Saturday, May 9, 2009

ಹಂ ಸಾಥ್ ಸಾಥ್ ಹೈ


ಅವ ಸುಬೋಧ್ ಕೊಲ್ಕತ್ತಾದ ಖ್ಯಾತ ಫುಟ್ಬಾಲ್ ತಂಡ ಮೋಹನ್ ಬಗಾನ್ನ ತರಬೇತುದಾರ. ಪಂದ್ಯದ ಸಂದರ್ಭದಲ್ಲಿ ಹೊಡೆದಾಟ ನಡೆದು ಕ್ರೀಡಾಂಗಣಕ್ಕೆ ಪ್ರೇಕ್ಷಕರು ಬೆಂಕಿ ಹಚ್ಚುತ್ತಾರೆ, ಆತ ಮನೆಗೆ ಮರಳುತ್ತಾನೆ. ರಾಮಾನುಜನ್ ಹಿಂದಿ ಭಾಷೆ ಪ್ರಚಾರಕ. ನೆಲೆಸಿರುವುದು ತಮಿಳುನಾಡಿನ ಚೆನ್ನೈನಲ್ಲಿ. ಹಿಂದಿ ಭಾಷೆ ಪ್ರತಿಭಟನಾಕಾರರು ಆತನ ಮನೆ ಎದುರು ಹಿಂದಿ ಭಾಷೆ ವಿರೋಸಿ ಪ್ರತಿಕೃತಿ ದಹಿಸುತ್ತಾರೆ. ಮಗನ ಕೈಲಿದ್ದ ಹಿಂದಿ ಪುಸ್ತಕ ಕಿತ್ತೆಸೆಯುವ ಆತ , ಹಿಂದಿ ಭಾಷೆಯಲ್ಲಿದ್ದ ನೇಮ್ ಪ್ಲೇಟ್ ಕೂಡ ಕಿತ್ತು ಹಾಕುತ್ತಾನೆ. ಮಹಾರಾಷ್ಟ್ರದ ರತ್ನಾಗಿರಿಯಲ್ಲಿರುವ ತುಕಾರಾಮ್ ಝಾಲಾಚಾ ಪಾಯಿಜೆ ಚಳವಳಿ ನೇತಾರ. ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೋರಾಟದ ನೇತೃತ್ವ ಈತನದ್ದು. ಉತ್ತರ ಪ್ರದೇಶದ ಅನ್ವರ್ ಉರ್ದು ಪಂಡಿತ. ಉರ್ದು ಭಾಷೆ ವಿರೋಸಿದ ಕೆಲವರು ಆತನ ಮನೆಗೆ ಕೊಳ್ಳಿಯಿಡುತ್ತಾರೆ, ಮನೆ ಭಸ್ಮವಾಗುತ್ತದೆ.
ಪಂಜಾಬ್ನಲ್ಲಿರುವ ಉತ್ಪಲ್ ಮನೆಗೆ ಬಂದಾಗ ರೆಡಿಯೋದಲ್ಲಿ ಪಂಜಾಬ್ ವಿಭಜನೆಯ ಸುದ್ದಿ ಕೇಳುತ್ತಾನೆ, ಕ್ಷಣ ಕಾಲ ಅರನಾಗುತ್ತಾನೆ. ಬನಾರಸ್ನ ಶರ್ಮಾ ಸಂಸ್ಕೃತ ಪಂಡಿತ, ಬಿಹಾರದ ಮತ್ತೊಬ್ಬ ಯುವಕ ಕೃಷಿಕ. ಇವರೆಲ್ಲರಿಗೂ ಒಂದು ಟೆಲಿಗ್ರಾಂ ಬರುತ್ತದೆ ಗೋವಾದ ಮರಿಯಾ ಫರ್ನಾಂಡಿಸ್ಳಿಂದ...ನಾನು ಮರಣ ಶಯ್ಯೆಯಲ್ಲಿದ್ದೇನೆ, ಎಲ್ಲಿದ್ದರೂ ಬೇಗ ಬನ್ನಿ.
ನೆನಪಿನ ರೀಲು ೬ ವರ್ಷಗಳ ಹಿಂದಿನ ಫ್ಲ್ಯಾಶ್ಬ್ಯಾಕ್ಗೆ ಬಿಚ್ಚಿಕೊಳ್ಳುತ್ತದೆ....
ಅದು ಬೆಳಗಾವಿ, ಪೋರ್ಚುಗೀಸರ ವಶದಲ್ಲಿರುವ ಗೋವಾ ವಿಮೋಚನೆ ಹೋರಾಟಕ್ಕೆ ರಂಗಭೂಮಿ. ಎಲ್ಲೆಡೆಯಿಂದ ಅಲ್ಲಿ ಆಗಮಿಸುವ ಈ ಆರು ಯುವಕರು ಹೋರಾಟಕ್ಕಾಗಿ ಗೋವಾಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಮಾರ್ಗದರ್ಶಿ, ಸಾಥಿಯಾಗುವುದು ಮರಿಯಾ ಫರ್ನಾಂಡಿಸ್. ಪೋರ್ಚುಗೀಸರ ಕ್ರೌರ್ಯ ಮರಿಯಾಳ ತಂದೆ, ತಾಯಿ, ಸಹೋದರ ಹಾಗೂ ಆಕೆಯ ಶೀಲ ಕಿತ್ತುಕೊಂಡಿರುತ್ತದೆ. ಅದಕ್ಕಾಗಿ ಗೋವಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವುದು ಅವಳ ಹೆಬ್ಬಯಕೆ. ಈ ಆರು ಯುವಕರೊಂದಿಗೆ ಆಕೆಯೂ ಸೇರಿ ಮುನ್ನಡೆಯುವ ಗುಂಪಿನ ಹೆಸರು `ಸಾತ್ ಹಿಂದುಸ್ತಾನಿ`.
ಈ ತಂಡ ಮದ್ದು, ಗುಂಡಿನೊಂದಿಗೆ ಹೋರಾಟ ನಡೆಸುವುದಿಲ್ಲ. ಪೋರ್ಚುಗೀಸರ ಅಕಾರ ಕೇಂದ್ರಗಳ ಮೇಲೆ ಭಾರತ ಧ್ವಜ ಹಾರಿಸಿ ಸ್ವಾತಂತ್ರ್ಯಕ್ಕೆ ಪ್ರೇರೆಪಿಸುವುದು ತಂಡದ ಮುಖ್ಯ ಅಜೆಂಡಾ. ಹೀಗೆ ದೇಶದ ಹೆಸರಿನಲ್ಲಿ ಒಂದಾಗುವ ತಂಡ ಅಸ್ಪ್ರಶ್ಯತೆ, ಜಾತಿವಾದ, ಧರ್ಮಗಳ ನಡುವಿನ ಭಿನ್ನತೆಯನ್ನೂ ಕಾಣುತ್ತದೆ. ಅದೆಲ್ಲವನ್ನೂ ಮೆಟ್ಟಿ ನಿಂತು ಗೋವಾದ ನಾನಾ ಕಡೆ ಗುಪ್ತವಾಗಿ ಭಾರತ ಧ್ವಜ ಹಾರಿಸುತ್ತದೆ. ಈ ತಂಡದ ಜನಪ್ರಿಯತೆ ಹೆಚ್ಚಿದಂತೆ ಪೋರ್ಚುಗೀಸರು ಇವರಿಗಾಗಿ ತಡಕಾಡುತ್ತಾರೆ.
ಜೀವ ಕಳೆದುಕೊಂಡ ಊರುಗಳು, ಪೋರ್ಚುಗೀಸರ ಒದೆ ತಿಂದ ಜನರ ಮುಖಗಳು, ಅಪರಿಚಿತರು ಬಂದರೆ ಹೆದರಿ ಹೋಗುವ ಅವಸ್ಥೆ ಹೀಗೆ ಆಗಿನ ಗೋವಾದ ಚಿತ್ರಣ ಚಿತ್ರದಲ್ಲಿ ಮಧ್ಯೆ, ಮಧ್ಯೆ ಹಾಯ್ದು ಹೋಗುತ್ತದೆ. ಅದೊಂದು ದಿನ ಊಟ ತರಲು ಹೋದ ತುಕಾರಾಮ್ ಗೋವಾ ಫೆನ್ನಿ ಸವಿಯುತ್ತಾನೆ. ಅಮಲಿನಲ್ಲಿ ತನ್ನ ಚಪ್ಪಲಿ ಮರೆತು ಬರುತ್ತಾನೆ, ಪೊಲೀಸರು ಹುಡುಕಾಟ ಪ್ರಾರಂಭಿಸುತ್ತಾರೆ. ಉಳಿದವರನ್ನೆಲ್ಲ ದಡ ಸೇರಿಸುವ ಅನ್ವರ್ ಮಾತ್ರ ಬಂತನಾಗುತ್ತಾನೆ.
ಮಾರಿಯಾಳ ಜನ್ಮದಿನದಂದು ಉಡುಗೊರೆಯಾಗಿ ಪಣಜಿಯ ವೃತ್ತದಲ್ಲಿ ದೇಶ ಧ್ವಜ ಹಾರಿಸಲು ಉಳಿದ ಐವರು ಪಣ ತೊಡುತ್ತಾರೆ. ಧ್ವಜ ಹಾರಿಸುತ್ತಾರೆ, ಆದರೆ ಬಂತರಾಗುತ್ತಾರೆ. ಅಷ್ಟೂ ಜನರನ್ನು ಹಿಂಸಿಸಿ ಬಾಯಿ ಬಿಡಿಸಲು ಪೊಲೀಸರು ಹರ ಸಾಹಸ ಪಡುತ್ತಾರೆ. ಆದರೆ ದೇಶಭಕ್ತಿ ರಹಸ್ಯ ಹೊರಡಿಸುವುದಿಲ್ಲ. ಕೊನೆಗೆ ಐವರೂ ಬಿಡುಗಡೆಯಾಗುತ್ತಾರೆ, ಆಗ ಮರಿಯಾಳಿಗೆ ಜೈಲು ಶಿಕ್ಷೆಯಾದ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ತಮ್ಮ ಊರಿಗೆ ವಾಪಸ್ಸಾಗುತ್ತಾರೆ. ಕೊನೆಯ ದೃಶ್ಯದಲ್ಲಿ ಮರಿಯಾ ಭೇಟಿಗೆ ಎಲ್ಲರೂ ಹೊರಟು ಬರುತ್ತಾರೆ, ಆದರೆ ಅಷ್ಟರಲ್ಲಿ ಮರಿಯಾ ಹೊರಟು ಹೋಗುತ್ತಾಳೆ, ಶಾಶ್ವತವಾಗಿ ಜೀವನದಿಂದ.
ಖ್ವಾಜಾ ಅಹ್ಮದ್ ಅಬ್ಬಾಸ್ ಚಿತ್ರದ ನಿರ್ದೇಶಕರು, ಟಿ.ಪಿ.ಕೌಶಿಕ್ ಸಂಗೀತವಿದೆ, ಖ್ಯಾತ ಸಾಹಿತಿ ಕೈಫಿ ಆಜ್ಮಿ ಸಾಹಿತ್ಯ ರಚಿಸಿದ್ದಾರೆ. ಜಲಾಲ್ ಆಗಾ, ಎ.ಕೆ.ಹಾನಗಲ್, ಉತ್ಪಲ್ ದತ್ ರಂತಹ ಪ್ರತಿಭಾವಂತರು ನಟಿಸಿದ್ದಾರೆ. ೧೯೬೯ರಲ್ಲಿ ಬಿಡುಗಡೆಯಾದ ಈ ಚಿತ್ರ ೧೯೭೦ರಲ್ಲಿ ನರ್ಗಿಸ್ ದತ್ ಪ್ರಶಸ್ತಿ ಪಡೆದಿದೆ. ಅಮಿತಾಬ್ ಈ ಚಿತ್ರದಿಂದ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ನಟ ಪ್ರಶಸ್ತಿಯೂ ಅವರದ್ದಾಯಿತು. ಈ ಚಿತ್ರ ಬೆಳಗಾವಿಯಲ್ಲೂ ಚಿತ್ರೀಕರಣಗೊಂಡಿದ್ದು, ದೂದ್ ಸಾಗರ್ ಜಲಪಾತದ ಕಣಿವೆಯಲ್ಲೂ ಚಿತ್ರೀಕರಣ ನಡೆಸಿರುವುದು ವಿಶೇಷ. ಚಿತ್ರದ ಸಿಡಿ ಟಿ-ಸೀರೀಸ್ನಲ್ಲಿ ಲಭ್ಯ.