ಯಹಾ ಶೇರ್ ಔರ್ ಬಕ್ರಿ ಏಕ್ ಹೀ ಘಾಸ್ ಖಾತಿ ಹೈ (ಇಲ್ಲಿ ಸಿಂಹ ಹಾಗೂ ಆಡು ಒಂದೇ ಹುಲ್ಲು ತಿನ್ನುತ್ತವೆ) ಹೀಗೆ ಬಾರ್ ಮಾಲೀಕ ಧೂಪ್ ಛಾವ್(ಶಮ್ಮಿ ಕಪೂರ್) ನಾಯಕ ಶೇರಾ (ಸಂಜೀವ್ ಕುಮಾರ್)ಗೆ ಹೇಳುತ್ತಾನೆ. ಮನೋರಂಜನ್ ಚಿತ್ರದ ಸಂಪೂರ್ಣ ವ್ಯಾಖ್ಯೆ ಈ ಸಂಭಾಷಣೆಯಲ್ಲಿದೆ. ೧೯೭೬ರಲ್ಲಿ ಖ್ಯಾತ ನಟ ಶಮ್ಮಿ ಕಪೂರ್ ನಿರ್ದೇಶಿಸಿದ ಚಿತ್ರವಿದು. ಇಂಗ್ಲೀಷ್ ಚಿತ್ರ ಇರ್ಮಾ ಲಾ ಡ್ಯಾನ್ಸ್ನಿಂದ ಸ್ಪೂರ್ತಿ ಪಡೆದ ಚಿತ್ರವಿದು. ಅಂದ ಹಾಗೆ ಇರ್ಮಾ ಲಾ ಡ್ಯಾನ್ಸ್ ಚಿತ್ರ ಕೂಡ ನೃತ್ಯ ರೂಪಕವೊಂದರಿಂದ ಪ್ರೇರಣೆ ಪಡೆದಿದ್ದು. ಲವರ್ ಬಾಯ್ ಇಮೇಜ್ ಮೂಲಕ ಖ್ಯಾತಿ ಪಡೆದ ಶಮ್ಮಿ ಕಪೂರ್ ನಾಯಕ ನಟನ ವೇಷದಿಂದ ಹಿಂದೆ ಸರಿದ ನಂತರ ಇಂತಹ ಪಕ್ಕಾ ಹಾಸ್ಯಭರಿತ ಚಿತ್ರ ನಿರ್ದೇಶನಕ್ಕೆ ಮನಸ್ಸು ಮಾಡಿದರು. ಯಥಾ ಪ್ರಕಾರ ಹಿಂದಿಯ ಸಾಮಾನ್ಯ ಚಿತ್ರಗಳಂತೆ ಈ ಚಿತ್ರ ನಿರೂಪಿಸಲಾಗಿದ್ದರೂ, ವೇಶ್ಯಾವಾಟಿಕೆ ಮನರಂಜನೆ ನೀಡುವ ಕ್ಷೇತ್ರ ಹೊರತು ಮಾಂಸದ ಮಾರಾಟವಲ್ಲ ಎಂದು ನಿರೂಪಿಸಿದ ಹಿಂದಿಯ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಯೂ ಉಂಟು.
ಚಿತ್ರದ ನಾಯಕ ಶೇರಾ ಆಗಷ್ಟೇ ಪೇದೆಯಾಗಿ ಮುಂಬೈನ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಮನೋರಂಜನ್ ಬೀದಿಗೆ ಕಾಲಿಡುತ್ತಾನೆ. ಅಲ್ಲಿನ ವೇಶ್ಯಾವಾಟಿಕೆ ನೋಡಿ ಲಾಡ್ಜ್ವೊಂದರಲ್ಲಿ ರೇಡ್ ಮಾಡಲು ಮಾಹಿತಿ ನೀಡುತ್ತಾನೆ. ದಾಳಿ ನಡೆಸಿದಾಗ ಆತನ ಹಿರಿಯ ಅಕಾರಿಯೇ ವೇಶ್ಯೆಯರೊಂದಿಗಿರುವುದನ್ನು ಕಂಡು ದಂಗಾಗುತ್ತಾನೆ. ಶೇರಾ ನೌಕರಿ ಕಳೆದುಕೊಂಡು ನಿರ್ವಸಿತನಾದಾಗ ನಾಯಕಿ ನಿಶಾ (ಜೀನತ್ ಅಮಾನ್) ಆತನಿಗೆ ಸಹಾಯ ಹಸ್ತ ಚಾಚುತ್ತಾಳೆ. ಆಕೆಯೊಂದಿಗೆ ಜೀವನ ನಡೆಸುವ ನಾಯಕನಿಗೆ ವೇಶ್ಯಾವೃತ್ತಿ ಕಂಡರೆ ಎಂಥದೋ ತಪನೆ, ಸಂಕಟ. ನಿಶಾ ವೇಶ್ಯಾವಾಟಿಕೆ ನಿಲ್ಲಿಸಬೇಕು ಎಂದು ಆಶಿಸಿ ಬಾರ್ ಮಾಲೀಕ (ಶಮ್ಮಿ ಕಪೂರ್)ನೊಂದಿಗೆ ಯೋಜನೆಯೊಂದನ್ನು ರೂಪಿಸುತ್ತಾನೆ. ನವಾಬ್ನ ವೇಷ ಧರಿಸಿ ಪ್ರತಿ ವಾರ ನಿಶಾಳೊಂದಿಗೆ ರಾತ್ರಿ ಕಳೆದು (ಅಂದರೆ ಬರಿ ಇಸ್ಪೇಟ್ ಆಡುತ್ತ) ಆಕೆ ಕೈಗೆ ೫೦೦ ರೂ. ನೀಡುತ್ತಾನೆ. ಈ ಹಣ ಬಾರ್ ಮಾಲೀಕ ನೀಡಿದ ಸಾಲ, ಇಶಾ ತಾನು ಪಡೆದ ಹಣವನ್ನು ಶೇರಾನಿಗೆ ನೀಡುತ್ತಾಳೆ, ಆತ ಹಣವನ್ನು ಮತ್ತೆ ಬಾರ್ ಮಾಲೀಕನಿಗೆ ವಾಪಸ್ ಮಾಡುತ್ತಾನೆ, ಇದು ಪದ್ಧತಿ.
ಆದರೆ ಬಾರ್ ಮಾಲೀಕ ಶೇರಾನಿಗೆ ಸಾಲ ಪಡೆಯುವ ಬದಲು ನಾಯಿಗೆ ಕಳ್ಳರು ನುಗ್ಗಿದಾಗ ಎದುರಿಸುವ ತರಬೇತಿ ನೀಡುವ ಉದ್ಯೋಗಕ್ಕೆ ಸೇರಿಕೊಳ್ಳಲು ಸೂಚಿಸುತ್ತಾನೆ. ರಾತ್ರಿಯಿಡೀ ನಾಯಿಯಿಂದ ಕಚ್ಚಿಸಿಕೊಳ್ಳುವ ನಾಯಕ ಬೆಳಗ್ಗೆ ಮನೆಗೆ ವಾಪಸ್ಸಾಗುತ್ತಾನೆ. ಈತನ ಮೈ, ಕೈ ಮೇಲಿರುವ ಗಾಯ ನೋಡಿದ ನಿಶಾ ಈತ ಇನ್ನೊಬ್ಬ ವೇಶ್ಯೆ ಲೊಲಿಟಾ ಸಂಗ ಮಾಡಿರಬಹುದು ಎಂದು ಶಂಕಿಸುತ್ತಾಳೆ. ಕೊನೆಗೆ ನವಾಬನ ವೇಷಕ್ಕೆ ಕೊನೆಗಾಣಿಸಲು ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಹುಯಿಲೆಬ್ಬಿಸುತ್ತಾನೆ ನಾಯಕ. ಆದರೆ ಆತನನ್ನು ಕೊಂದದ್ದು ನೀನೆ ಎಂಬ ಆರೋಪ ಪೊಲೀಸರದ್ದು. ಸಮಸ್ಯೆ ಕೊನೆಗಾಣಿಸಲು ನವಾಬನ ವೇಷ ಧರಿಸಿ ನಾಯಕ ವಾಪಸ್ಸಾಗುತ್ತಾನೆ, ಶೇರಾನ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ ಆತನಿಗೆ ಮತ್ತೆ ಇಲಾಖೆಯಲ್ಲಿ ಉದ್ಯೋಗ ನೀಡುವುದರೊಂದಿಗೆ ಚಿತ್ರ ಕೊನೆಗಾಣುತ್ತದೆ.
ಇದು ವೇಶ್ಯಾವಾಟಿಕೆ ಸಂಬಂಸಿದ ಚಿತ್ರವಾದರೂ ಮೈಮಾರುವ ಲೋಕದ ಸಂಕಷ್ಟಗಳನ್ನು ಬದಿಗಿರಿಸಿ ಕೇವಲ ಮನರಂಜನೆಯನ್ನಷ್ಟೇ ಮುಖ್ಯವಾಗಿಸಿದ್ದು ವಿಶೇಷ. ಸಂಭಾಷಣೆ ಹಾಗೂ ಆರ್.ಡಿ.ಬರ್ಮನ್ರ ಸಂಗೀತದಿಂದಾಗಿ ಚಿತ್ರ ಮನ ಸೆಳೆಯುತ್ತದೆ, ಜತೆಗೆ ಜೀನತ್ ಭಾರಿ ಪ್ರಮಾಣದಲ್ಲಿ ಬಟ್ಟೆ ಬಿಚ್ಚಿರುವುದೂ ಹೈಲೈಟ್. ಅಂದ ಹಾಗೆ ಈ ಚಿತ್ರದ ಹಾಡಿಗಾಗಿ ಲತಾ ಮಂಗೇಶ್ಕರ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಾಂಕಿತರಾಗಿದ್ದು ವಿಶೇಷ. ಕೇವಲ ಮನರಂಜನೆಗಾಗಿ ಚಿತ್ರ ನೋಡುವವರು ಮನೋರಂಜನ್ ನೋಡಬಹುದು.
3 comments:
ಈ ಚಿತ್ರಕ್ಕೆ ಆರ್ ಡಿ ಸಂಗೀತ ಇತ್ತು.ಆಶಾ ಹಾಡಿದ ಹಾಡು "ಸೋಯೆ ಹೈ ಮೇರೆ ಪಿಯರವಾ" ಸೂಪರ್.
ಹಾಗೂ ಉರ್ದು ವಿರುದ್ಧ ಶಬ್ದ "ಗೋಯಾಕೆ ಚುನಾಂಚೆ" ಉಪಯೋಗಿಸಿದ ಹಾಡು ಚೆನ್ನಾಗಿತ್ತು.
houdu umesh avare goyanke junache nangoo istavda hadu, rd da sangita yavagaloo adbhuta, prtikriyisiddakke dhanyavada...
vishnu nodi chennagide, blog odiddakke thanks
Post a Comment