Thursday, December 31, 2009

Monday, December 28, 2009

ಮೂವರು ಮೂರ್ಖರು, ಒಂದು ಸಿನಿಮಾ !





ನಿಮ್ಮ ಮನಸ್ಸಿಗೆ ತೋಚಿದ್ದು ಮಾಡಿ-ಇಂತಹದೊಂದು ಸಂದೇಶ ಹೊತ್ತು ತೆರೆಗೆ ಬಂದಿದೆ ಆಮೀರ್ ಖಾನ್‌ರ ೩ ಈಡಿಯಟ್ಸ್. ಯುವಜನರ ಕನಸು, ವಾಸ್ತವ, ಶಿಕ್ಷಣ ವ್ಯವಸ್ಥೆ, ಪಾಲಕರ ಒತ್ತಡ...ಹೀಗೆ ನೂರಾರು ವಿಷಯಗಳನ್ನು ಒಂದೇ ಚಿತ್ರದ ಮೂಲಕ ಕಲರ್‌ಫುಲ್ ಆಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಅಂದ ಹಾಗೆ ಈ ಚಿತ್ರದ ಮೂಲ ಪ್ರೇರಣೆ ಖ್ಯಾತ ಲೇಖಕ ಚೇತನ್ ಭಗತ್‌ರ ಬೆಸ್ಟ್ ಸೆಲ್ಲರ್ ಕಾದಂಬರಿ `ಫೈ ಪಾಯಿಂಟ್ ಸಮ್ ವನ್'. ಕಾದಂಬರಿ ಚಿತ್ರವಾಗುವಾಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಚೇತನ್‌ರ ಬರಹದಲ್ಲಿ ಕಾಣುವ ಸ್ವಾರಸ್ಯ, ಕ್ಲೀಷೆ ಹಾಗೂ ವಿನೋದ ಚಿತ್ರದುದ್ದಕ್ಕೂ ಇದೆ.
ಮೂವರು ಸ್ನೇಹಿತರು ನೂರಾರು ಆಕಾಂಕ್ಷೆ ಹೊತ್ತು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಾಗ ನಡೆಯುವ ಘಟನಾವಳಿಗಳು ಚಿತ್ರದ ಹೂರಣ. ಸ್ನೇಹಿತರನ್ನು ಪ್ರೇರೆಪಿಸುವ, ಹೊಸತನಕ್ಕೆ ತುಡಿಯುವ `ಆಲ ಇಸ್ ವೆಲ್' ಎನ್ನುತ್ತ ನಗೆ ಉಕ್ಕಿಸುವ ಯುವಕನಾಗಿ ಆಮೀರ್ ಮಿಂಚಿದ್ದಾರೆ. ಪ್ರತಿ ದೃಶ್ಯದಲ್ಲೂ ವಿಭಿನ್ನ ಹಾವಭಾವದ ಮೂಲಕ ಯುವಕರಷ್ಟೇ ಅಲ್ಲ ಚಿಣ್ಣರ ಮನಸ್ಸನ್ನೂ ಆಮೀರ್ ಕೊಳ್ಳೆ ಹೊಡೆಯುತ್ತಾರೆ. ಇದೊಂಥರ ತಾರೆ ಜಮೀನ್ ಪರ್‌ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ.
ಮುನ್ನಾಭಾಯಿ ಖ್ಯಾತಿಯ ರಾಜ್‌ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರ್‍ಯಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ.
ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದಾರೆ. ವರ್ಷಕ್ಕೊಂದೇ ಚಿತ್ರದಲ್ಲಿ ಅಭಿನಯಿಸುವ ಆಮೀರ್ ಹಾಗೂ ವರ್ಷಕ್ಕೊಂದೇ ಚಿತ್ರ ನಿರ್ದೇಶಿಸುವ ರಾಜ್‌ಕುಮಾರ್ ಈ ವರ್ಷದ ಅಷ್ಟೂ ಪ್ರಶಸ್ತಿಗಳಲ್ಲೂ ತಮ್ಮ ಹೆಸರು ನೋಂದಾಯಿಸಲಿದ್ದಾರೆ. ಶರ್ಮನ್ ಜೋಶಿ, ಮಾಧವನ್, ಕರೀನಾ ಕಪೂರ್ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ಪರಾಶರ್ ಬಹಳ ದಿನಗಳ ನಂತರ ಮತ್ತೆ ನಟಿಸಿದ್ದಾರೆ.
ಈ ಚಿತ್ರವನ್ನೊಮ್ಮೆ ನೋಡಿದರೆ ಕಾಲೇಜು, ಅಲ್ಲಿನ ಸಖಿಯರು, ಟಪೋರಿ ಗೆಳೆಯರು, ಕ್ಯಾಂಟೀನ್...ಹೀಗೆ ಹರೆಯ ಜಮಾನಾ ಕಣ್ಣು ಮುಂದೆ ಬಿಚ್ಚಿಕೊಳ್ಳಲಿದೆ. ಚಿತ್ರದ ಕೊನೆಗೆ ಕಣ್ಣೂ ತೇವಗೊಳ್ಳುತ್ತದೆ. ಹಾಗಾದರೆ ಈ ಚಿತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಜತೆಗೆ `ಫೈವ್ ಪಾಯಿಂಟ್ ಸಮ್ ಒನ್' ಕೂಡ ಓದಿ.



Saturday, October 10, 2009

ಬನ್ನಿ ಸಂತ್ರಸ್ತರಿಗೆ ನೆರವಾಗೋಣ





ಸಂತ್ರಸ್ತರಿಗೆ ನೆರವಾಗೋಣ...


ಬಾಗಲಕೋಟ, ವಿಜಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಈವರೆಗೆ ೬೪ ಜನ ಮೃತಪಟ್ಟಿದ್ದಾರೆ, ೫೦ ಸಾವಿರಕ್ಕೂ ಹೆಚ್ಚು ಮನೆ ಕುಸಿದಿವೆ, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ಬಗ್ಗೆ ನಾನು ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ವಿಶೇಷ ವರದಿಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಸಿನಿಮಾಗೆ ಮೀಸಲಾದ ಬ್ಲಾಗ್‌ನಲ್ಲಿ ಅನಿವಾರ್ಯವಾಗಿ ಬೇರೆ ವಿಷಯಗಳ ಬಗ್ಗೆ ಲೇಖನ ಪ್ರಕಟಿಸಿದ್ದಕ್ಕೆ ಕ್ಷಮೆಯಿರಲಿ. ಬನ್ನಿ ಸಂತ್ರಸ್ತರಿಗೆ ನೆರವಾಗೋಣ, ಅವರಲ್ಲಿ ಬದುಕುವ ಆತ್ಮವಿಶ್ವಾಸ ತುಂಬೋಣ...

Friday, September 18, 2009

ಮರಾಠಿ ಕಿರುತೆರೆಯಲ್ಲಿ ಶಿವಾಜಿ ಅಲೆ !


ಮರಾಠಿ ಕಿರುತೆರೆಯಲ್ಲೀಗ ಹೊಸ ಅಲೆ, ಸ್ಟಾರ್ ಪ್ರವಾಹ್ ಚಾನೆಲ್‌ನಲ್ಲಿ ಮೂಡಿ ಬರುತ್ತಿರುವ ರಾಜಾ ಶಿವ ಛತ್ರಪತಿ ಧಾರಾವಾಹಿ ದೊಡ್ಡ ಬಜೆಟ್‌ನ ಸಿನಿಮಾದಷ್ಟೇ ಸುದ್ದಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ವಿಭಿನ್ನ ಮಾದರಿಯ ಕತೆ, ಸರಳ, ನೇರ ಸಂಭಾಷಣೆ, ಅದ್ಭುತ ಕಲಾ ನಿರ್ದೇಶನ ಹಾಗೂ ಭಾಳ ಚಂದ ಅಭಿನಯ.
ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ಅಮೋಲ್ ಕೊಲ್ಹೆ ಧಾರಾವಾಹಿಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದಾರೆ. ಇಡೀ ಧಾರಾವಾಹಿಯನ್ನು ಆವಾಹಿಸಿರುವುದು ಡಾ.ಅಮೋಲ್ ಹಾಗೂ ಔರಂಗಜೇಬ್ ಪಾತ್ರ ಮಾಡಿರುವ ಶಾಂತಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದ ನಿತಿನ್ ಕಾರ್ಯೇಕರ್. ಇಲ್ಲಿ ಶಿವಾಜಿ ಮಹಾರಾಜರನ್ನು ಬಹುಪರಾಕ್ ಮೂಲಕ ಹೊಗಳುವ, ಓತಪ್ರೋತವಾಗಿ ತೋರಿಸುವ ದೃಶ್ಯಗಳಿಲ್ಲ. ಬದಲು ನೇರ, ಸರಳ ನಿರೂಪಣೆ ಮೂಲಕ ಶಿವಾಜಿ ಮಹಾರಾಜರ ಜೀವನ ಬಿಂಬಿಸಿದ್ದು ಹೈಲೈಟ್. ಶಿವಾಜಿ ವಿರೋಗಳೇ ಶಿವಾಜಿಯನ್ನು ಹೊಗಳುವ, ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳ ಮೂಲಕ ಜೀವಕಳೆ ತುಂಬಲಾಗಿದೆ.
ದೇವದಾಸ್, ಲಗಾನ್ ಚಿತ್ರಗಳ ನಿರ್ಮಾಪಕ ನಿತಿನ್ ಚಂದ್ರಕಾಂತ್ ದೇಸಾಯಿ ಧಾರಾವಾಹಿಯ ನಿರ್ಮಾಪಕರು. ಹೇಮಂತ್ ದೇವಧರ್ ನಿರ್ದೇಶಕರು. ಶಿವಾಜಿ ಮಹಾರಾಜರ ಕೋಟೆಗಳು, ಮಹಾರಾಷ್ಟ್ರದ ದೇಸಿಯತೆ, ಸಂಸ್ಕೃತಿ ಸಾರುವ ಸಂಗೀತದೊಂದಿಗೆ ಮರಾಠಿ ತಿಳಿಯದವರೂ ಕೂಡ ಕುತೂಹಲದಿಂದ ಟಿವಿ ಕಡೆಗೆ ನೋಟ ಹರಿಸುವಂತೆ ಮಾಡಿದೆ ಶಿವಛತ್ರಪತಿ.
ಖ್ಯಾತ ನಟಿ ಮೃಣಾಲ್ ಕುಲಕರ್ಣಿ ಜೀಜಾಬಾಯಿ ಪಾತ್ರದಲ್ಲಿದ್ದರೆ, ಸಾಹಸ ನಿರ್ದೇಶನದ ಹೊಣೆ ಹೊತ್ತಿರುವುದು ಜೋಧಾ ಅಕ್ಬರ್ ಚಿತ್ರದ ಸಾಹಸ ನಿರ್ದೇಶಕ ರವಿ ದಿವಾನ್. ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿರುವ ಈ ಸೀರಿಯಲ್ ಸದ್ಯ ನಂ.೧ ಪಟ್ಟ ಬಿಟ್ಟುಕೊಡುತ್ತಿಲ್ಲ. ಮಹಾನ್ ಯೋಧ, ಪ್ರಜಾ ಪ್ರೇಮಿ ಹಾಗೂ ಧರ್ಮ ರಕ್ಷಕ ರಾಜನನ್ನು ಉತ್ಪ್ರೇಕ್ಷೆಯಿಲ್ಲದೆ ತೋರಿಸಿರುವುದು ಹೆಗ್ಗಳಿಕೆ. ಧಾರಾವಾಹಿಯ ಟೈಟಲ್ ಗೀತೆಗೂ ಕೂಡ ಅಂತರ್ಜಾಲದಲ್ಲಿ ಅಪಾರ ಬೇಡಿಕೆ. ಇಂತಹದೊಂದು ಬೃಹತ್ ಧಾರಾವಾಹಿಯ ಮೂಲಕ ಮರಾಠಿ ಕಿರುತೆರೆಯಲ್ಲಿ ಸುದ್ದಿಗೆ ಕಾರಣವಾಗಿರುವ ಸ್ಟಾರ್ ಪ್ರವಾಹ್ ಚಾನೆಲ್‌ನ ಉದ್ಘಾಟನೆ ಸಂದರ್ಭದಲ್ಲಿ ಸಿಇಓ ಉದಯ್ ಶಂಕರ್ ಹೇಳಿದ ಮಾತು ಹೀಗಿತ್ತು : ರಾಜಾ ಶಿವಛತ್ರಪತಿ ಧಾರಾವಾಹಿ ಮೂಲಕ ಮರಾಠಿ ಕಿರುತೆರೆಯಲ್ಲಿ ಹೊಸ ಬೆಳಕು ಕಾಣಲಿದೆ. ಕಿರುತೆರೆಯನ್ನು ಹಿರಿತೆರೆಯನ್ನಾಗಿಸುವ ಸಾಧ್ಯತೆ ಈ ಸೀರಿಯಲ್‌ಗಿದೆ. ಈ ಮಾತು ಈಗ ನಿಜವಾಗಿದೆ !.

Sunday, September 13, 2009

ವಿನಯ್‌ರಿಂದ ಸಾಧಕರ `ಪಾಠ`!



ಖ್ಯಾತ ನಿರ್ದೇಶಕರು ಮಹಾನ್ ವ್ಯಕ್ತಿಗಳ ಆತ್ಮ ಚರಿತ್ರೆಯ ಸಿನಿಮಾ ಹಾಗೂ ಧಾರಾವಾಹಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಟಿವಿ ಚಾನೆಲ್‌ಗಳಲ್ಲಿ ಆಗಾಗ ಇಣುಕುತ್ತವೆ. ಮಲಯಾಳಂ, ತಮಿಳು ಕಿರುತೆರೆಯಲ್ಲಿ ಇಂತಹ ಕಾರ್ಯಕ್ರಮ ಹೇರಳವಾಗಿವೆ. ವ್ಯಕ್ತಿ ಹಾಗೂ ಜೀವನ ಶೈಲಿ, ಇತಿಹಾಸದ ಬಗ್ಗೆ ಮಾಹಿತಿ ನೀಡುವ ಫಾಕ್ಸ್ ಹಿಸ್ಟರಿ ಚಾನೆಲ್ ಇಂತಹ ಮತ್ತೊಂದು ಕಾರ್ಯಕ್ರಮ ಪ್ರದರ್ಶನಕ್ಕೆ ಸಜ್ಜಾಗಿದೆ. ಖ್ಯಾತ ನಟ, ನಿರೂಪಕ ವಿನಯ್ ಪಾಠಕ್ ಈ ಚಾನೆಲ್‌ಗಾಗಿ ಇತಿಹಾಸದ ಸಾಧಕರ ಮೆಗಾ ಧಾರಾವಾಹಿಗಳ ತುಣುಕು ಹಾಗೂ ಮಾಹಿತಿಯುಳ್ಳ ಕಾರ್ಯಕ್ರಮಕ್ಕೆ ನಿರೂಪಕರಾಗಿದ್ದಾರೆ. ಪ್ರತಿ ಭಾನುವಾರ ರಾತ್ರಿ ೯ಕ್ಕೆ ಹಾಗೂ ವಾರವಿಡೀ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಅಂದ ಹಾಗೆ ಈ ಮೊದಲು ಅನುರಾಗ್ ಕಶ್ಯಪ್ ಜಾಗತಿಕ ಸಿನಿಮಾ ರಂಗದ ಅತ್ಯುತ್ತಮ ನಟರು ಹಾಗೂ ನಿರ್ದೇಶಕರ ಬಗ್ಗೆ ಶೋಕೇಸ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹೊಸ ಕಾರ್ಯಕ್ರಮ ಶೋಕೇಸ್‌ನ ಮುಂದುವರಿದ ಭಾಗ.