Thursday, December 31, 2009

ಶ್ರೀ ಕೃಷ್ಣದೇವರಾಯ ಬಿಡುಗಡೆಗೆ ಸಿದ್ಧ



ಸ್ನೇಹಿತ, ಟಿವಿ೯ ನಿರೂಪಕ ಶಿವಪ್ರಸಾದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾನೆ. ಪ್ರತಿ ವರ್ಷ ಹೊಸ ಸಾಹಸವೊಂದನ್ನು ಮಾಡು ಎಂಬ ಮಾತು ಆತನ ಡೈರಿಯಲ್ಲಿ ದಾಖಲಾಗಿರುತ್ತದೆ. ಈ ಸಂಪ್ರದಾಯದ ಪ್ರಕಾರ ಈ ವರ್ಷವೂ ಮತ್ತೊಂದು ಸಾಹಸದ ಚಾರಣ ಮುಗಿದಿದೆ. ಹೆಗಲಿಗೆ ಕ್ಯಾಮೆರಾ, ಕೈಯಲ್ಲೊಂದು ಪುಸ್ತಕ, ಲ್ಯಾಪ್‌ಟಾಪ್ ಇದ್ದರೆ ಶಿವಾ ಹೊಸ ಸಾಹಸಕ್ಕೆ ಹೊರಟಿದ್ದಾನೆ ಎಂದರ್ಥ. ಹಿಮದಿಂದಾವೃತವಾದ ಅಮರ್‌ನಾಥ್, ಸೈನಿಕರ ಛಳಿಯನ್ನೂ ಬಿಡಿಸುವ ಕಾರ್ಗಿಲ್, ವೇಶ್ಯೆಯರ ದುರ್ಭರ ಬದುಕಿನ ಕಾಮಾಟಿಪುರ, ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ, ಮುಂಬೈನಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ವರದಿಗಳನ್ನು ಹೆಕ್ಕಿ ತಂದವನೀತ.
ಸುಭಾಷ್ ಸಾವಿನ ಸುತ್ತ, ಚಂದ್ರಯಾನ, ಜಲಿಯನ್‌ವಾಲಾಬಾಗ್ ಎಂಬ ಮೂರು ಪುಸ್ತಕಗಳನ್ನು ಈಗಾಗಲೇ ಬರೆದಿದ್ದಾನೆ. ಕರ್ನಾಟಕದ ಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಬಗ್ಗೆ ಹೊಸ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ್ದಾನೆ ಶಿವ. ತಾಳಿಕೋಟೆ, ಹಂಪಿ ಸೇರಿದಂತೆ ಕೃಷ್ಣದೇವರಾಯನ ಇತಿಹಾಸವಿರುವ ಎಲ್ಲ ಸ್ಥಳಗಳಲ್ಲೂ ಓಡಾಡಿದ್ದಾನೆ. ನಾನಾ ಗ್ರಂಥಗಳು, ಪ್ರವಾಸಿಗರ ಡೈರಿಗಳನ್ನೂ ಅಭ್ಯಸಿಸಿ ಈ ಹೊಸ ಪುಸ್ತಕ ಅಣಿಗೊಳಿಸಿದ್ದಾನೆ. ಕೃಷ್ಣದೇವರಾಯನ ಬಗ್ಗೆ ಗೊತ್ತಿರದ ಕೆಲ ಸಂಗತಿಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ವಿಶೇಷ. ಅಂದ ಹಾಗೆ ಜ.೪ ರಂದು ಬೆಂಗಳೂರಿನಲ್ಲಿ ಶಿವಪ್ರಸಾದನ ಹೊಸ ಪುಸ್ತಕ ಬಿಡುಗಡೆಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ಪ್ರಕಾಶ್ ಭಾಗವಹಿಸಲಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾರ್ದಿಕ ಸ್ವಾಗತ, ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ ಬನ್ನಿ, ಭಾಗವಹಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿ.

No comments: