ಸ್ಥಳ : ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದ ಮಿನಿ ಚಿತ್ರಮಂದಿರ, ಕುಪ್ಪಳ್ಳಿ.
ವೇಳೆ : ಬೆಳಗಿನ ೯ ಗಂಟೆ.
ವಿಭಿನ್ನ ನೆಲೆಯ ಚಿತ್ರಗಳ ವೀಕ್ಷಣೆಗೆ ಮಂಗಳೂರು, ಬೆಂಗಳೂರು, ಮೈಸೂರುಗಳಿಂದ ಬಂದ ಚಿತ್ರಪ್ರೇಮಿಗಳದ್ದೆಲ್ಲ ಸಂಭ್ರಮ, ಸಡಗರ. ಇದಕ್ಕೆಲ್ಲ ಕಾರಣವಾಗಿದ್ದು ಸಾಂಗತ್ಯ ತಂಡದ ಎರಡನೇ ಚಿತ್ರೋತ್ಸವ. ಜನೆವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವದಲ್ಲಿ ರಮ್ಯ ಚಿತ್ರಗಳನ್ನು ನೋಡಿದ್ದ ಚಿತ್ರಾಸಕ್ತರಿಗೆ ಈ ಬಾರಿ ನಾಲ್ಕು ಹಂತಗಳಲ್ಲಿ ಚಿತ್ರ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ತವಕ.
ಷೇಕ್ಸ್‌ಪಿಯರನ್ ಮ್ಯಾಕ್‌ಬೆತ್ ನಾಟಕ ಅಧರಿಸಿದ ಪೊಲೊನ್‌ಸ್ಕಿ ನಿರ್ದೇಶನದ ಮ್ಯಾಕ್‌ಬೆತ್ ಹಾಗೂ ಅಕಿರಾ ಕುರೊಸೊವಾ ನಿರ್ದೇಶಿಸಿದ ಥ್ರಾನ್ ಆಫ್ ಬ್ಲಡ್. ಎರಡೂ ಚಿತ್ರಗಳು ವಿಭಿನ್ನ ನೆಲೆಯವು ಒಂದು ಪಾಶ್ಯಾತ್ಯದ ಕತಾ ಹಂದರ ಹೊಂದಿದ್ದರೆ ಇನ್ನೊಂದು ಏಶಿಯಾ ಪರಂಪರೆಯಲ್ಲಿ ಮ್ಯಾಕ್‌ಬೆತ್‌ನ ಕಥೆಯುಳ್ಳದ್ದು. ಮ್ಯಾಕ್ ಬೆತ್‌ನ ಪಾಪ ಪ್ರಜ್ಞೆ, ಅಕಾರ ಲಾಲಸೆಯನ್ನು ದೃಶ್ಯ ಮಾಧ್ಯಮದಲ್ಲಿ ತೆರೆದಿಟ್ಟ ಚಿತ್ರಗಳನ್ನು ನೋಡಿದ ಶಿಬಿರಾರ್ಥಿಗಳಿಗೆ ಹೊಸ ಅನುಭವ. ನಂತರ ಈ ಚಿತ್ರಗಳ ಬಗ್ಗೆ ನಡೆದ ಎರಡು ಗಂಟೆಯ ಚರ್ಚೆಯಲ್ಲಿ ಎರಡೂ ಚಿತ್ರಗಳ ನಾನಾ ಆಯಾಮಗಳ ಬಗ್ಗೆ ವಿಶ್ವ ದರ್ಶನವಾಯಿತು.
ಭಾರತೀ ಶಂಕರ್ ನಿರ್ದೇಶನದ ಕಾರಂತಜ್ಜನಿಗೊಂದು ಪತ್ರ ನೋಡಿದವರ ಮನ ಸೆಳೆಯಿತು, ಚಿತ್ರದ ಕೊನೆಯ ದೃಶ್ಯ ಎಲ್ಲರಲ್ಲೂ ಚಿಂತನೆಗೆ ಕಾರಣವಾಯಿತು. ಕಡಲ್ಕೊರೆತದಂತಹ ಸಮಸ್ಯೆಯೊಂದಿಗೆ ಸಮಾಜದ ನಾನಾ ಸ್ತರಗಳ ಸಮಸ್ಯೆಗಳನ್ನು ಎದುರಿಟ್ಟ ಚಿತ್ರಕ್ಕೆ ಭರ್ತಿ ಚಪ್ಪಾಳೆ, ಮೆಚ್ಚುಗೆ. ಹಿಟ್ಲರ್ ತನ್ನ ಕಾಲದಲ್ಲಿ ನಡೆಸಿದ ಪಾಶವೀ ಕೃತ್ಯದ ಬಗ್ಗೆ ಬಾಲಕನೊಬ್ಬನ ದೃಷ್ಟಿಯನ್ನು ಬಿಂಬಿಸಿದ್ದು ದ ಬಾಯ್ ವಿತ್ ಸ್ಟ್ರಿಪಡ್ ಪೈಜಾಮಾ. ಚಿತ್ರದಲ್ಲಿ ಮನ ಕಲಕುವ ದೃಶ್ಯಗಳು ಚರ್ಚೆಯಲ್ಲಿ ಮೆಚ್ಚುಗೆಗೆ ಪಾತ್ರವಾದವು. ಕಾರ್ತಿಕ್ ಪರಾಡ್ಕರ್‌ರ ನಾಗ ಮಂಡಲ ಸಾಕ್ಷ್ಯಚಿತ್ರ, ಘೋಸ್ಟ್ ಇನ್ ದಿ ಡಾರ್ಕ್‌ನೆಸ್ ಚಿತ್ರಗಳನ್ನು ವೀಕ್ಷಿಸಿದ ಶಿಬಿರಾರ್ಥಿಗಳು ಭೇಷ್ ಎಂದರು.
ಈ ಬಾರಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡು ಮಾರ್ಗದರ್ಶನ ನೀಡಿದ್ದು ಖ್ಯಾತ ನಿರ್ದೇಶಕ ಗುರುಪ್ರಸಾದ್. ನಿರ್ದೇಶಕನಿಗೆ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ, ವ್ಯಾಮೋಹವಿರಬೇಕು ಆಗ ಮಾತ್ರ ಒಳ್ಳೆಯ ಚಿತ್ರ ನಿರ್ಮಿಸಲು ಸಾಧ್ಯ ಎಂದ ಅವರು ಚಿತ್ರ ನಿರ್ಮಾಣದ ಬಗ್ಗೆ ಹಲವು ಕುತೂಹಲದ ಸಂಗತಿಗಳನ್ನು ತೆರೆದಿಟ್ಟರು. ಸಾಂಗತ್ಯದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ಆಯೋಜಿಸಿದರೆ ಸಹಕಾರ ನೀಡಲು ಸಾಧ್ಯ ಎಂದರು.
ಎರಡು ದಿನಗಳ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರಗಳೊಂದಿಗೆ ಮಲೆನಾಡಿನ ಅದ್ಭುತ ಉಪಹಾರ, ಊಟವಿತ್ತು. ಮತ್ತೊಂದು ಚಿತ್ರೋತ್ಸವಕ್ಕೆ ಬಂದೇ ಬರುತ್ತೇವೆ ಎನ್ನುತ್ತ ಎಲ್ಲರೂ ಚಿತ್ರಗಳ ಸವಿ ನೆನಪಿನ ರೀಲುಗಳನ್ನು ಮನದಲ್ಲಿ ಜೋಪಾನವಾಗಿಟ್ಟು ತೆರಳಿದರು. ಚಿತ್ರೋತ್ಸವ ಆಯೋಜನೆಗೆ ಕಾರಣರಾದ ಅರವಿಂದ ನಾವಡ ಸರ್, ಸುಂದ್ರ ಕುಮಾರ್, ಪರಮೇಶ್ವರ ಗುರುಸ್ವಾಮಿ, ದೀಪಾ ಹಿರೇಗುತ್ತಿ, ಕಡಿದಾಳ್ ಪ್ರಕಾಶ್‌ರಿಗೆ ವಂದನೆ, ಅಭಿನಂದನೆ.
2 comments:
ಬರಹ ಚಿತ್ರ ಎರಡೂ ಚೆನ್ನಾಗಿದೆ...
dhanyavada shama
Post a Comment