Thursday, December 31, 2009

ಡಾ.ವಿಷ್ಣು ಪ್ರೀತಿ... ಶೇಂಗಾ ಉಂಡೆ !


ಬಾದಾಮಿಯಲ್ಲಿ ನಡೆದ ಹಿಮಪಾತ ಚಿತ್ರದ ಚಿತ್ರೀಕರಣದಲ್ಲಿ ಅಭಿಮಾನಿಯೊಂದಿಗೆ ವಿಷ್ಣು.



ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಬಾದಾಮಿಯಲ್ಲಿ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದರು !.
ಅದು ೧೯೯೭, ಹಿಮಪಾತ ಚಿತ್ರದ ಚಿತ್ರೀಕರಣಕ್ಕಾಗಿ ಸುಹಾಸಿನಿಯವರೊಂದಿಗೆ ವಿಷ್ಣು ಬಾದಾಮಿಯಲ್ಲಿದ್ದರು. ಉದ್ಯಮಿ ಮಹಾಂತೇಶ ಮಮದಾಪುರ ಅವರ ಆಯಿಲ್ ಮಿಲ್‌ನಲ್ಲಿ ಎರಡು ದಿನ ಶೂಟಿಂಗ್ ನಡೆದಿತ್ತು.
ವಿರಾಮದ ವೇಳೆ ವಿಷ್ಣು ಹಾಗೂ ಮಹಾಂತೇಶ ಉಭಯ ಕುಶಲೋಪರಿ ವಿಚಾರಕ್ಕೆ ಕುಳಿತರು. ಬಾಯಿಯ ಸ್ವಚ್ಛತೆಗೆ ಎಣ್ಣೆ ಬಳಸುವ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಆಗಷ್ಟೇ ಖ್ಯಾತಿ ಪಡೆದಿತ್ತು. ಆಯಿಲ್ ಪುಲ್ಲಿಂಗ್‌ನಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದ ವಿಷ್ಣು ಈ ಹೊಸ ಚಿಕಿತ್ಸೆ ಬಂದ ಬಗೆ, ಅದರ ವಿಧಾನ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಶುದ್ಧ ಎಣ್ಣೆ ದೊರಕುವುದಿಲ್ಲ, ನಿಮ್ಮ ಮಿಲ್‌ನ ಸೂರ್ಯಕಾಂತಿ ಎಣ್ಣೆ ಕೊಡಿ ಎಂದರು. ತಾವು ತೆರಳುವಾಗ ಸೂರ್ಯಕಾಂತಿ ಎಣ್ಣೆಯ ಡಬ್ಬಿ ಒಯ್ದರು ಎಂದು ಮಹಾಂತೇಶ ನೆನಪಿಸಿಕೊಳ್ಳುತ್ತಾರೆ.
ಉತ್ತರ ಕರ್ನಾಟಕದ ಖಾದ್ಯಗಳೆಂದರೆ ವಿಷ್ಣು ಕಣ್ಣರಳಿಸುತ್ತಿದ್ದರು. ಮಹಾಂತೇಶರ ಮನೆಯಲ್ಲಿ ಉಪಹಾರಕ್ಕೆ ಬಂದಾಗ ವಿಷ್ಣು ಗಮನ ಹರಿದಿದ್ದು ಶೇಂಗಾ ಉಂಡಿಯೆಡೆಗೆ. ಆಹಾ ಇದು ಚೆನ್ನಾಗಿದೆ ಎಂದ ಸಾಹಸಸಿಂಹ ಉಂಡಿಯನ್ನೇ ಉಪಹಾರವಾಗಿಸಿಕೊಂಡರು. ನಂತರ ಸುಹಾಸಿನಿ, ವಿಷ್ಣು ವಾಪಸ್ಸಾಗುವಾಗ ಶೇಂಗಾ ಉಂಡಿ ಹಾಗೂ ಉತ್ತರ ಕರ್ನಾಟಕದ ನೆನಪು ಜತೆಗಿತ್ತು.
ಹಿಮಪಾತ ಚಿತ್ರೀಕರಣ ಬಾದಾಮಿಯ ಮೇಣಬಸದಿ, ಪಟ್ಟದಕಲ್ಲ, ಐಹೊಳೆ, ವಿಜಾಪುರದ ಗೋಳಗುಮ್ಮಟ, ಬಾರಾಕಮಾನ್‌ಗಳಲ್ಲಿ ನಡೆದಿತ್ತು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ವಿಷ್ಣು ವಿವರವಾಗಿ ಮಾಹಿತಿ ಪಡೆದಿದ್ದರು. ವಿಜಾಪುರದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಅವಳಿ ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಸಾಹಸಸಿಂಹನಿಗೆ ಸಾಧ್ಯವಾಗಲಿಲ್ಲ.

No comments: