಕ್ಮಿಣಿಯ ಗೆಳತಿಯೂ ಆಗುತ್ತಾಳೆ. ಸ್ವಾತಂತ್ರ್ಯಪೂರ್ವ ಜಮೀನ್ದಾರಿ ಪದ್ಧತಿಯ ದೌರ್ಜನ್ಯಗಳ ಬಗ್ಗೆ ಹಲವು ಚಿತ್ರಗಳು ತೆರೆ ಕಂಡಿದ್ದರೂ ನಿಶಾಂತ್ ಮಾತ್ರ ಈ ಪ್ರಯತ್ನಗಳಲ್ಲಿ ವಿಭಿನ್ನವಾಗುತ್ತದೆ. ಜಮೀನ್ದಾರರ ಆಟಾಟೋಪ, ದೃಶ್ಯಗಳ ಮಧ್ಯದ ಮೌನ, ಪರಿಣಾಮಕಾರಿ ಸಂಭಾಷಣೆ ಹಾಗೂ ಸರಳ ಸಂಗೀತ ಚಿತ್ರದ ಹೈಲೈಟ್. ದೌರ್ಜನ್ಯವನ್ನು ಹಿಂಸೆಯ ರೂಪದಲ್ಲಿ ಬಿಂಬಿಸದೇ ಮಾತು ಹಾಗೂ ಮೌನದ ಮೂಲಕ ರೂಪಿಸಿ ವಿಶಿಷ್ಟ ಅನುಭವ ನೀಡುತ್ತಾರೆ ಬೆನಗಲ್. ಅಂದ ಹಾಗೆ ಈ ಚಿತ್ರದಲ್ಲಿ ಪ್ರತಿಭಾವಂತರ ಪಡೆಯೇ ಇದೆ.
ಮರಾಠಿ ರಂಗಭೂಮಿಯ ಹೆಸರಾಂತ ನಟ, ನಿರ್ದೇಶಕ ಡಾ.ಮೋಹನ್ ಆಗಾಸೆ, ಕನ್ನಡದ ಖ್ಯಾತ ನಟ ಅನಂತ ನಾಗ್, ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಕುಲಭೂಷಣ್ ಕರಬಂದಾ, ಅಂಕುರ್ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಾಧು ಮೆಹರ್ ಚಿತ್ರದಲ್ಲಿದ್ದಾರೆ. ಸ್ಮಿತಾ ಪಾಟೀಲರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿಯೂ ಈ ಚಿತ್ರಕ್ಕಿದೆ. ಸಂಭಾಷಣೆ ಬರೆದ ಸತ್ಯದೇವ್ ದುಬೆ ಕೂಡ ಪೂಜಾರಿ ಪಾತ್ರದಲ್ಲಿದ್ದಾರೆ. ಖ್ಯಾತ ಲೇಖಕ ವಿಜಯ್ ತೆಂಡೂಲ್ಕರ್ ಕತೆ ಆಧಾರಿತ ಚಿತ್ರವನ್ನು ಆಂಧ್ರ ಪ್ರದೇಶದ ಪೂಚಂಪಲ್ಲಿಯಲ್ಲಿ ಚಿತ್ರಿಸಲಾಗಿದೆ.
ಪ್ರಶಸ್ತಿಗಳು : ಉತ್ತಮ ಹಿಂದಿ ಚಿತ್ರ, ಉತ್ತಮ ನಿರ್ದೇಶಕ, ೧೯೭೭, ಕ್ಯಾನೆಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಚಿಕ್ಯಾಗೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದೆ.
ಸಂಗೀತ : ವನರಾಜ್ ಭಾಟಿಯಾ ನಿರ್ಮಾಪಕರು : ಮೋಹನ್ ಬಿಜಲಾನಿ, ಫ್ರೀನಾ ವರೇರಾ, ಛಾಯಾಗ್ರಹಣ : ಗೋವಿಂದ ನಿಹಲಾನಿ.

Thursday, July 2, 2009

`ಜೀನತ್ ಮಾದಕತೆ, ಸಂಜೀವ್ ಭೋಳೆತನ' ಮನೋರಂಜನ್



ಯಹಾ ಶೇರ್ ಔರ್ ಬಕ್ರಿ ಏಕ್ ಹೀ ಘಾಸ್ ಖಾತಿ ಹೈ (ಇಲ್ಲಿ ಸಿಂಹ ಹಾಗೂ ಆಡು ಒಂದೇ ಹುಲ್ಲು ತಿನ್ನುತ್ತವೆ) ಹೀಗೆ ಬಾರ್ ಮಾಲೀಕ ಧೂಪ್ ಛಾವ್(ಶಮ್ಮಿ ಕಪೂರ್) ನಾಯಕ ಶೇರಾ (ಸಂಜೀವ್ ಕುಮಾರ್)ಗೆ ಹೇಳುತ್ತಾನೆ. ಮನೋರಂಜನ್ ಚಿತ್ರದ ಸಂಪೂರ್ಣ ವ್ಯಾಖ್ಯೆ ಈ ಸಂಭಾಷಣೆಯಲ್ಲಿದೆ. ೧೯೭೬ರಲ್ಲಿ ಖ್ಯಾತ ನಟ ಶಮ್ಮಿ ಕಪೂರ್ ನಿರ್ದೇಶಿಸಿದ ಚಿತ್ರವಿದು. ಇಂಗ್ಲೀಷ್ ಚಿತ್ರ ಇರ್ಮಾ ಲಾ ಡ್ಯಾನ್ಸ್‌ನಿಂದ ಸ್ಪೂರ್ತಿ ಪಡೆದ ಚಿತ್ರವಿದು. ಅಂದ ಹಾಗೆ ಇರ್ಮಾ ಲಾ ಡ್ಯಾನ್ಸ್ ಚಿತ್ರ ಕೂಡ ನೃತ್ಯ ರೂಪಕವೊಂದರಿಂದ ಪ್ರೇರಣೆ ಪಡೆದಿದ್ದು. ಲವರ್ ಬಾಯ್ ಇಮೇಜ್ ಮೂಲಕ ಖ್ಯಾತಿ ಪಡೆದ ಶಮ್ಮಿ ಕಪೂರ್ ನಾಯಕ ನಟನ ವೇಷದಿಂದ ಹಿಂದೆ ಸರಿದ ನಂತರ ಇಂತಹ ಪಕ್ಕಾ ಹಾಸ್ಯಭರಿತ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿದರು. ಯಥಾ ಪ್ರಕಾರ ಹಿಂದಿಯ ಸಾಮಾನ್ಯ ಚಿತ್ರಗಳಂತೆ ಈ ಚಿತ್ರ ನಿರೂಪಿಸಲಾಗಿದ್ದರೂ, ವೇಶ್ಯಾವಾಟಿಕೆ ಮನರಂಜನೆ ನೀಡುವ ಕ್ಷೇತ್ರ ಹೊರತು ಮಾಂಸದ ಮಾರಾಟವಲ್ಲ ಎಂದು ನಿರೂಪಿಸಿದ ಹಿಂದಿಯ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಯೂ ಉಂಟು.
ಚಿತ್ರದ ನಾಯಕ ಶೇರಾ ಆಗಷ್ಟೇ ಪೇದೆಯಾಗಿ ಮುಂಬೈನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಮನೋರಂಜನ್ ಬೀದಿಗೆ ಕಾಲಿಡುತ್ತಾನೆ. ಅಲ್ಲಿನ ವೇಶ್ಯಾವಾಟಿಕೆ ನೋಡಿ ಲಾಡ್ಜ್‌ವೊಂದರಲ್ಲಿ ರೇಡ್ ಮಾಡಲು ಮಾಹಿತಿ ನೀಡುತ್ತಾನೆ. ದಾಳಿ ನಡೆಸಿದಾಗ ಆತನ ಹಿರಿಯ ಅಕಾರಿಯೇ ವೇಶ್ಯೆಯರೊಂದಿಗಿರುವುದನ್ನು ಕಂಡು ದಂಗಾಗುತ್ತಾನೆ. ಶೇರಾ ನೌಕರಿ ಕಳೆದುಕೊಂಡು ನಿರ್ವಸಿತನಾದಾಗ ನಾಯಕಿ ನಿಶಾ (ಜೀನತ್ ಅಮಾನ್) ಆತನಿಗೆ ಸಹಾಯ ಹಸ್ತ ಚಾಚುತ್ತಾಳೆ. ಆಕೆಯೊಂದಿಗೆ ಜೀವನ ನಡೆಸುವ ನಾಯಕನಿಗೆ ವೇಶ್ಯಾವೃತ್ತಿ ಕಂಡರೆ ಎಂಥದೋ ತಪನೆ, ಸಂಕಟ. ನಿಶಾ ವೇಶ್ಯಾವಾಟಿಕೆ ನಿಲ್ಲಿಸಬೇಕು ಎಂದು ಆಶಿಸಿ ಬಾರ್ ಮಾಲೀಕ (ಶಮ್ಮಿ ಕಪೂರ್)ನೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಾನೆ. ನವಾಬ್‌ನ ವೇಷ ಧರಿಸಿ ಪ್ರತಿ ವಾರ ನಿಶಾಳೊಂದಿಗೆ ರಾತ್ರಿ ಕಳೆದು (ಅಂದರೆ ಬರಿ ಇಸ್ಪೇಟ್ ಆಡುತ್ತ) ಆಕೆ ಕೈಗೆ ೫೦೦ ರೂ. ನೀಡುತ್ತಾನೆ. ಈ ಹಣ ಬಾರ್ ಮಾಲೀಕ ನೀಡಿದ ಸಾಲ, ಇಶಾ ತಾನು ಪಡೆದ ಹಣವನ್ನು ಶೇರಾನಿಗೆ ನೀಡುತ್ತಾಳೆ, ಆತ ಹಣವನ್ನು ಮತ್ತೆ ಬಾರ್ ಮಾಲೀಕನಿಗೆ ವಾಪಸ್ ಮಾಡುತ್ತಾನೆ, ಇದು ಪದ್ಧತಿ.
ಆದರೆ ಬಾರ್ ಮಾಲೀಕ ಶೇರಾನಿಗೆ ಸಾಲ ಪಡೆಯುವ ಬದಲು ನಾಯಿಗೆ ಕಳ್ಳರು ನುಗ್ಗಿದಾಗ ಎದುರಿಸುವ ತರಬೇತಿ ನೀಡುವ ಉದ್ಯೋಗಕ್ಕೆ ಸೇರಿಕೊಳ್ಳಲು ಸೂಚಿಸುತ್ತಾನೆ. ರಾತ್ರಿಯಿಡೀ ನಾಯಿಯಿಂದ ಕಚ್ಚಿಸಿಕೊಳ್ಳುವ ನಾಯಕ ಬೆಳಗ್ಗೆ ಮನೆಗೆ ವಾಪಸ್ಸಾಗುತ್ತಾನೆ. ಈತನ ಮೈ, ಕೈ ಮೇಲಿರುವ ಗಾಯ ನೋಡಿದ ನಿಶಾ ಈತ ಇನ್ನೊಬ್ಬ ವೇಶ್ಯೆ ಲೊಲಿಟಾ ಸಂಗ ಮಾಡಿರಬಹುದು ಎಂದು ಶಂಕಿಸುತ್ತಾಳೆ. ಕೊನೆಗೆ ನವಾಬನ ವೇಷಕ್ಕೆ ಕೊನೆಗಾಣಿಸಲು ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಹುಯಿಲೆಬ್ಬಿಸುತ್ತಾನೆ ನಾಯಕ. ಆದರೆ ಆತನನ್ನು ಕೊಂದದ್ದು ನೀನೆ ಎಂಬ ಆರೋಪ ಪೊಲೀಸರದ್ದು. ಸಮಸ್ಯೆ ಕೊನೆಗಾಣಿಸಲು ನವಾಬನ ವೇಷ ಧರಿಸಿ ನಾಯಕ ವಾಪಸ್ಸಾಗುತ್ತಾನೆ, ಶೇರಾನ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ ಆತನಿಗೆ ಮತ್ತೆ ಇಲಾಖೆಯಲ್ಲಿ ಉದ್ಯೋಗ ನೀಡುವುದರೊಂದಿಗೆ ಚಿತ್ರ ಕೊನೆಗಾಣುತ್ತದೆ.
ಇದು ವೇಶ್ಯಾವಾಟಿಕೆ ಸಂಬಂಸಿದ ಚಿತ್ರವಾದರೂ ಮೈಮಾರುವ ಲೋಕದ ಸಂಕಷ್ಟಗಳನ್ನು ಬದಿಗಿರಿಸಿ ಕೇವಲ ಮನರಂಜನೆಯನ್ನಷ್ಟೇ ಮುಖ್ಯವಾಗಿಸಿದ್ದು ವಿಶೇಷ. ಸಂಭಾಷಣೆ ಹಾಗೂ ಆರ್.ಡಿ.ಬರ್ಮನ್‌ರ ಸಂಗೀತದಿಂದಾಗಿ ಚಿತ್ರ ಮನ ಸೆಳೆಯುತ್ತದೆ, ಜತೆಗೆ ಜೀನತ್ ಭಾರಿ ಪ್ರಮಾಣದಲ್ಲಿ ಬಟ್ಟೆ ಬಿಚ್ಚಿರುವುದೂ ಹೈಲೈಟ್. ಅಂದ ಹಾಗೆ ಈ ಚಿತ್ರದ ಹಾಡಿಗಾಗಿ ಲತಾ ಮಂಗೇಶ್ಕರ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಾಂಕಿತರಾಗಿದ್ದು ವಿಶೇಷ. ಕೇವಲ ಮನರಂಜನೆಗಾಗಿ ಚಿತ್ರ ನೋಡುವವರು ಮನೋರಂಜನ್ ನೋಡಬಹುದು.

Thursday, June 25, 2009

ಸೂರ್ಯ-ಚಂದ್ರರಿಲ್ಲದೆ ಹೇಗೆ ಅಂದಿದ್ದೆ ? ಈಗ ನೀನಿಲ್ಲದೆ.....





what about sunlight ? what about raining ? ಹೀಗೆ ತನ್ನ ಹಿಸ್ಟರಿ ಆಲ್ಬಮ್‌ನಲ್ಲಿ ಪ್ರಶ್ನಿಸಿದ್ದ ಮಹಾನ್ ಕಲಾವಿದ ಮೈಕೆಲ್ ಜಾಕ್ಸನ್. ಧರೆಗುರುಳುವ ಮರಗಳು, ಜೀವಚ್ಛವವಾದ ಆನೆ, ಮಾಡು ಕಳೆದುಕೊಂಡ ಮನೆಗಳು, ನಿಸ್ಸಹಾಯಕರಾಗಿ ನಿಂತ ಬುಡಕಟ್ಟು ಜನ. ಹಾಡಿನ ಕೊನೆಗೆ ಮತ್ತೆಲ್ಲವೂ ಮೈದಳೆಯುತ್ತವೆ, ಹಸಿರು ಹಾಡಾಗುತ್ತದೆ. ತಾನು ಮಾಡುವುದು ವಿಭಿನ್ನವಾಗಿರಬೇಕು, ಜನರ ಎದೆಗೆ ತಟ್ಟುವಂತಿರಬೇಕು ಎಂಬುದು ಜಾಕ್ಸನ್ ನಿಲುವು. ಸಲಿಂಗಕಾಮ, ದಿವಾಳಿತನ, ಕೌಟುಂಬಿಕ ಸಮಸ್ಯೆಗಳು ಮೈತುಂಬ ಆವರಿಸಿಕೊಂಡಿದ್ದರೂ ಅವುಗಳನ್ನೆಲ್ಲ ಝಾಡಿಸಿ ಒದ್ದು ತನ್ನೊಳಗಿನ ಮಾನವೀಯತೆಗೆ, ಪರಿಸರ ಪ್ರೇಮಕ್ಕೆ, ಜನಾಂಗೀಯ ದ್ವೇಷದ ವಿರುದ್ಧದ ಒತ್ತಾಸೆಗೆ ಧ್ವನಿಯಾಗಿದ್ದ ಜಾಕ್ಸನ್.
ಪ್ರೇಮ, ಕಾಮ, ಮನರಂಜನೆಗೆ ಮಾತ್ರ ಸೀಮಿತವಾಗಿದ್ದ ಪಾಪ್ ಸಂಗೀತ ಲೋಕವನ್ನು ಸಾಮಾಜಿಕ ಸಮಸ್ಯೆಗಳಿಗೂ ಅನ್ವಯಿಸಿ ಗೆದ್ದದ್ದು ಜಾಕ್ಸನ್ ಸಾಧನೆ. ಗಣಿ ಕಾರ್ಮಿಕನೊಬ್ಬನ ೧೨ ಮಕ್ಕಳ ಭರ್ತಿ ಕುಟುಂಬದ ಜಾಕ್ಸನ್ ಕರಿಯ ಅಮೆರಿಕನ್ನರನ್ನು ದ್ವೇಷಿಸುವ ಅಮೆರಿಕದ ಮನೋಭಾವನೆಗೆ ಸಡ್ಡು ಹೊಡೆಯಲು ಬಿಳಿಯನಾದ. ಫುಡ್ ಟ್ಯಾಪಿಂಗ್ ನೃತ್ಯಗಳ ಮೂಲಕ ಹೊಸ ಲೋಕ ಸೃಷ್ಟಿಸಿದ. ಭಾರತದಿಂದಲೂ ಪ್ರೇರಣೆ ಪಡೆದಿದ್ದ ಜಾಕ್ಸನ್‌ನ ಹಲವು ಆಲ್ಬಮ್‌ಗಳಲ್ಲಿ ಭರತನಾಟ್ಯವನ್ನೂ ಬಳಸಿಕೊಂಡಿದ್ದು ಆತನ ಜಾಗತಿಕ ಪ್ರೇಮಕ್ಕೆ ಸಾಕ್ಷಿ. ಆತ ಗಂಡಸೋ, ಹೆಂಗಸೋ ಅಥವಾ ಮಂಗಳಮುಖಿಯೋ ಎನ್ನುವ ಪ್ರಶ್ನೆಗಳು ಎದ್ದಾಗ ಸಂಗೀತ ಪ್ರೇಮಿಗಳು ಹೇಳುತ್ತಿದ್ದ ಮಾತು ಒಂದೇ, ಅದನ್ನೇನು ಮಾಡ್ತೀರಾ ಸುಮ್ನೆ ಹಾಡು ಕೇಳಿ.
ಮಕ್ಕಳೆಂದರೆ ಭರ್ತಿ ಪ್ರೀತಿಯ ಜಾಕ್ಸನ್ ತನ್ನ ಬಹುತೇಕ ಹಾಡುಗಳಲ್ಲಿ ಮಕ್ಕಳಿಗೆ ಅಗ್ರ ಶ್ರೇಯಾಂಕ ನೀಡಿದ್ದಾನೆ. ಆತನ ಜೀವನ ಸಾಧನೆ ಬಿಂಬಿಸುವ ಆಲ್ಬಮ್ ಎಂದೆ ಖ್ಯಾತವಾದ ಹಿಸ್ಟರಿ (ಹಿಸ್-ಸ್ಟೋರಿ)ಯಲ್ಲೂ ಚಿಣ್ಣರಿಗೆ ಮಣೆ. ತನ್ನ ಮನೆ ಆವರಣದಲ್ಲಿ ಕರೆಗಟ್ಟಲೆ ಮನರಂಜನಾ ಉದ್ಯಾನವನ ನಿರ್ಮಿಸಿದ್ದ ಆತನ ಮನಸ್ಸೂ ಮಕ್ಕಳದ್ದೇ. ೨೦ ವರ್ಷಗಳ ಹಿಂದೆ ನೃತ್ಯ ಕಲಿಯುವ, ಕಲಿತ ಹಾಗೂ ನುರಿತ ನೃತ್ಯ ಪಟುಗಳಿಗೂ ಜಾಕ್ಸನ್ ರೋಲ್ ಮಾಡೆಲ್. ಹಾವಿನಂತೆ ಸರಸವಾಡುವ ಆತನ ಕಾಲುಗಳ ನರ್ತನ, ಆಂಗಿಕ ಭಾಷೆ, ಸಂಗೀತ ಹಾಗೂ ಗೀತೆಯ ಪದ ಜೋಡಣೆ ಎಂಥವರನ್ನೂ ಮೋಡಿ ಮಾಡಿತ್ತು. ನಾನು ಸ್ನೇಹಿತರೊಂದಿಗೆ ನೃತ್ಯ ಪ್ರದರ್ಶನಗಳಲ್ಲಿ ಭಾಗವಹಿಸುವ ಮುನ್ನ ದೇವರು ಹಾಗೂ ಜ್ಯಾಕ್ಸನ್‌ನನ್ನು ನೆನಪಿಸಿಕೊಂಡೇ ನೃತ್ಯಕ್ಕಿಳಿಯುತ್ತಿದ್ದೆವು. ದೊಡ್ಡ ನಗರಗಳಲ್ಲಿ ದೊರಕುತ್ತಿದ್ದ ಆತನ ಕ್ಯಾಸೆಟ್‌ಗಳನ್ನು ತಂದು ಹಾಡು ಕೇಳಿ, ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಆತನ ನೃತ್ಯ ಕಾರ್ಯಕ್ರಮದ ಝಲಕ್ ನೋಡಿ ನೃತ್ಯ ಕಲಿತ ನನ್ನಂಥ ಕೋಟ್ಯಂತರ ಜನ ಜಗದಲ್ಲಿದ್ದಾರೆ.
ಜಾಕ್ಸನ್‌ನ ಮಾಯೆ ಬಾಲಿವುಡ್‌ನ್ನೂ ಬಿಟ್ಟಿಲ್ಲ. ಖ್ಯಾತ ನೃತ್ಯ ಪಟು ಪ್ರಭುದೇವ ತಮ್ಮ ಕಾದಲನ್ ಚಿತ್ರಕ್ಕೆ ಜಾಕ್ಸನ್‌ರನ್ನು ಕರೆತರಬೇಕೆಂದು ಬಯಸಿದ್ದರು. ಆದರೆ ಮೈಕೆಲ್‌ನ ಬಿಡುವಿಲ್ಲದ ಕಾರ್ಯಕ್ರಮಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಹಿಂದಿ ಚಿತ್ರರಂಗದಲ್ಲಿ ನೃತ್ಯದ ಮೂಲಕ ಹೊಸ ಭಾಷೆ ಬರೆದ ಜಾವೇದ್ ಜಾಫ್ರಿ, ರವಿ ಬೆಹ್ಲ್, ಮಿಥುನ್ ಚಕ್ರವರ್ತಿ ಕೂಡ ಜಾಕ್ಸನ್ ಪ್ರೇರಣೆ ಪಡೆದವರು. ನೋಡಿ ಅವನು ಜಾಕ್ಸನ್ ಹಾಗೆ ನರ್ತಿಸುತ್ತಾನೆ ಎಂದು ಹೊಗಳಿಸಿಕೊಳ್ಳುವುದೂ ಕೂಡ ಆ ಕಾಲದ ಮಟ್ಟಿಗಿನ ಹೆಮ್ಮೆಯ ಮಾತು.
೧೦ ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಜಾಕ್ಸನ್ ನೃತ್ಯ ಕಾರ್ಯಕ್ರಮಕ್ಕೆ ಭರ್ತಿ ೭೫ ಸಾವಿರ ಜನ ಬಂದಿದ್ದರು. ೨೦ ಸಾವಿರ ರೂ.ಬೆಲೆಯ ಟಿಕೆಟ್ ಖರೀದಿಸಿ ಅವರೆಲ್ಲ ಜಾಕ್ಸನ್ ಮೋಡಿಗೆ ಬೆರಗಾದರು, ಹಾಡಾದರು. ಕಾರ್ಯಕ್ರಮಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾಕ್ಸನ್ ಹಾಡಿ, ನರ್ತಿಸಬೇಕಿರಲಿಲ್ಲ. ಕೇವಲ ಆತನ ಮುಖ, ನಗು, ಮಾತು ಇಷ್ಟೇ ಸಾಕಿತ್ತು ಅಭಿಮಾನಿಗಳಿಗೆ. ಜಗತ್ತಿನ ನಾನಾ ಥರಹದ ವಾದ್ಯಗಳು, ಕಲಾವಿದರು, ಸಂಗೀತವನ್ನು ಮೇಳೈಸಿ ಹೊಸ ಗಾನ ಹೊಸೆಯುತ್ತಿದ್ದ ಈ ಮಾಂತ್ರಿಕ. ಜು.೧೩ ರಿಂದ ಲೈವ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದ ಜಾಕ್ಸನ್ ಇಂದು ಬೆಳಗ್ಗೆ ಮರೆಯಾದ. ಟಿವಿಯಲ್ಲಿ ಆತನ ನಿಧನದ ಸುದ್ದಿ ನೋಡಿದ ಅಮ್ಮ ಹೇಳಿದ್ದು ಆತ ಮಕ್ಕಳೊಂದಿಗೆ ಡ್ಯಾನ್ಸ್ ಮಾಡುವ ಹಾಡು ಚೆನ್ನಾಗಿದೆಯಲ್ಲ ?. ಇಂಗ್ಲೀಷ್ ಹಾಡುಗಳ ಬಗ್ಗೆ ಮಾಹಿತಿಯಿರದ, ಕೇವಲ ಸಂಗೀತದಿಂದ ಹಾಡು ಅರ್ಥೈಸುವ ಅಮ್ಮನಿಗೂ ಜಾಕ್ಸನ್ ಇಷ್ಟವಾಗಿದ್ದನೆಂದರೆ ಆತನ ಜನಪ್ರಿಯತೆಗೆ ಮತ್ತೇನು ಉದಾಹರಣೆ ಬೇಕು ?
ಜಾಕ್ಸನ್ ನಿಶ್ಚಲವಾಗಿದ್ದಾನೆ, ಆದರೆ ಆತನ ಸಂಗೀತದ ನಾದ ಹೊಸ ಪೀಳಿಗೆಯಲ್ಲಿದೆ. ಇದೂ ತಲೆತಲಾಂತರದವರೆಗೆ ಮುನ್ನಡೆಯಲಿದೆ. ಆ ಮಹಾನ್ ಸಂಗೀತಕಾರನ ಶೋಧನೆ, ಗಾನ, ನೃತ್ಯ ಪ್ರಾಚ್ಯಶಿಲ್ಪಗಳಂತೆ ಅಮರವಾಗಲಿದೆ. ಅಂದ ಹಾಗೆ ಜಾಕ್ಸನ್ ನೃತ್ಯ ನೋಡುವ ಬಯಕೆ ದೇವರಿಗೂ ಇದ್ದೀತು. ಅದಕ್ಕೆ ೫೦ನೇ ವರ್ಷಕ್ಕೆ ಆತನನ್ನು ಕರೆಸಿಕೊಂಡಿದ್ದಾನೆ. ದೇವರೂ ಜಾಕ್ಸನ್ ಅಭಿಮಾನಿಯೆ ?.