Thursday, April 8, 2010

ನಂಗೂ ಬಹುಮಾನ ಬಂತು


ನಾನಾ ಸ್ಪರ್ಧೆಗಳಲ್ಲಿ ಭಾಗವಹಿಸುವುದು ನನ್ನ ಹಳೆಯ ಚಳಿ. ಹೀಗೆ ಐಪಿಎಲ್ ನ ಕೋಲ್ಕತ್ತಾ ನೈಟ್ ರೈದೆರ್ಸ್ ತಂಡದ ನೋಕಿಯಾ ಮೇ ಭಿ ಕೋಚ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕ್ವಿಜ್ ಮಾದರಿಯ ಸ್ಪರ್ಧೆಯಲ್ಲಿ ನನಗೆ ಟಿ ಶರ್ಟ್, ಸಿಪ್ಪೆರ್, ಡಿಯೋ ಹಾಗೂ ಬ್ಯಾಗ್ ಬಹುಮಾನವಾಗಿ ದೊರೆತಿದೆ, ಬಹು ದಿನದ ಕನಸು ಈಡೇರಿದೆ.

Sunday, January 3, 2010

೩ ಈಡಿಯಟ್ಸ್ ವಿವಾದ






ಅದು ನನ್ನದೇ ಕತೆ ಅನ್ನೋದು ಚೇತನ್ ಭಗತ್ ಉವಾಚ. ಹಾಗೇನಿಲ್ಲ ಅದು ನನ್ನ ಸ್ವಂತ ಕತೆ ಅಂತಾರೆ ಕತೆಗಾರ ಅಭಿಜಿತ್ ಜೋಶಿ. ಮಾಧ್ಯಮದವರು ಬಾಯ್ಮುಚ್ಚಿ ಎನ್ನುವುದು ವಿಧು ವಿನೋದ್ ಚೋಪ್ರಾ ಫರ್ಮಾನು. ವಾರವೊಂದರಲ್ಲಿ ೧೮೦ ಕೋಟಿ ರೂ. ಗಳಿಸಿ ವರ್ಷದ ಕೊನೆಯ ಹಿಟ್ ಚಿತ್ರವೆಂಬ ಹಣೆಪಟ್ಟಿ ಅಂಟಿಸಿಕೊಳ್ಳುತ್ತಿರುವ೩ ಈಡಿಯಟ್ಸ್ ಚಿತ್ರದ ತಾಜಾ ವಿವಾದವಿದು.
ಫೈವ್ ಪಾಯಿಂಟ್ ಸಮ್ ವನ್ ಕಾದಂಬರಿ ಆಧರಿಸಿ ಈ ಚಿತ್ರ ನಿರ್ಮಿಸಲಾಗಿದೆ ಎನ್ನುವುದಂತೂ ಪುಸ್ತಕ ಪ್ರಿಯರಿಗೆ ಚೆನ್ನಾಗಿ ಗೊತ್ತು. ಚಿತ್ರದ ಸಣ್ಣ, ಪುಟ್ಟ ಬದಲಾವಣೆ ಹೊರತುಪಡಿಸಿದರೆ ಪಾತ್ರಧಾರಿಗಳೂ ಸೇರಿದಂತೆ ಚಿತ್ರದ ಲೋಕೇಶನ್ ಸಹ ಫೈವ್...ನಂತಿವೆ. ನನ್ನ ಕಾದಂಬರಿಯನ್ನೇ ಭಟ್ಟಿ ಇಳಿಸಿ ನನಗೆ ಕ್ರೆಡಿಟ್ ಕೊಡದಿದ್ದರೆ ಹೇಗೆ ಎನ್ನುವುದು ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಪ್ರಶ್ನೆ. ಚಿತ್ರ ನಿರ್ಮಾಣ ಹಂತದಲ್ಲಿದ್ದಾಗ ಇದು ನನ್ನ ಕಾದಂಬರಿ ಆಧಾರಿತ ಎಂಬುದು ಗೊತ್ತಾಗಿತ್ತು. ನನಗೂ ಟೈಟಲ್ ಕಾರ್ಡ್‌ನಲ್ಲಿ ಕ್ರೆಡಿಟ್ ಕೊಡಬಹುದು ಎಂದುಕೊಂಡಿದ್ದೆ. ಆದರೆ ಸಿನಿಮಾದ ಮಂದಿ ನನ್ನ ಹೆಸರು ಕಾದಂಬರಿಯನ್ನೂ ಮರೆತಿದ್ದಾರೆ. ಅಪಾರ ಅಭಿಮಾನಿಗಳು ಈ ಬಗ್ಗೆ ನನ್ನನ್ನು ಪ್ರಶ್ನಿಸುತ್ತಿದ್ದಾರೆ, ನಾನೇನು ಉತ್ತರ ಕೊಡಲಿ ?. ಚಿತ್ರ ಬಿಡುಗಡೆಗೂ ಮುನ್ನ ನನ್ನನ್ನು ಕರೆದ ವಿಧು ವಿನೋದ್ ಚೋಪ್ರಾ ನಾವು ಸ್ನೇಹಿತರಾಗಿರೋಣ ಎಂದೆಲ್ಲ ಹೇಳಿದ್ದರು. ಈಗ ಅನಾಗರಿಕ ವರ್ತನೆ ಮಾಡುತ್ತಿದ್ದಾರೆ ಎಂಬುದು ಚೇತನ್ ಆರೋಪ.
ಆದರೆ ಚಿತ್ರದ ನಿರ್ಮಾಪಕ ವಿಧು ಹೇಳೋದೇ ಬೇರೆ. ಚಿತ್ರದ ಕತೆ ಅಭಿಜಿತ್ ಜೋಶಿಯದ್ದು. ಫೈವ್...ಗೂ ಇದಕ್ಕೂ ಸಂಬಂಧವಿಲ್ಲ. ಚಿತ್ರ ಕಾದಂಬರಿಗೆ ಹೋಲಿಕೆಯಾದರೆ ನಾವೇನೂ ಮಾಡುವಂತಿಲ್ಲ. ಚೇತನ್ ಪ್ರಚಾರಕ್ಕಾಗಿ ಇಂತಹ ಕೀಳುಮಟ್ಟದ ವಿವಾದ ಹುಟ್ಟುಹಾಕಿದ್ದಾರೆ ಎನ್ನುತ್ತಾರೆ. ಅಂದ ಹಾಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದ ವಿಧು ಬಾಯ್ಮುಚ್ಚಿ ಎಂದು ಗದರಿದ್ದರು. ನಂತರ ಕ್ಷಮೆಯನ್ನೂ ಯಾಚಿಸಿದ್ದಾರೆ. ಕತೆ ಬರೆದ ಅಭಿಜಿತ್ ಜೋಶಿ ಇದು ಸ್ವಂತ ಕತೆ ಎಂದೂ ಸಮರ್ಥಿಸಿಕೊಂಡಿದ್ದಾರೆ.
ಆದರೆ ಈ ಮೂವರ ಹೇಳಿಕೆಗಳ ಮಧ್ಯೆ ಪ್ರಶ್ನೆಯೊಂದು ಉದ್ಭವಿಸುತ್ತದೆ. ಚೇತನ್‌ರಂತಹ ಪ್ರಖ್ಯಾತ ಕಾದಂಬರಿಕಾರ ತನ್ನ ಕಾದಂಬರಿಯನ್ನೇ ಚಿತ್ರವಾಗಿಸಿಕೊಂಡವರ ವಿರುದ್ಧ ಮೊದಲೇ ಯಾಕೆ ವಿರೋಧ ವ್ಯಕ್ತಪಡಿಸಲಿಲ್ಲ ?. ಚಿತ್ರ ಬಿಡುಗಡೆಯಾಗಿ ಹಿಟ್ ಆದ ನಂತರ ಯಾಕೆ ಆಕ್ರೋಶ ಬಂತು ? ಅಷ್ಟಕ್ಕೂ ಫೈವ್...ಚಿತ್ರವಾಗುತ್ತಿರುವ ಬಗ್ಗೆ ತಮ್ಮ ಬ್ಲಾಗ್‌ನಲ್ಲೇ ಚೇತನ್ ಬರೆದುಕೊಂಡಿದ್ದರು. ಚಿತ್ರ ಬಿಡುಗಡೆಯಾಗುವವರೆಗೂ ಯಾಕೆ ಸುಮ್ಮನೆ ಕುಳಿತರು ? ನ್ಯಾಯಾಲಯಕ್ಕೆ ಯಾಕೆ ಮೊರೆ ಹೋಗಲಿಲ್ಲ ? ಎಂಬ ಪ್ರಶ್ನೆಗಳು, ಪ್ರಶ್ನೆಗಳಾಗಿಯೇ ಉಳಿದಿವೆ. ವಿಧು ಕೂಡ ಇನ್ನು ಮುಂದೆ ಚೇತನ್‌ರನ್ನು ಭೇಟಿಯಾಗುವುದಿಲ್ಲ ಎಂಬ ಶಪಥವನ್ನೂ ಮಾಡಿದ್ದಾರೆ. ಹಣ, ಖ್ಯಾತಿ, ಹೆಸರು ಮೂರು ಇರುವ ಈ ಕಾದಂಬರಿಕಾರ, ಆ ಖ್ಯಾತ ನಿರ್ಮಾಪಕ ಹಾಗೂ ಸಂಭಾಷಣೆಕಾರರ ಮಧ್ಯೆ ಜಗಳ ಯಾಕಾಗಿದೆ ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಎಂಬುದು ಚಿತ್ರಪ್ರೇಮಿಗಳ ಪ್ರಶ್ನೆ. ಈ ವಿವಾದದಿಂದ ೩ ಈಡಿಯಟ್ಸ್ ಚಿತ್ರ ನೋಡುವ, ಫೈವ್...ಕಾದಂಬರಿ ಓದುವವರ ಸಂಖ್ಯೆ ಹೆಚ್ಚಾಗಲಿದೆ ಎಂಬುದಂತೂ ಸತ್ಯ. ಅಂದ ಹಾಗೆ ಮೂವರು ಮೂರ್ಖರು ಯಾರು ?


Friday, January 1, 2010

ಸಾಂಗತ್ಯಕ್ಕಿಗ ಒಂದು ವರ್ಷ !


ಗೆಳೆಯರೇ,
ಸಾಂಗತ್ಯ (ಜ.2) ಒಂದು ವರ್ಷಕ್ಕೆ ಕಾಲಿಡುತ್ತದೆ. ಈ ಸಂದರ್ಭದಲ್ಲಿ ಜನವರಿ 16, 17 ರಂದು ಕುಪ್ಪಳ್ಲಿಯಲ್ಲಿ ಮೂರನೇ ಚಿತ್ರೋತ್ಸವ ಹಮ್ಮಿಕೊಂಡಿದೆ. ಚಲನಚಿತ್ರಗಳ ಪ್ರದರ್ಶನ, ಚರ್ಚೆ, ಸಂವಾದವೆಲ್ಲವನ್ನೂ ಆಯೋಜಿಸಲಾಗುತ್ತದೆ. ಇದಕ್ಕೆ ಬರುವವರು ಮೊದಲೇ ತಿಳಿಸಬೇಕು.


ಮುನ್ನೂರು ರೂ. ಪ್ರವೇಶ ಶುಲ್ಕವಿದ್ದು, ಊಟ, ವಸತಿ ಎಲ್ಲವನ್ನೂ ಒದಗಿಸಲಾಗುವುದು. ಚಿತ್ರೋತ್ಸವದ ಮೂಲಕವೇ ಸಿನಿಮಾ ಭಾಷೆಯನ್ನು ಅರಿತುಕೊಳ್ಳುವುದು, ಸಿನಿಮಾ ಪ್ರಶಂಸೆ ಮಾಡುವುದನ್ನು ರೂಢಿಸಿಕೊಳ್ಳುವುದು ಹೀಗೆ...ಹಲವು ಉದ್ದೇಶಗಳಿವೆ. ಈಗಾಗಲೇ ಎರಡು ಚಿತ್ರೋತ್ಸವಗಳು ಒಳ್ಳೆಯ ಅನುಭವವನ್ನು ಕಟ್ಟಿಕೊಟ್ಟಿದ್ದು, ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳ ಪ್ರದರ್ಶನ, ಅವುಗಳ ಕುರಿತ ಚರ್ಚೆ, ಸಿನಿಮಾ ತಾಂತ್ರಿಕ ಅಂಶಗಳ ಬಗ್ಗೆ ಮಾಹಿತಿ ಎಲ್ಲವೂ ಉತ್ಸವದಲ್ಲಿ ಒದಗಿಸಲಾಗುವುದು.

ಜನವರಿ 16 ರಂದು ಬೆಳಗ್ಗೆ 10 ಕ್ಕೆ ಉತ್ಸವ ಉದ್ಘಾಟನೆಗೊಳ್ಳಲಿದ್ದು, ನಂತರ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಸುಮಾರು ಎಂಟು ಚಲನಚಿತ್ರಗಳು ಪ್ರದರ್ಶಿತವಾಗಲಿವೆ. ಜನವರಿ 17 ರ ಸಂಜೆ 5 ಕ್ಕೆ ಉತ್ಸವ ಸಮಾರೋಪಗೊಳ್ಳಲಿದೆ. ಉತ್ಸವಕ್ಕೆ ನಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳುವ ಸಲುವಾಗಿ ಚಿತ್ರ ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಸದ್ಯವೇ ಅವರಿಂದ ಪ್ರತಿಕ್ರಿಯೆ ಲಭ್ಯವಾಗಲಿದೆ.

ಉತ್ಸವಕ್ಕೆ ಸಂಬಂಧಿಸಿದಂತೆ ಏನಾದರೂ ಸಲಹೆಗಳಿದ್ದರೆ ಶೀಘ್ರವೇ ನಮಗೆ ಕಳುಹಿಸಬಹುದು. ನಮ್ಮ ಮೇಲ್ ವಿಳಾಸ saangatya@gmail.com .ಹಾಗೆಯೇ ಅತ್ಯುತ್ತಮ ಚಿತ್ರಗಳಿದ್ದರೆ ಅವುಗಳ ಹೆಸರನ್ನೂ ನಮಗೆ ಕಳುಹಿಸಬಹುದು. ದಯವಿಟ್ಟು ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ನಿರೀಕ್ಷೆ.

ದಯವಿಟ್ಟು, ಬರುವವರು ಒಂದು ಇಮೇಲ್ ಮಾಡಿ. ಇಲ್ಲದಿದ್ದರೆ ಈ ಉತ್ಸವದ ಸಂಚಾಲಕರಾದ ನಿರಂಜನ್ ಕಗ್ಗೆರೆ 98808 33500, ಅಕ್ಷಯ್ ಹೆಗಡೆ-9481 09206, ಪ್ರವೀಣ್ ಹೆಗಡೆ - 98444 91532 ತಿಳಿಸಿ ಹೆಸರು ನೋಂದಾಯಿಸಬಹುದು.
ಧನ್ಯವಾದಗಳೊಂದಿಗೆ
ಸಾಂಗತ್ಯ

ವಿಷ್ಣುಗೆ ಅಮೀರ್ ಶ್ರದ್ಧಾಂಜಲಿ


ಖ್ಯಾತ ನಟ, ಸಾಹಸಸಿಂಹ ವಿಷ್ಣುವರ್ಧನ್ ನಿಧನ ಎಲ್ಲರನ್ನೂ ಕಂಗೆಡಿಸಿದೆ, ಇದಕ್ಕೆ ಬಾಲಿವುಡ್ ಕೂಡ ಹೊರತಲ್ಲ. ಇತ್ತೀಚಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಆಮೀರ್ ಖಾನ್ ಕೂಡ ವಿಷ್ಣು ನಿಧನಕ್ಕೆ ತಮ್ಮ ಬ್ಲಾಗ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಅದು ಹೀಗಿದೆ...
The 3i team is travelling to a number of cities to interact with audiences across the country. Bangalore was the first stop and we had such a lovely time there. The entire team joins me in thanking Bangalore, and all of you who were there at the mall, to give us so much love and affection. It was really overwhelming. Thank you.

The sad note in our happiness was the untimely demise the next day of super star Vishnuvardhan. Mr Vishnuvardhan who is a huge star in Karnataka and has had a prolific career was only 59. Our condolences to his family, to all those who love him, and to all of Karnatka for whom he is such an icon. May his soul rest in peace.

Thursday, December 31, 2009

ಶ್ರೀ ಕೃಷ್ಣದೇವರಾಯ ಬಿಡುಗಡೆಗೆ ಸಿದ್ಧ



ಸ್ನೇಹಿತ, ಟಿವಿ೯ ನಿರೂಪಕ ಶಿವಪ್ರಸಾದ್ ಹೊಸ ಪುಸ್ತಕವೊಂದನ್ನು ಬರೆದಿದ್ದಾನೆ. ಪ್ರತಿ ವರ್ಷ ಹೊಸ ಸಾಹಸವೊಂದನ್ನು ಮಾಡು ಎಂಬ ಮಾತು ಆತನ ಡೈರಿಯಲ್ಲಿ ದಾಖಲಾಗಿರುತ್ತದೆ. ಈ ಸಂಪ್ರದಾಯದ ಪ್ರಕಾರ ಈ ವರ್ಷವೂ ಮತ್ತೊಂದು ಸಾಹಸದ ಚಾರಣ ಮುಗಿದಿದೆ. ಹೆಗಲಿಗೆ ಕ್ಯಾಮೆರಾ, ಕೈಯಲ್ಲೊಂದು ಪುಸ್ತಕ, ಲ್ಯಾಪ್‌ಟಾಪ್ ಇದ್ದರೆ ಶಿವಾ ಹೊಸ ಸಾಹಸಕ್ಕೆ ಹೊರಟಿದ್ದಾನೆ ಎಂದರ್ಥ. ಹಿಮದಿಂದಾವೃತವಾದ ಅಮರ್‌ನಾಥ್, ಸೈನಿಕರ ಛಳಿಯನ್ನೂ ಬಿಡಿಸುವ ಕಾರ್ಗಿಲ್, ವೇಶ್ಯೆಯರ ದುರ್ಭರ ಬದುಕಿನ ಕಾಮಾಟಿಪುರ, ಮಹಾಭಾರತ ಯುದ್ಧ ನಡೆದ ಕುರುಕ್ಷೇತ್ರ, ಮುಂಬೈನಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ವರದಿಗಳನ್ನು ಹೆಕ್ಕಿ ತಂದವನೀತ.
ಸುಭಾಷ್ ಸಾವಿನ ಸುತ್ತ, ಚಂದ್ರಯಾನ, ಜಲಿಯನ್‌ವಾಲಾಬಾಗ್ ಎಂಬ ಮೂರು ಪುಸ್ತಕಗಳನ್ನು ಈಗಾಗಲೇ ಬರೆದಿದ್ದಾನೆ. ಕರ್ನಾಟಕದ ಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಬಗ್ಗೆ ಹೊಸ ಪುಸ್ತಕವನ್ನು ಬಿಡುಗಡೆಗೆ ಅಣಿಗೊಳಿಸಿದ್ದಾನೆ ಶಿವ. ತಾಳಿಕೋಟೆ, ಹಂಪಿ ಸೇರಿದಂತೆ ಕೃಷ್ಣದೇವರಾಯನ ಇತಿಹಾಸವಿರುವ ಎಲ್ಲ ಸ್ಥಳಗಳಲ್ಲೂ ಓಡಾಡಿದ್ದಾನೆ. ನಾನಾ ಗ್ರಂಥಗಳು, ಪ್ರವಾಸಿಗರ ಡೈರಿಗಳನ್ನೂ ಅಭ್ಯಸಿಸಿ ಈ ಹೊಸ ಪುಸ್ತಕ ಅಣಿಗೊಳಿಸಿದ್ದಾನೆ. ಕೃಷ್ಣದೇವರಾಯನ ಬಗ್ಗೆ ಗೊತ್ತಿರದ ಕೆಲ ಸಂಗತಿಗಳನ್ನೂ ಇಲ್ಲಿ ಉಲ್ಲೇಖಿಸಿರುವುದು ವಿಶೇಷ. ಅಂದ ಹಾಗೆ ಜ.೪ ರಂದು ಬೆಂಗಳೂರಿನಲ್ಲಿ ಶಿವಪ್ರಸಾದನ ಹೊಸ ಪುಸ್ತಕ ಬಿಡುಗಡೆಗೊಳ್ಳಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಎಂ.ಪಿ.ಪ್ರಕಾಶ್ ಭಾಗವಹಿಸಲಿದ್ದಾರೆ. ಈ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಮಗೆ ಹಾರ್ದಿಕ ಸ್ವಾಗತ, ಸಮಾರಂಭದ ಆಹ್ವಾನ ಪತ್ರಿಕೆ ಇಲ್ಲಿದೆ ಬನ್ನಿ, ಭಾಗವಹಿಸಿ, ಪುಸ್ತಕ ಸಂಸ್ಕೃತಿ ಬೆಳೆಸಿ.

ಡಾ.ವಿಷ್ಣು ಪ್ರೀತಿ... ಶೇಂಗಾ ಉಂಡೆ !


ಬಾದಾಮಿಯಲ್ಲಿ ನಡೆದ ಹಿಮಪಾತ ಚಿತ್ರದ ಚಿತ್ರೀಕರಣದಲ್ಲಿ ಅಭಿಮಾನಿಯೊಂದಿಗೆ ವಿಷ್ಣು.



ಆರೋಗ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ನಟ ಡಾ.ವಿಷ್ಣುವರ್ಧನ್ ಬಾದಾಮಿಯಲ್ಲಿ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದಿದ್ದರು !.
ಅದು ೧೯೯೭, ಹಿಮಪಾತ ಚಿತ್ರದ ಚಿತ್ರೀಕರಣಕ್ಕಾಗಿ ಸುಹಾಸಿನಿಯವರೊಂದಿಗೆ ವಿಷ್ಣು ಬಾದಾಮಿಯಲ್ಲಿದ್ದರು. ಉದ್ಯಮಿ ಮಹಾಂತೇಶ ಮಮದಾಪುರ ಅವರ ಆಯಿಲ್ ಮಿಲ್‌ನಲ್ಲಿ ಎರಡು ದಿನ ಶೂಟಿಂಗ್ ನಡೆದಿತ್ತು.
ವಿರಾಮದ ವೇಳೆ ವಿಷ್ಣು ಹಾಗೂ ಮಹಾಂತೇಶ ಉಭಯ ಕುಶಲೋಪರಿ ವಿಚಾರಕ್ಕೆ ಕುಳಿತರು. ಬಾಯಿಯ ಸ್ವಚ್ಛತೆಗೆ ಎಣ್ಣೆ ಬಳಸುವ ಆಯಿಲ್ ಪುಲ್ಲಿಂಗ್ ಚಿಕಿತ್ಸೆ ಆಗಷ್ಟೇ ಖ್ಯಾತಿ ಪಡೆದಿತ್ತು. ಆಯಿಲ್ ಪುಲ್ಲಿಂಗ್‌ನಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ವಿವರಿಸಿದ ವಿಷ್ಣು ಈ ಹೊಸ ಚಿಕಿತ್ಸೆ ಬಂದ ಬಗೆ, ಅದರ ವಿಧಾನ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ವಿವರವಾಗಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಶುದ್ಧ ಎಣ್ಣೆ ದೊರಕುವುದಿಲ್ಲ, ನಿಮ್ಮ ಮಿಲ್‌ನ ಸೂರ್ಯಕಾಂತಿ ಎಣ್ಣೆ ಕೊಡಿ ಎಂದರು. ತಾವು ತೆರಳುವಾಗ ಸೂರ್ಯಕಾಂತಿ ಎಣ್ಣೆಯ ಡಬ್ಬಿ ಒಯ್ದರು ಎಂದು ಮಹಾಂತೇಶ ನೆನಪಿಸಿಕೊಳ್ಳುತ್ತಾರೆ.
ಉತ್ತರ ಕರ್ನಾಟಕದ ಖಾದ್ಯಗಳೆಂದರೆ ವಿಷ್ಣು ಕಣ್ಣರಳಿಸುತ್ತಿದ್ದರು. ಮಹಾಂತೇಶರ ಮನೆಯಲ್ಲಿ ಉಪಹಾರಕ್ಕೆ ಬಂದಾಗ ವಿಷ್ಣು ಗಮನ ಹರಿದಿದ್ದು ಶೇಂಗಾ ಉಂಡಿಯೆಡೆಗೆ. ಆಹಾ ಇದು ಚೆನ್ನಾಗಿದೆ ಎಂದ ಸಾಹಸಸಿಂಹ ಉಂಡಿಯನ್ನೇ ಉಪಹಾರವಾಗಿಸಿಕೊಂಡರು. ನಂತರ ಸುಹಾಸಿನಿ, ವಿಷ್ಣು ವಾಪಸ್ಸಾಗುವಾಗ ಶೇಂಗಾ ಉಂಡಿ ಹಾಗೂ ಉತ್ತರ ಕರ್ನಾಟಕದ ನೆನಪು ಜತೆಗಿತ್ತು.
ಹಿಮಪಾತ ಚಿತ್ರೀಕರಣ ಬಾದಾಮಿಯ ಮೇಣಬಸದಿ, ಪಟ್ಟದಕಲ್ಲ, ಐಹೊಳೆ, ವಿಜಾಪುರದ ಗೋಳಗುಮ್ಮಟ, ಬಾರಾಕಮಾನ್‌ಗಳಲ್ಲಿ ನಡೆದಿತ್ತು. ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದ ವಿಷ್ಣು ವಿವರವಾಗಿ ಮಾಹಿತಿ ಪಡೆದಿದ್ದರು. ವಿಜಾಪುರದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಹೊರತುಪಡಿಸಿದರೆ ಅವಳಿ ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಸಾಹಸಸಿಂಹನಿಗೆ ಸಾಧ್ಯವಾಗಲಿಲ್ಲ.

ಆಪ್ತ ಮಿತ್ರನ ನೆರವು...




ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಸಿಂಹನ ಕಲಾ ಪ್ರೀತಿ



ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

Monday, December 28, 2009

ಮೂವರು ಮೂರ್ಖರು, ಒಂದು ಸಿನಿಮಾ !





ನಿಮ್ಮ ಮನಸ್ಸಿಗೆ ತೋಚಿದ್ದು ಮಾಡಿ-ಇಂತಹದೊಂದು ಸಂದೇಶ ಹೊತ್ತು ತೆರೆಗೆ ಬಂದಿದೆ ಆಮೀರ್ ಖಾನ್‌ರ ೩ ಈಡಿಯಟ್ಸ್. ಯುವಜನರ ಕನಸು, ವಾಸ್ತವ, ಶಿಕ್ಷಣ ವ್ಯವಸ್ಥೆ, ಪಾಲಕರ ಒತ್ತಡ...ಹೀಗೆ ನೂರಾರು ವಿಷಯಗಳನ್ನು ಒಂದೇ ಚಿತ್ರದ ಮೂಲಕ ಕಲರ್‌ಫುಲ್ ಆಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ.
ಅಂದ ಹಾಗೆ ಈ ಚಿತ್ರದ ಮೂಲ ಪ್ರೇರಣೆ ಖ್ಯಾತ ಲೇಖಕ ಚೇತನ್ ಭಗತ್‌ರ ಬೆಸ್ಟ್ ಸೆಲ್ಲರ್ ಕಾದಂಬರಿ `ಫೈ ಪಾಯಿಂಟ್ ಸಮ್ ವನ್'. ಕಾದಂಬರಿ ಚಿತ್ರವಾಗುವಾಗ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಚೇತನ್‌ರ ಬರಹದಲ್ಲಿ ಕಾಣುವ ಸ್ವಾರಸ್ಯ, ಕ್ಲೀಷೆ ಹಾಗೂ ವಿನೋದ ಚಿತ್ರದುದ್ದಕ್ಕೂ ಇದೆ.
ಮೂವರು ಸ್ನೇಹಿತರು ನೂರಾರು ಆಕಾಂಕ್ಷೆ ಹೊತ್ತು ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದಾಗ ನಡೆಯುವ ಘಟನಾವಳಿಗಳು ಚಿತ್ರದ ಹೂರಣ. ಸ್ನೇಹಿತರನ್ನು ಪ್ರೇರೆಪಿಸುವ, ಹೊಸತನಕ್ಕೆ ತುಡಿಯುವ `ಆಲ ಇಸ್ ವೆಲ್' ಎನ್ನುತ್ತ ನಗೆ ಉಕ್ಕಿಸುವ ಯುವಕನಾಗಿ ಆಮೀರ್ ಮಿಂಚಿದ್ದಾರೆ. ಪ್ರತಿ ದೃಶ್ಯದಲ್ಲೂ ವಿಭಿನ್ನ ಹಾವಭಾವದ ಮೂಲಕ ಯುವಕರಷ್ಟೇ ಅಲ್ಲ ಚಿಣ್ಣರ ಮನಸ್ಸನ್ನೂ ಆಮೀರ್ ಕೊಳ್ಳೆ ಹೊಡೆಯುತ್ತಾರೆ. ಇದೊಂಥರ ತಾರೆ ಜಮೀನ್ ಪರ್‌ನ ಎರಡನೇ ಭಾಗದಂತಿದೆ. ಅಲ್ಲಿ ಮಕ್ಕಳ ಕನಸುಗಳಿಗೆ ಕಾಮನಬಿಲ್ಲು ಕಟ್ಟಿ ತೋರಿಸಿದ ಅಮೀರ್ ಇಲ್ಲಿ ಯುವಕರ ಮನಸ್ಸನ್ನು ಗಾಳಿಪಟವಾಗಿಸುತ್ತಾರೆ.
ಮುನ್ನಾಭಾಯಿ ಖ್ಯಾತಿಯ ರಾಜ್‌ಕುಮಾರ್ ಇಲ್ಲೂ ಸಂದೇಶಗಳನ್ನು ಪ್ರೇಕ್ಷಕನಿಗೆ ಸಾಗಿಸುತ್ತಲೇ ಸುಂದರ ಕತೆ ಹೆಣೆದಿದ್ದಾರೆ. ರ್‍ಯಾಂಕ್ ನೀಡಿ ಯುವಕರನ್ನು ಕೇವಲ ಉದ್ಯೋಗಿಗಳನ್ನಾಗಿಸುವ ಸಮಾಜ, ಮಕ್ಕಳು ಎಂಜಿನಿಯರ್, ಡಾಕ್ಟರ್ ಮಾತ್ರ ಆಗಬೇಕೆಂಬ ಪಾಲಕರ ಆಸೆ, ಆದರೆ ಈಡೇರದ ಆಸೆಗಳ ಮಧ್ಯೆ ಯುವಕರ ಕಣ್ಣೀರು. ಕಾಲೇಜಿನ ಪ್ರಾಚಾರ್ಯ ವೀರೂ ಸಹಸ್ರಬುದ್ಧೆಯಾಗಿರುವ ಬೊಮ್ಮನ್ ಇರಾನಿ ಮತ್ತೊಂದು ಪ್ರಶಸ್ತಿ ಗೆಲ್ಲುವ ಎಲ್ಲ ಸಾಧ್ಯತೆಗಳೂ ಇವೆ. ಹಾಡುಗಳೂ ಸಹ ಮತ್ತೆ, ಮತ್ತೆ ಗುನುಗುನಿಸುತ್ತವೆ.
ಮೂಲ ಕಾದಂಬರಿಯಲ್ಲಿ ಪ್ರಿನ್ಸಿಪಲ್ ಕಾರು ಬಿಟ್ಟು ಇಳಿಯುವುದಿಲ್ಲ, ಇಲ್ಲಿ ಸೈಕಲ್ ಹೊಡೆಯುತ್ತಾರೆ. ಅಲ್ಲಿ ಹೊಸದಿಲ್ಲಿಯ ಐಐಎಂ ಕಾಲೇಜಿದೆ ಇಲ್ಲಿ ಬರೀ ಎಂಜಿನಿಯರಿಂಗ್ ಕಾಲೇಜಿದೆ. ಇನ್ನಷ್ಟು ಬದಲಾವಣೆಗಳೂ ಇವೆ. ವಿಧು ವಿನೋದ್ ಚೋಪ್ರಾ ತಮ್ಮ ಸ್ವಂತ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಿದ್ದಾರೆ. ವರ್ಷಕ್ಕೊಂದೇ ಚಿತ್ರದಲ್ಲಿ ಅಭಿನಯಿಸುವ ಆಮೀರ್ ಹಾಗೂ ವರ್ಷಕ್ಕೊಂದೇ ಚಿತ್ರ ನಿರ್ದೇಶಿಸುವ ರಾಜ್‌ಕುಮಾರ್ ಈ ವರ್ಷದ ಅಷ್ಟೂ ಪ್ರಶಸ್ತಿಗಳಲ್ಲೂ ತಮ್ಮ ಹೆಸರು ನೋಂದಾಯಿಸಲಿದ್ದಾರೆ. ಶರ್ಮನ್ ಜೋಶಿ, ಮಾಧವನ್, ಕರೀನಾ ಕಪೂರ್ ಮುಖ್ಯಪಾತ್ರದಲ್ಲಿ ಮಿಂಚಿದ್ದಾರೆ. ಪಂಕಜ್ ಪರಾಶರ್ ಬಹಳ ದಿನಗಳ ನಂತರ ಮತ್ತೆ ನಟಿಸಿದ್ದಾರೆ.
ಈ ಚಿತ್ರವನ್ನೊಮ್ಮೆ ನೋಡಿದರೆ ಕಾಲೇಜು, ಅಲ್ಲಿನ ಸಖಿಯರು, ಟಪೋರಿ ಗೆಳೆಯರು, ಕ್ಯಾಂಟೀನ್...ಹೀಗೆ ಹರೆಯ ಜಮಾನಾ ಕಣ್ಣು ಮುಂದೆ ಬಿಚ್ಚಿಕೊಳ್ಳಲಿದೆ. ಚಿತ್ರದ ಕೊನೆಗೆ ಕಣ್ಣೂ ತೇವಗೊಳ್ಳುತ್ತದೆ. ಹಾಗಾದರೆ ಈ ಚಿತ್ರ ಮಿಸ್ ಮಾಡಿಕೊಳ್ಳಲೇಬೇಡಿ. ಜತೆಗೆ `ಫೈವ್ ಪಾಯಿಂಟ್ ಸಮ್ ಒನ್' ಕೂಡ ಓದಿ.



Saturday, October 10, 2009

ಬನ್ನಿ ಸಂತ್ರಸ್ತರಿಗೆ ನೆರವಾಗೋಣ





ಸಂತ್ರಸ್ತರಿಗೆ ನೆರವಾಗೋಣ...


ಬಾಗಲಕೋಟ, ವಿಜಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಗೆ ಈವರೆಗೆ ೬೪ ಜನ ಮೃತಪಟ್ಟಿದ್ದಾರೆ, ೫೦ ಸಾವಿರಕ್ಕೂ ಹೆಚ್ಚು ಮನೆ ಕುಸಿದಿವೆ, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಈ ಬಗ್ಗೆ ನಾನು ಸಂತ್ರಸ್ತರ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ವಿಶೇಷ ವರದಿಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಸಿನಿಮಾಗೆ ಮೀಸಲಾದ ಬ್ಲಾಗ್‌ನಲ್ಲಿ ಅನಿವಾರ್ಯವಾಗಿ ಬೇರೆ ವಿಷಯಗಳ ಬಗ್ಗೆ ಲೇಖನ ಪ್ರಕಟಿಸಿದ್ದಕ್ಕೆ ಕ್ಷಮೆಯಿರಲಿ. ಬನ್ನಿ ಸಂತ್ರಸ್ತರಿಗೆ ನೆರವಾಗೋಣ, ಅವರಲ್ಲಿ ಬದುಕುವ ಆತ್ಮವಿಶ್ವಾಸ ತುಂಬೋಣ...

Friday, September 18, 2009

ಮರಾಠಿ ಕಿರುತೆರೆಯಲ್ಲಿ ಶಿವಾಜಿ ಅಲೆ !


ಮರಾಠಿ ಕಿರುತೆರೆಯಲ್ಲೀಗ ಹೊಸ ಅಲೆ, ಸ್ಟಾರ್ ಪ್ರವಾಹ್ ಚಾನೆಲ್‌ನಲ್ಲಿ ಮೂಡಿ ಬರುತ್ತಿರುವ ರಾಜಾ ಶಿವ ಛತ್ರಪತಿ ಧಾರಾವಾಹಿ ದೊಡ್ಡ ಬಜೆಟ್‌ನ ಸಿನಿಮಾದಷ್ಟೇ ಸುದ್ದಿ ಮಾಡುತ್ತಿದೆ. ಇದಕ್ಕೆಲ್ಲ ಕಾರಣವಾಗಿರುವುದು ವಿಭಿನ್ನ ಮಾದರಿಯ ಕತೆ, ಸರಳ, ನೇರ ಸಂಭಾಷಣೆ, ಅದ್ಭುತ ಕಲಾ ನಿರ್ದೇಶನ ಹಾಗೂ ಭಾಳ ಚಂದ ಅಭಿನಯ.
ಮುಂಬೈನ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಡಾ.ಅಮೋಲ್ ಕೊಲ್ಹೆ ಧಾರಾವಾಹಿಯಲ್ಲಿ ಶಿವಾಜಿ ಮಹಾರಾಜರ ಪಾತ್ರದಲ್ಲಿದ್ದಾರೆ. ಇಡೀ ಧಾರಾವಾಹಿಯನ್ನು ಆವಾಹಿಸಿರುವುದು ಡಾ.ಅಮೋಲ್ ಹಾಗೂ ಔರಂಗಜೇಬ್ ಪಾತ್ರ ಮಾಡಿರುವ ಶಾಂತಿ ಧಾರಾವಾಹಿಯಿಂದ ಪ್ರಖ್ಯಾತಿ ಪಡೆದ ನಿತಿನ್ ಕಾರ್ಯೇಕರ್. ಇಲ್ಲಿ ಶಿವಾಜಿ ಮಹಾರಾಜರನ್ನು ಬಹುಪರಾಕ್ ಮೂಲಕ ಹೊಗಳುವ, ಓತಪ್ರೋತವಾಗಿ ತೋರಿಸುವ ದೃಶ್ಯಗಳಿಲ್ಲ. ಬದಲು ನೇರ, ಸರಳ ನಿರೂಪಣೆ ಮೂಲಕ ಶಿವಾಜಿ ಮಹಾರಾಜರ ಜೀವನ ಬಿಂಬಿಸಿದ್ದು ಹೈಲೈಟ್. ಶಿವಾಜಿ ವಿರೋಗಳೇ ಶಿವಾಜಿಯನ್ನು ಹೊಗಳುವ, ಆಕ್ರೋಶ ವ್ಯಕ್ತಪಡಿಸುವ ದೃಶ್ಯಗಳ ಮೂಲಕ ಜೀವಕಳೆ ತುಂಬಲಾಗಿದೆ.
ದೇವದಾಸ್, ಲಗಾನ್ ಚಿತ್ರಗಳ ನಿರ್ಮಾಪಕ ನಿತಿನ್ ಚಂದ್ರಕಾಂತ್ ದೇಸಾಯಿ ಧಾರಾವಾಹಿಯ ನಿರ್ಮಾಪಕರು. ಹೇಮಂತ್ ದೇವಧರ್ ನಿರ್ದೇಶಕರು. ಶಿವಾಜಿ ಮಹಾರಾಜರ ಕೋಟೆಗಳು, ಮಹಾರಾಷ್ಟ್ರದ ದೇಸಿಯತೆ, ಸಂಸ್ಕೃತಿ ಸಾರುವ ಸಂಗೀತದೊಂದಿಗೆ ಮರಾಠಿ ತಿಳಿಯದವರೂ ಕೂಡ ಕುತೂಹಲದಿಂದ ಟಿವಿ ಕಡೆಗೆ ನೋಟ ಹರಿಸುವಂತೆ ಮಾಡಿದೆ ಶಿವಛತ್ರಪತಿ.
ಖ್ಯಾತ ನಟಿ ಮೃಣಾಲ್ ಕುಲಕರ್ಣಿ ಜೀಜಾಬಾಯಿ ಪಾತ್ರದಲ್ಲಿದ್ದರೆ, ಸಾಹಸ ನಿರ್ದೇಶನದ ಹೊಣೆ ಹೊತ್ತಿರುವುದು ಜೋಧಾ ಅಕ್ಬರ್ ಚಿತ್ರದ ಸಾಹಸ ನಿರ್ದೇಶಕ ರವಿ ದಿವಾನ್. ಕಳೆದ ನವೆಂಬರ್‌ನಿಂದ ಪ್ರಾರಂಭಗೊಂಡಿರುವ ಈ ಸೀರಿಯಲ್ ಸದ್ಯ ನಂ.೧ ಪಟ್ಟ ಬಿಟ್ಟುಕೊಡುತ್ತಿಲ್ಲ. ಮಹಾನ್ ಯೋಧ, ಪ್ರಜಾ ಪ್ರೇಮಿ ಹಾಗೂ ಧರ್ಮ ರಕ್ಷಕ ರಾಜನನ್ನು ಉತ್ಪ್ರೇಕ್ಷೆಯಿಲ್ಲದೆ ತೋರಿಸಿರುವುದು ಹೆಗ್ಗಳಿಕೆ. ಧಾರಾವಾಹಿಯ ಟೈಟಲ್ ಗೀತೆಗೂ ಕೂಡ ಅಂತರ್ಜಾಲದಲ್ಲಿ ಅಪಾರ ಬೇಡಿಕೆ. ಇಂತಹದೊಂದು ಬೃಹತ್ ಧಾರಾವಾಹಿಯ ಮೂಲಕ ಮರಾಠಿ ಕಿರುತೆರೆಯಲ್ಲಿ ಸುದ್ದಿಗೆ ಕಾರಣವಾಗಿರುವ ಸ್ಟಾರ್ ಪ್ರವಾಹ್ ಚಾನೆಲ್‌ನ ಉದ್ಘಾಟನೆ ಸಂದರ್ಭದಲ್ಲಿ ಸಿಇಓ ಉದಯ್ ಶಂಕರ್ ಹೇಳಿದ ಮಾತು ಹೀಗಿತ್ತು : ರಾಜಾ ಶಿವಛತ್ರಪತಿ ಧಾರಾವಾಹಿ ಮೂಲಕ ಮರಾಠಿ ಕಿರುತೆರೆಯಲ್ಲಿ ಹೊಸ ಬೆಳಕು ಕಾಣಲಿದೆ. ಕಿರುತೆರೆಯನ್ನು ಹಿರಿತೆರೆಯನ್ನಾಗಿಸುವ ಸಾಧ್ಯತೆ ಈ ಸೀರಿಯಲ್‌ಗಿದೆ. ಈ ಮಾತು ಈಗ ನಿಜವಾಗಿದೆ !.

Sunday, September 13, 2009

ವಿನಯ್‌ರಿಂದ ಸಾಧಕರ `ಪಾಠ`!



ಖ್ಯಾತ ನಿರ್ದೇಶಕರು ಮಹಾನ್ ವ್ಯಕ್ತಿಗಳ ಆತ್ಮ ಚರಿತ್ರೆಯ ಸಿನಿಮಾ ಹಾಗೂ ಧಾರಾವಾಹಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಟಿವಿ ಚಾನೆಲ್‌ಗಳಲ್ಲಿ ಆಗಾಗ ಇಣುಕುತ್ತವೆ. ಮಲಯಾಳಂ, ತಮಿಳು ಕಿರುತೆರೆಯಲ್ಲಿ ಇಂತಹ ಕಾರ್ಯಕ್ರಮ ಹೇರಳವಾಗಿವೆ. ವ್ಯಕ್ತಿ ಹಾಗೂ ಜೀವನ ಶೈಲಿ, ಇತಿಹಾಸದ ಬಗ್ಗೆ ಮಾಹಿತಿ ನೀಡುವ ಫಾಕ್ಸ್ ಹಿಸ್ಟರಿ ಚಾನೆಲ್ ಇಂತಹ ಮತ್ತೊಂದು ಕಾರ್ಯಕ್ರಮ ಪ್ರದರ್ಶನಕ್ಕೆ ಸಜ್ಜಾಗಿದೆ. ಖ್ಯಾತ ನಟ, ನಿರೂಪಕ ವಿನಯ್ ಪಾಠಕ್ ಈ ಚಾನೆಲ್‌ಗಾಗಿ ಇತಿಹಾಸದ ಸಾಧಕರ ಮೆಗಾ ಧಾರಾವಾಹಿಗಳ ತುಣುಕು ಹಾಗೂ ಮಾಹಿತಿಯುಳ್ಳ ಕಾರ್ಯಕ್ರಮಕ್ಕೆ ನಿರೂಪಕರಾಗಿದ್ದಾರೆ. ಪ್ರತಿ ಭಾನುವಾರ ರಾತ್ರಿ ೯ಕ್ಕೆ ಹಾಗೂ ವಾರವಿಡೀ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಅಂದ ಹಾಗೆ ಈ ಮೊದಲು ಅನುರಾಗ್ ಕಶ್ಯಪ್ ಜಾಗತಿಕ ಸಿನಿಮಾ ರಂಗದ ಅತ್ಯುತ್ತಮ ನಟರು ಹಾಗೂ ನಿರ್ದೇಶಕರ ಬಗ್ಗೆ ಶೋಕೇಸ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹೊಸ ಕಾರ್ಯಕ್ರಮ ಶೋಕೇಸ್‌ನ ಮುಂದುವರಿದ ಭಾಗ.

Thursday, September 10, 2009

ಸಿನಿಮಾ ಅಂದರೆ...




ಸಿನೆಮಾ ಎಂದರೆ ಏನು ? ಅದು ಬದುಕು, ವಾಸ್ತವ, ಭ್ರಮೆ, ಕನಸುಗಳು…ಹೀಗೆ ನೂರಾರು ಪ್ರಶ್ನೆಗಳು ಮುತ್ತುತ್ತವೆ. ಸಿನೆಮಾ ಎಂದ ಕೂಡಲೇ ಬಾಲ್ಯದ ನೆನಪುಗಳು ಕಣ್ಣೆದುರು ಬಿಚ್ಚಿಕೊಳ್ಳುತ್ತವೆ. ಊರಿಗೆ ಬಂದ ಹೊಸ ಸಿನಿಮಾದ ಪೋಸ್ಟರ್ ನೋಡಿ ಚಿತ್ರವೊಂದನ್ನು ಅನುಭವಿಸುವ ಕಾಲವದು. ವಿಷ್ಣುವರ್ಧನ್, ಡಾ.ರಾಜ್‌ಕುಮಾರ್, ಟೈಗರ್ ಪ್ರಭಾಕರ್, ಶಿವರಾಜ್‌ಕುಮಾರ್‌ರಂತಹ ಚಿತ್ರಗಳು ಆಗ ನಮಗೆ ಒಡನಾಡಿ.

ಭಾನುವಾರದ ದಿನ ತಂದೆ ಕೊಟ್ಟ 10 ರೂ. ನಲ್ಲಿ ಚಿತ್ರ ನೋಡಿ, ಮಿರ್ಚಿ ಭಜಿ ತಿಂದು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಆಗಿನ ಸಿನಿಮಾ ಆಕರ್ಷಣೆ. ಹೊಡೆದಾಟ, ಬಡಿದಾಟದ ಚಿತ್ರಗಳತ್ತಲೇ ನಮ್ಮ ಗಮನ. ಶಂಕರ್‌ನಾಗ್‌ರ ಆಕ್ಷನ್ ಚಿತ್ರಗಳು, ವಿನೋದ್ ರಾಜ್‌ರ ಡ್ಯಾನ್ಸ್, ವಜ್ರಮುನಿ ಗಂಭೀರ ಅಭಿನಯ, ದ್ವಾರಕೀಶ್‌ರ ಹಾಸ್ಯ…ಇವಿಷ್ಟು ಸಿನೆಮಾ ಎಂಬುದು ನಮ್ಮ ಭಾವನೆ. ಸಿನೆಮಾ ನೋಡಿ ಬಂದ ನಂತರ ಥೇಟರ್‌ಗಳ ಅಕ್ಕ, ಪಕ್ಕ ದೊರೆಯುತ್ತಿದ್ದ ವೇಸ್ಟ್ ರೀಲುಗಳನ್ನು ಮನೆಗೆ ತಂದು, ಮನೆ ಹೊರಗಿನ ಆವರಣದಲ್ಲಿ ಕನ್ನಡಿ ಇಟ್ಟು ಅದರ ಬೆಳಕು ಒಳಗೆ ಬಿಟ್ಟು, ಹಳೆಯ ಶುಭ್ರ ಲುಂಗಿಯೊಂದನ್ನು ಬಾಗಿಲಿಗೆ ಆನಿಸಿ, ದುರ್ಬೀನಿಗೆ ಬೆಳಕು ಹಾಯಿಸಿ ರೀಲು ಹಿಡಿದರೆ ಮನೆಯಲ್ಲೂ ಸಿನಿಮಾ. ಆದರೆ ಆ ಚಿತ್ರಗಳನ್ನು ಚಲಿಸುವಂತೆ ಮಾಡುವ ಸಾಧ್ಯತೆ ಇರಲಿಲ್ಲವಾದ್ದರಿಂದ ನಮ್ಮದು ಸ್ಥಿರ ಚಿತ್ರಗಳ ಹೋಮ್ ಥಿಯೇಟರ್.

ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಇಂಗ್ಲೀಷ್ ಚಿತ್ರಗಳ ಬಗ್ಗೆ ಆಸಕ್ತಿ ಹೆಚ್ಚಾಯಿತು (ವಯಸ್ಕರ ಚಿತ್ರಗಳೂ ಸೇರಿದಂತೆ). ಇಂಡೋ ಓರಿಯೆಂಟಲ್ ಸಂಸ್ಥೆ ನಿರ್ಮಿಸುತ್ತಿದ್ದ ಜಪಾನಿ, ಚೀನಿ ಹಾಗೂ ಇಂಗ್ಲೀಷ್ ಭಾಷೆಗಳ ಚಿತ್ರಗಳು ನಮ್ಮ ಹಾಟ್ ಫೇವರಿಟ್. ಜಾಕಿ ಚಾನ್, ಜೆಟ್ ಲೀಯಂತಹ ನಾಯಕರ ಕುಂಗ್ ಫೂ, ಕರಾಟೆ ಚಿತ್ರಗಳು ಮನಸ್ಸಿಗೆ ಖುಷಿ ಹಾಗೂ ಕಾಲೇಜಿನಲ್ಲಿ ಹೊಡೆದಾಟಕ್ಕೆ ಸ್ಪೂರ್ತಿ. ಹಿಂದಿ ಸಿನೆಮಾಗಳೆಂದರೆ ಹೊಡೆದಾಟ, ನಟಿಯ ಮೈ ಪ್ರದರ್ಶನ, ಮಧ್ಯೆ ಕಾಮದ ದೃಶ್ಯವಿರಬೇಕು ಎಂಬ ನಿಯಮ. ಅಪ್ರಾಪ್ತರಾದರೂ ವಯಸ್ಕರ ಚಿತ್ರಗಳನ್ನು ನೋಡುವ ಖುಷಿಯೇ ಬೇರೆ. ಚಿತ್ರ ಪ್ರಾರಂಭಗೊಂಡ ನಂತರ ಥೇಟರ್‌ನಲ್ಲಿ ಪಾದಾರ್ಪಣೆ ಮಾಡಿ, ಇಂಟರ್‌ವೆಲ್‌ನಲ್ಲಿ ಶೌಚಾಲಯದಲ್ಲಿ ಅಡಗಿ, ಕೊನೆಯ ದೃಶ್ಯ ಮುಗಿಯುವ ಮೊದಲೇ ಕಾಲು ಕಿತ್ತುವುದು ಆಗಿನ ಹವ್ಯಾಸ.

ಆದರೆ ಸಿನೆಮಾ ಎಂದರೆ ಇಷ್ಟೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು ದೂರದರ್ಶನ ಹಾಗೂ ಡಿಡಿ ಮೂವಿ ಚಾನೆಲ್‌ಗಳು. ದೂರದರ್ಶನದಲ್ಲಿ ವಾರಕ್ಕೊಂದು ಬಾರಿ ಪ್ರಸಾರವಾಗುತ್ತಿದ್ದ ಪ್ರಶಸ್ತಿ ವಿಜೇತ ಚಿತ್ರಗಳೂ, ಡಿಡಿ ಮೂವಿಯಲ್ಲಿ ಪ್ರಸಾರವಾಗುತ್ತಿದ್ದ ಬೇರೆ ದೇಶಗಳ ಚಿತ್ರಗಳೂ ಕಲಾತ್ಮಕ ಚಿತ್ರಗಳ ಬಗ್ಗೆ ಆಸಕ್ತಿ ಬೆಳೆಸಿದವು. ೩೦ರ ಆಸುಪಾಸು ವಯಸ್ಸು ಹೊರಳಾಡುತ್ತಿದ್ದಂತೆ ಅಕಿರಾ ಕುರಾಸೊವಾ, ಮೊಹಮ್ಮದ್, ಶ್ಯಾಂ ಬೆನಗಲ್, ವಿಶಾಲ್ ಭಾರಧ್ವಾಜ್‌ರಂತಹವರು ಮೋಡಿ ಮಾಡಿದರು. ಸಿನೆಮಾ ಸಂದೇಶ ನೀಡಲು ಸಾಧ್ಯವಿಲ್ಲ ಎನ್ನುವುದು ಒಂದಿಷ್ಟು ನಿರ್ದೇಶಕರ ಮಾತು, ಆದರೆ ಚಿತ್ರವನ್ನಷ್ಟೇ ನಿರ್ಮಿಸಿ ಸಂದೇಶವನ್ನು ಜಾಣ ಪ್ರೇಕ್ಷಕರಿಗೆ ಬಿಡುವುದು ಚತುರ ನಿರ್ದೇಶಕರ ಕ್ರಿಯಾಶೀಲತೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಕಮೀನೆ ಚಿತ್ರದ ಫಟಾಕ್ ಹಾಡು ಇಂತಹ ಸಂದೇಶಕ್ಕೊಂದು ಉದಾಹರಣೆ. ಸಭ್ಯತೆಯ ಪರಿಯಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಫಟಾಕ್ ಚಿಕ್ಕಮಕ್ಕಳಲ್ಲೂ ಸುರಕ್ಷಿತ ಲೈಂಗಿಕತೆ ಬಗ್ಗೆ ಜ್ಞಾನ ಮೂಡಿಸಲು ಸಹಕಾರಿ. ಇನ್ನು ಅಕಿರಾ ರಂತಹವರು ಏನೂ ಹೇಳದೇ ಎಲ್ಲವನ್ನೂ ಹೇಳುವ ಸಾಮರ್ಥ್ಯವುಳ್ಳವರು. ಶ್ಯಾಂ ಬೆನಗಲ್ ಜೀವನದ ನಾನಾ ಸಮಸ್ಯೆಗಳನ್ನು ಹಾಸ್ಯದ ಮೂಲಕ ಹೇಳಿದರು. ಪುಟ್ಟಣ್ಣರಂತಹ ಹಿರಿಯರು ದುರಂತವನ್ನೂ ಸುಮಧುರವಾಗಿ ಚಿತ್ರಿಸಿದರು.

ಸಿನೆಮಾ ಎಂದರೆ ಬದುಕು ಹಾಗೂ ಬದುಕಿನ ಸುತ್ತ ಮುತ್ತ ಓಲಾಡುವ ಭಾವನೆಗಳನ್ನು ಪ್ರತಿಬಿಂಬಿಸುವುದು ಎನ್ನುವುದು ನನ್ನ ಭಾವನೆ. ಪೌರಾಣಿಕ, ಸಾಮಾಜಿಕ, ಯುದ್ಧದ ಭೀಕರತೆ, ಪ್ರೇಮ, ಕಾಮ, ಬಡತನ, ಹಸಿವು ಹೀಗೆ ಜೀವನವನ್ನೇ ವಿಭಿನ್ನ ದೃಷ್ಟಿಕೋನಗಳಲ್ಲಿ ತೋರಿಸುವುದು ಸಿನಿಮಾ. ನಾವು ಮಾಡುವ ಅಥವಾ ಮಾಡಲಾಗದ ಸಾಧ್ಯತೆಗಳನ್ನೇ ತೆರೆದಿಡುವುದು ಸಿನೆಮಾ. ಹಾಗಾಗಿ ಸಿನೆಮಾ ಎಂದರೆ ಬದುಕು, ಬದುಕು ಎಂದರೆ ಸಿನಿಮಾ.

Tuesday, August 11, 2009

ಸಾಂಗತ್ಯ ಚಿತ್ರೋತ್ಸವದ ನೆನಪಿನ ರೀಲುಗಳು


ಚರ್ಚೆಯಲ್ಲಿ ಗುರುಪ್ರಸಾದ್, ಗುರುಸ್ವಾಮಿ
]
ಚಿತ್ರೋತ್ಸವದಲ್ಲಿ ಸಿನಿಮಾ ಪ್ರಿಯರು

ಕವಿಶೈಲದಲ್ಲಿ ಚರ್ಚೆ

ಪರಮೇಶ್ವರ್ ಗುರುಸ್ವಾಮಿ ಅವರಿಂದ ಮಾಹಿತಿ...

ಸಾಂಗತ್ಯ ಚಿತ್ರೋತ್ಸವದ ಸವಿ ನೆನಪು...




ಸ್ಥಳ : ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದ ಮಿನಿ ಚಿತ್ರಮಂದಿರ, ಕುಪ್ಪಳ್ಳಿ.
ವೇಳೆ : ಬೆಳಗಿನ ೯ ಗಂಟೆ.
ವಿಭಿನ್ನ ನೆಲೆಯ ಚಿತ್ರಗಳ ವೀಕ್ಷಣೆಗೆ ಮಂಗಳೂರು, ಬೆಂಗಳೂರು, ಮೈಸೂರುಗಳಿಂದ ಬಂದ ಚಿತ್ರಪ್ರೇಮಿಗಳದ್ದೆಲ್ಲ ಸಂಭ್ರಮ, ಸಡಗರ. ಇದಕ್ಕೆಲ್ಲ ಕಾರಣವಾಗಿದ್ದು ಸಾಂಗತ್ಯ ತಂಡದ ಎರಡನೇ ಚಿತ್ರೋತ್ಸವ. ಜನೆವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವದಲ್ಲಿ ರಮ್ಯ ಚಿತ್ರಗಳನ್ನು ನೋಡಿದ್ದ ಚಿತ್ರಾಸಕ್ತರಿಗೆ ಈ ಬಾರಿ ನಾಲ್ಕು ಹಂತಗಳಲ್ಲಿ ಚಿತ್ರ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ತವಕ.
ಷೇಕ್ಸ್‌ಪಿಯರನ್ ಮ್ಯಾಕ್‌ಬೆತ್ ನಾಟಕ ಅಧರಿಸಿದ ಪೊಲೊನ್‌ಸ್ಕಿ ನಿರ್ದೇಶನದ ಮ್ಯಾಕ್‌ಬೆತ್ ಹಾಗೂ ಅಕಿರಾ ಕುರೊಸೊವಾ ನಿರ್ದೇಶಿಸಿದ ಥ್ರಾನ್ ಆಫ್ ಬ್ಲಡ್. ಎರಡೂ ಚಿತ್ರಗಳು ವಿಭಿನ್ನ ನೆಲೆಯವು ಒಂದು ಪಾಶ್ಯಾತ್ಯದ ಕತಾ ಹಂದರ ಹೊಂದಿದ್ದರೆ ಇನ್ನೊಂದು ಏಶಿಯಾ ಪರಂಪರೆಯಲ್ಲಿ ಮ್ಯಾಕ್‌ಬೆತ್‌ನ ಕಥೆಯುಳ್ಳದ್ದು. ಮ್ಯಾಕ್ ಬೆತ್‌ನ ಪಾಪ ಪ್ರಜ್ಞೆ, ಅಕಾರ ಲಾಲಸೆಯನ್ನು ದೃಶ್ಯ ಮಾಧ್ಯಮದಲ್ಲಿ ತೆರೆದಿಟ್ಟ ಚಿತ್ರಗಳನ್ನು ನೋಡಿದ ಶಿಬಿರಾರ್ಥಿಗಳಿಗೆ ಹೊಸ ಅನುಭವ. ನಂತರ ಈ ಚಿತ್ರಗಳ ಬಗ್ಗೆ ನಡೆದ ಎರಡು ಗಂಟೆಯ ಚರ್ಚೆಯಲ್ಲಿ ಎರಡೂ ಚಿತ್ರಗಳ ನಾನಾ ಆಯಾಮಗಳ ಬಗ್ಗೆ ವಿಶ್ವ ದರ್ಶನವಾಯಿತು.
ಭಾರತೀ ಶಂಕರ್ ನಿರ್ದೇಶನದ ಕಾರಂತಜ್ಜನಿಗೊಂದು ಪತ್ರ ನೋಡಿದವರ ಮನ ಸೆಳೆಯಿತು, ಚಿತ್ರದ ಕೊನೆಯ ದೃಶ್ಯ ಎಲ್ಲರಲ್ಲೂ ಚಿಂತನೆಗೆ ಕಾರಣವಾಯಿತು. ಕಡಲ್ಕೊರೆತದಂತಹ ಸಮಸ್ಯೆಯೊಂದಿಗೆ ಸಮಾಜದ ನಾನಾ ಸ್ತರಗಳ ಸಮಸ್ಯೆಗಳನ್ನು ಎದುರಿಟ್ಟ ಚಿತ್ರಕ್ಕೆ ಭರ್ತಿ ಚಪ್ಪಾಳೆ, ಮೆಚ್ಚುಗೆ. ಹಿಟ್ಲರ್ ತನ್ನ ಕಾಲದಲ್ಲಿ ನಡೆಸಿದ ಪಾಶವೀ ಕೃತ್ಯದ ಬಗ್ಗೆ ಬಾಲಕನೊಬ್ಬನ ದೃಷ್ಟಿಯನ್ನು ಬಿಂಬಿಸಿದ್ದು ದ ಬಾಯ್ ವಿತ್ ಸ್ಟ್ರಿಪಡ್ ಪೈಜಾಮಾ. ಚಿತ್ರದಲ್ಲಿ ಮನ ಕಲಕುವ ದೃಶ್ಯಗಳು ಚರ್ಚೆಯಲ್ಲಿ ಮೆಚ್ಚುಗೆಗೆ ಪಾತ್ರವಾದವು. ಕಾರ್ತಿಕ್ ಪರಾಡ್ಕರ್‌ರ ನಾಗ ಮಂಡಲ ಸಾಕ್ಷ್ಯಚಿತ್ರ, ಘೋಸ್ಟ್ ಇನ್ ದಿ ಡಾರ್ಕ್‌ನೆಸ್ ಚಿತ್ರಗಳನ್ನು ವೀಕ್ಷಿಸಿದ ಶಿಬಿರಾರ್ಥಿಗಳು ಭೇಷ್ ಎಂದರು.
ಈ ಬಾರಿ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡು ಮಾರ್ಗದರ್ಶನ ನೀಡಿದ್ದು ಖ್ಯಾತ ನಿರ್ದೇಶಕ ಗುರುಪ್ರಸಾದ್. ನಿರ್ದೇಶಕನಿಗೆ ಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ, ವ್ಯಾಮೋಹವಿರಬೇಕು ಆಗ ಮಾತ್ರ ಒಳ್ಳೆಯ ಚಿತ್ರ ನಿರ್ಮಿಸಲು ಸಾಧ್ಯ ಎಂದ ಅವರು ಚಿತ್ರ ನಿರ್ಮಾಣದ ಬಗ್ಗೆ ಹಲವು ಕುತೂಹಲದ ಸಂಗತಿಗಳನ್ನು ತೆರೆದಿಟ್ಟರು. ಸಾಂಗತ್ಯದ ಚಿತ್ರೋತ್ಸವವನ್ನು ಬೆಂಗಳೂರಿನಲ್ಲಿ ಆಯೋಜಿಸಿದರೆ ಸಹಕಾರ ನೀಡಲು ಸಾಧ್ಯ ಎಂದರು.
ಎರಡು ದಿನಗಳ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರಗಳೊಂದಿಗೆ ಮಲೆನಾಡಿನ ಅದ್ಭುತ ಉಪಹಾರ, ಊಟವಿತ್ತು. ಮತ್ತೊಂದು ಚಿತ್ರೋತ್ಸವಕ್ಕೆ ಬಂದೇ ಬರುತ್ತೇವೆ ಎನ್ನುತ್ತ ಎಲ್ಲರೂ ಚಿತ್ರಗಳ ಸವಿ ನೆನಪಿನ ರೀಲುಗಳನ್ನು ಮನದಲ್ಲಿ ಜೋಪಾನವಾಗಿಟ್ಟು ತೆರಳಿದರು. ಚಿತ್ರೋತ್ಸವ ಆಯೋಜನೆಗೆ ಕಾರಣರಾದ ಅರವಿಂದ ನಾವಡ ಸರ್, ಸುಂದ್ರ ಕುಮಾರ್, ಪರಮೇಶ್ವರ ಗುರುಸ್ವಾಮಿ, ದೀಪಾ ಹಿರೇಗುತ್ತಿ, ಕಡಿದಾಳ್ ಪ್ರಕಾಶ್‌ರಿಗೆ ವಂದನೆ, ಅಭಿನಂದನೆ.

Monday, August 3, 2009

ಜಾಣ ಪ್ರಶ್ನೆಗಳು ಆಲಸಿ ಮಂಜನದ್ದೋ ? ನಿರ್ದೇಶಕರದ್ದೋ ?

ಒಬ್ಬ ಉತ್ತಮ ಚಿತ್ರ ನಿರ್ದೇಶಕ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಿರ್ದೇಶನಕ್ಕೆ ಮುಂದಾಗುತ್ತಾನೆ. ಈ ಪ್ರಶ್ನೆಗಳು ಚಿತ್ರ ನೋಡಿದ ನಂತರ ಪ್ರೇಕ್ಷಕನನ್ನೂ ಕಾಡಬೇಕು. ಹೀಗೆ ಹಲವು ಪ್ರಶ್ನೆಗಳನ್ನಿಟ್ಟುಕೊಂಡು, ಪ್ರೇಕ್ಷಕರ ಮನದಲ್ಲೂ ಹಲವು ಪ್ರಶ್ನೆಗಳನ್ನು ಮೂಡಿಸಿರುವುದು ಗುರುಪ್ರಸಾದ್‌ರ ಎದ್ದೇಳು ಮಂಜುನಾಥ. ಭಾರಿ ಆಲಸಿಯೊಬ್ಬ ಜೀವಿಸುವ ರೀತಿ, ಸಮಾಜದ ವಿಡಂಬನೆಯನ್ನೇ ಮಾಡುತ್ತ ಮತ್ತೆ ನಿದ್ದೆಗೆ ಜಾರುವ ಕಳ್ಳ ಮಂಜ ಸಮಾಜ, ಸಿನಿಮಾ, ರಾಜಕೀಯ, ಪೊಲೀಸ್ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ನಮ್ಮೆದುರು ಹರಡುತ್ತಾನೆ. ಈ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಹೊರಟರೆ ಮಂಜನ ಬಗ್ಗೆ ಕನಿಕರ ಮೂಡುವುದಿಲ್ಲ, ಬದಲಿಗೆ ಅಭಿಮಾನ ವ್ಯಕ್ತವಾಗುತ್ತದೆ. ಪೂರ್ಣ ಲೇಖನ ಓದಿ...

http://saangatya.wordpress.com